

ಅಹಮದಾಬಾದ್: ಪ್ರಿಯಕರನ (BoyFriend) ಮಾತಿಗೆ ಕಟ್ಟುಬಿದ್ದು, ಅಪ್ರಾಪ್ತ ವಯಸ್ಕಳೋರ್ವಳು ತನ್ನ ಮನೆಯ ಲಾಕರ್ ಕದ್ದು ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಗುಜರಾತಿನ ಅಹಮದಾಬಾದಿನ ಶೆಲಾದಲ್ಲಿ ನಡೆದಿದೆ.
ಅಪ್ರಾಪ್ತ ವಯಸ್ಕಳು ಮನೆಯ ಲಾಕರ್ ಕದ್ದು ತನ್ನ ಪ್ರಿಯಕರನೊಂದಿಗೆ (Boyfriend) ಬೈಕ್ನಲ್ಲಿ ಎಸ್ಕೇಪ್ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಾಲಕಿಯ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಕುರಿತು ಮಾಹಿತಿ ನೀಡಿರುವ ಬೋಪಾಲ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 2024ರ ಸೆಪ್ಟೆಂಬರ್ 29ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇತ್ತೀಚಿಗೆ ಬಾಲಕಿಯ ತಂದೆ ಫೈಲ್ ಹುಡುಕಾಡುತ್ತಿದ್ದ ಸಂದರ್ಭದಲ್ಲಿ ಕಬೋರ್ಡ್ನಲ್ಲಿ ಲಾಕರ್ ಇಲ್ಲದಿರುವುದನ್ನು ಗಮನಿಸಿ ಮನೆಯವರನ್ನು ವಿಚಾರಿಸಿ ಆ ಬಳಿಕ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಸಂಶಯದ ಮೇಲೆ ಬಾಲಕಿಯನ್ನು ವಿಚಾರಿಸಿದಾಗ ಆಕೆ ತನಗೆ ಏನು ಗೊತ್ತಿಲ್ಲವೆಂದು ಹೇಳಿದ್ದಳು. ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಳಿಕ ಪ್ರಿಯಕರ ರಿತುರಾಜ್ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಬ್ಬರು ಸೇರಿ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ಮುಂದುವರೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೋಪಾಲ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.