ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಥೆ: ನರ್ತನಶಾಲಾ...| Story writing Competition

Story writing Competition
Published on

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ದ್ವಿತೀಯ ಬಹುಮಾನ ಗಳಿಸಿದ ಕಥೆ.

ನರ್ತನಶಾಲಾ

Story writing Competition
ಶ್ರೀನಿಧಿ ಕೆ. ಧಾರವಾಡ

ಬದುಕು ಬಯಸಿದ ಯಶಸ್ಸು ಸಿಗುವಷ್ಟರಲ್ಲಿ ಅದನ್ನು ಸಾಧಿಸಲು ಪಟ್ಟ ಬವಣೆಗಳು ಆ ಯಶಸ್ಸನ್ನು ಅನುಭವಿಸಿ ಸಂಭ್ರಮಿಸುವ ಮನಸ್ಸಿನ ಸಾರವನ್ನು ಹೀರಿಬಿಟ್ಟಿರುತ್ತದೆ. ಬೇರೆ ಬೇರೆ ಊರುಗಳಲ್ಲಿ ಕ್ಯಾಂಪ್ ಮಾಡಿದಾಗಿನ ನೋಟಿಸ್ ಗಳನ್ನು ಕಾದಿಟ್ಟುಕೊಂಡ ನನಗೆ ಇಂದು ನನಗೆ ರಾಜ್ಯಪ್ರಶಸ್ತಿ ಬಂದ ದಿನಪತ್ರಿಕೆಯ ಪ್ರತಿಯನ್ನು ಎತ್ತಿಟ್ಟುಕೊಳ್ಳಬೇಕು ಅನ್ನಿಸಲಿಲ್ಲ. ಸುಮ್ಮನೆ ಅದನ್ನು ಮೇಜಿನ ಮೇಲಿಟ್ಟು ಒಳಗೆ ಹೋಗಿ ಒಲೆಯ ಮೇಲೆ ಚಹಾ ಮಾಡಲು ಪಾತ್ರೆ ಇಟ್ಟೆ. ಚಹಾ ಕೊತ ಕೊತ ಕುದಿಯುತ್ತಿತ್ತು, ನನ್ನ ಮನಸ್ಸಿನಂತೆ. ನಾನು ರಾಜ್ಯಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಹೋಗಲೇಬೇಕು ಮನಸ್ಸು ಒತ್ತಿ ಹೇಳಿತು. ಇಳಕಲ್ಲಿನಲ್ಲಿ ಕೊಂಡಿದ್ದ ಸಿಲ್ಕಿನ ಅಂಗಿ ಹಾಕಿಕೊಂಡು ರುಮಾಲು ಸುತ್ತಿಕೊಂಡು, ಧೋತರ ಕಚ್ಚೆ ಹಾಕಿ ಉಟ್ಟುಕೊಂಡು.. ಮನಸ್ಸು ಗಹಗಹಿಸಿ ನಕ್ಕಿತು. ಕಣ್ಣುಗಳೆರಡನ್ನು ಅಂಗೈಯಿಂದ ಮುಚ್ಚಿಕೊಂಡೆನು. ಮನದ ತುಂಬಾ ಚದುರಿದ ಚಿತ್ರಗಳು.....

ರಂಗದ ಮೇಲೆ ಮಂದಬೆಳಕು ಮೂಡತೊಡಗಿತು. “ನಿಯಮದಂತೆ ನಾವೆಲ್ಲಾ ವನವಾಸ ಕಳೆದಾಯ್ತು ಸೋದರರೇ ಈಗ ಒಂದು ವರ್ಷ ಕಾಲ ಅಜ್ಞಾತವಾಸಕ್ಕೆ ಸಿದ್ಧರಾಗಿ, ನಾವೆಲ್ಲರೂ ವಿರಾಟನಗರಕ್ಕೆ ಹೋಗೋಣ, ಪಾರ್ಥ ನೀನು ಹೇಗೆ ನಿನ್ನ ಅಸ್ಮಿತೆಯನ್ನು ಮುಚ್ಚಿಕೊಳ್ಳುತ್ತೀಯಾ?’ ಎಂದು ಯುಧಿಷ್ಠಿರನ ಪಾತ್ರಧಾರಿ ಕೇಳಿದನು. “ಅಗ್ರಜಾ, ನನ್ನ ಜನಕ ಇಂದ್ರನ ಸ್ತ್ರೀ ಊರ್ವಶಿಯು ಕೊಟ್ಟ ಶಾಪದ ಫಲವನ್ನು ಅನುಭವಿಸುವ ಕಾಲ ಪ್ರಾಪ್ತವಾಯಿತು ಎಂದೆನಿಸುತ್ತದೆ, ನಾನು ವಿರಾಟನ ನರ್ತನಶಾಲೆಯಲ್ಲಿ ನಟುವಾಂಗನಾಗುತ್ತೇನೆ, ರೋಮ ರೋಮಗಳಲ್ಲಿಯೂ ಪೌರುಷವನ್ನು ಸೂಸುವ ನನ್ನೀ ಕಾಯವನ್ನು ಸೀರೆಯಲ್ಲಿ ಸುತ್ತಿ ಬೃಹನ್ನಳೆಯಾಗುತ್ತೇನೆ, ನೋಡುವೆಯಾ ನನ್ನ ಲಾವಣ್ಯ ಲಾಲಿತ್ಯದ ನಡೆ” ಎನ್ನುತ್ತಾ ನಡು ಬಳುಕಿಸುತ್ತಾ ಎರಡು ಹೆಜ್ಜೆ ಮುಂದಿಟ್ಟು ಬಂದು ಕೊರಳು ಕೊಂಕಿಸಿ ಗಲ್ಲದ ಮೇಲೆ ಕೈಯಿಟ್ಟುಕೊಂಡೆ. ವೀಕ್ಷಕರ ಗುಂಪಿನಿಂದ ಚಪ್ಪಾಳೆ, ಶಿಳ್ಳೆ, ತೂರಿ ಬಂದ ನಾಣ್ಯಗಳು...ಹಾ ಯಾವ ನಟನಿಗಾದರೂ ತನ್ನ ಅಭಿನಯ ಜನರ ಮನಕ್ಕೆ ತಲುಪಿದರೆ ಸಂತಸವೇ ಆಗಬೇಕು ಆದರೆ ನನಗೆ ಮಾತ್ರ ಯಾವತ್ತೂ ಜನರ ಅಭಿಮಾನ, ಪ್ರಶಂಸೆ ಕುಹಕವೇ ಎಂದೆನಿಸುತ್ತಿತ್ತು.

ಯಾರದೋ ಸಂಭಾಷಣೆ ಕಿವಿಯಲ್ಲಿ ಅನುರಣಿಸಿದಂತೆ ಅನ್ನಿಸುತ್ತಿತ್ತು. “ ರಕ್ತರಾತ್ರಿ ನಾಟಕದಾಗ ನಮ್ಮ ಸುಭದ್ರಮ್ಮಾ ಮನ್ಸೂರ್ ದ್ರೌಪದಿ ಪಾತ್ರ ಹೆಂಗೋ ಹಂಗೇ ನಮ್ಮ ಕಾಂತಾಚಾರಿ ನರ್ತನಶಾಲಾ ನಾಟಕದಾಗ ಬೃಹನ್ನಳೆ ಪಾತ್ರ. ನಮ್ಮ ಬಸಪ್ಪ ಶಾಸ್ತ್ರಿಗಳು ಈ ನಾಟಕ ಬರದಾಗ ಈ ಪಾತ್ರಕ್ಕೆ ಸರಿಯಾದವನ್ನ ಶ್ಯಾನೇ ಹುಡುಕಾಡಿದ್ರು ಅಂತೀನಿ. ಯಾವೋ ಆಡಂಗಿಗಳನ್ನ ತಂದು ಬೃಹನ್ನಳೆ ಅಂತ ನಿಲ್ಲಿಸಾದೇನೂ ದೊಡ್ಡದಲ್ಲ, ಆದರೆ ಆ ಪಾತ್ರ ಮಾಡಲಿಕ್ಕೆ ತಕ್ಕ ಶರೀರ ಇರಬೇಕು. ಅರ್ಜುನ ಅಂದ್ರೆ ಏನು ಗಂಡುಗಲಿ ಗಾಂಢೀವಿ, ಆದರೆ ಶಾಪದ ಬದುಕು ತೀರಿಸಲಿಕ್ಕೆ, ಅಣ್ಣ ಸೋತ ಪಣದ ಬೆಲೆ ಕಟ್ಟಲಿಕ್ಕೆ ಒಂದು ವರ್ಷ ಆ ಬಾಳು ಬಾಳ್ತಾನೆ, ಅದಕ್ಕೆ ತಕ್ಕನಾದ ದೇಹ, ಅಂಗ ಸೌಷ್ಟವ, ಎತ್ತರ, ನಿಲುವು, ಗಾಂಭೀರ್ಯ ಎಲ್ಲಾ ಇರಬೇಕು, ಗಂಡು ಹೆಣ್ಣಾಗಿ ನಟಿಸಬೇಕು ಅಷ್ಟೇ, ಹೆಣ್ಣಿಗನನ್ನು ತಂದು ಕುಣಿಸಬಾರದು ಅನ್ನೋದು ಅವರ ಆಶಯ. ಈ ಕಾಂತಾಚಾರಿನೂ ಆವಾಗ್ಗೆ ಪಾತ್ರ ಹುಡುಕಿಕೊಂಡು ಚಿತ್ರದುರ್ಗ ದಾವಣಗೆರೆ ತಿರುಗಾಡೋನು, ನೋಡೋಕೆ ಎತ್ತರವಾಗಿ, ಬೆಳ್ಳಗೆ ಒಳ್ಳೆ ನಾಯಕನ ಪಾತ್ರಕ್ಕೆ ತಕ್ಕನಾಗೇ ಇದ್ದಬಿಡು. ಇವನ ಅದೃಷ್ಟ ಅಂತೀಯೋ, ದುರಾದೃಷ್ಟ ಅಂತೀಯೋ ನಂಗಂತೂ ಗೊತ್ತಿಲ್ಲ, ಈ ಪಾತ್ರ ಮಾಡದಿಕ್ಕೆ ಮನಸ್ಸಿರದಿದ್ದರೂ ಅವನ ಹೆಂಡತಿ ಆಗಬೇಕು ಅಂತಿದ್ದವಳು ನೀನು ಹಿಂಗೆ ದುಡೀದೇ, ದುಃಖ ಪಡದೆ ಬೆಳಗಾಗೆದ್ದು ಯಾವುದು ಕಟಿಂಗ್ ಶಾಪಿಗೆ ಹೋಗಿ ಯಪ್ಪಾ ಯಣ್ಣಾ ಅಂದು ಮುಖಕ್ಕೆ ಬೌ ಅಂತ ಪೌಡರ್ ಹಕ್ಕೊಂಡು, ಏರಿಸಿ ತಲೆ ಬಾಚಿಕೊಂಡು ಹೋಗಿ ನಂಗೆ ಹೀರೋ ಪಾರ್ಟು ಕೊಡ್ರಿ ಅಂದರೆ ನೀನೇನು ಎನ್ಟಿಆರ್ ಮೊಮ್ಮಗನೇ, ಬಂದ ಪಾತ್ರ ಮೊದಲು ನೆಟ್ಟಗೆ ಮಾಡಿಕೆಂತಾ ಹೋಗು, ನಿನಗೆ ತಾಕತ್ತಿದ್ದರೆ ಸಣ್ಣ ಪಾತ್ರ ಆದರೂ ಜನ ಗುರುತಿಸಿ ಮತ್ತೆ ಹೀರೋ ಪಾತ್ರ ಕೊಟ್ಟೇ ಕೊಡ್ತಾರೆ ಅಂತಂತೆ. ಸರಿ ಇವನಿಗೂ ದುಡಿಯೋದು ಜರೂರಿತ್ತು ಅನ್ನು. ಬಸಪ್ಪ ಶಾಸ್ತ್ರಿಗಳೂ ಹೇಳಿದ್ದರು ಇದೇ ಕಥೆ ತೆಲುಗಿನ್ಯಾಗೆ ಸಿನಿಮಾ ಮಾಡ್ಯಾರೆ ಎನ್.ಟಿ. ರಾಮಾರಾವ್ ಮಾಡಿದ್ದರು ಈ ಪಾತ್ರ ಅಂದಿದ್ದರು. ಹಿಂಗಾಗಿ ಮನಸ್ಸಿಟ್ಟೇ ಆ ಪಾತ್ರಕ್ಕೆ ನಾಟ್ಯ, ಲಾಲಿತ್ಯ ಕಲಿತು ಮೊದಲ ಪ್ರದರ್ಶನದಾಗೇ ಮಿಂಚಿ ಬಿಟ್ಟ. ಆಮೇಲೆ ತಗೋ, ನರ್ತನಶಾಲಾ ಅಂದರೆ ಕಾಂತಾಚಾರಿ, ಕಾಂತಾಚಾರಿ ಇದ್ದರೆ ನರ್ತನಶಾಲಾ ಅನ್ನೋ ಹಂಗೆ ಆಗಿಬಿಟ್ಟಿತು. ಕೈ ತುಂಬಾ ದುಡ್ಡು ಬರೋದಿಕ್ಕೆ ಶುರು ಆಗಿತ್ತು, ತಾನು ಮಾಡಿದ್ದು ಸರಿಯೋ ತಪ್ಪೋ ಅಂತ ಆತನಿಗೆ ಯೋಚನೆ ಮಾಡಲಿಕ್ಕೆ ಸಿಗದಷ್ಟು ಷೋಗಳು, ಕ್ಯಾಂಪುಗಳು. ಅವನಿಗೆ ಮೊದಲ ಹೊಡೆತ ಬಿದ್ದಿದ್ದು ಯಾವಾಗ ಗೊತ್ತಾ, ಯಾವಳ ಸಲುವಾಗಿ ಅವನು ದುಡ್ಡು ದುಡಿಯಲಿಕ್ಕೆ ಬಣ್ಣ ಹಚ್ಚಿ ಬೃಹನ್ನಳೆ ಆಗಿದ್ದನೋ ಅವಳೇ ಇಂಥಾ ಹೆಣ್ಯಾ ಕೂಟ್ಯಾನ್ನ ನಾ ಲಗ್ನ ಆಗೂಂಗಿಲ್ಲ ಅಂತ ಬ್ಯಾರೆ ಹುಡುಗನ್ನ ಲಗ್ನ ಆದಾಗ”

ದಿಗ್ಗನೆ ಎಚ್ಚರ ಆಯಿತು, ಚಹಾ ಕಪ್ಪಿನೊಳಗೆ ಬಸಿದುಕೊಂಡು ಬಂದು ಕುರ್ಚಿಯ ಮೇಲೆ ಕುಳಿತು ಗುಟುಕರಿಸತೊಡಗಿದೆನು. ಗೋಡೆಯ ಮೇಲೆ ತೂಗು ಹಾಕಿದ್ದ ಫೋಟೋದತ್ತ ನನ್ನ ಗಮನ ಹೋಯಿತು. ನಾನು, ನನ್ನ ಹೆಂಡತಿ, ನನ್ನ ಮಗಳು. ಅವಳನ್ನು ಮರೆತು ಈ ಹುಡುಗಿ ಬಡವರ ಮನೆಯವಳಾದರೂ ಬಾಳಿಕೊಂಡು ಹೋಗಿಯಾಳು ಅಂತ ಮದುವೆಯಾಗಿದ್ದೆ. ನಮ್ಮ ಪುಟ್ಟಿಯ ಮೊದಲ ವರ್ಷದ ಹುಟ್ಟಿದ ಹಬ್ಬ. ಕಂಪನಿ ಮಾಲಿಕರ ಹತ್ತಿರ ಅಡ್ವಾನ್ಸ್ ಪಗಾರ ತಗೊಂಡು ಹೋಗಿದ್ದೆ, ಸಂಜೆ ಷೋ ಹೊತ್ತಿಗೆ ಬೇಗ ಬಂದು ಬಿಡುತ್ತೀನಿ ಅಂತ. ಅವಳು ಬೇಡಿದ್ದ ಗಾಡಿಧಡಿ ಸೀರೆ ಕೊಡಿಸಲಿಕ್ಕೆ ಅಂತ ಸೀರೆ ಅಂಗಡಿಗೆ ಕರೆದುಕೊಂಡು ಹೋಗಿದ್ದೆ. ಈ ನಶ್ಯದ ಬಣ್ಣದ ಒಡಲಿಗೆ ಮೆಂತ್ಯೆದ ಹಳದಿ ಅಂಚಿನ ಸೀರೆ ಚೆಂದ ಅದಲ್ಲಾ ಅಂತ ನನಗೆ ತೋರಿಸಿದ್ದಳು, ಮತ್ತೆ ಅದರ ಬೆಲೆ ನೋಡಿ “ಇರಲಿಬಿಡ್ರಿ ಯಾವುದರೇ ಸಾದಾ ನೂಲಿನ ಸೀರಿ ತಗೋರಿ ಸಾಕು” ಅಂದಿದ್ದಳು. “ಕಿಮ್ಮತ್ತು ಯಾಕ ನೋಡ್ತಿ ನಿನಗೆ ಪಸಂದ ಐತಿ ಹೌದಲ್ಲೋ, ಕೈಯ್ಯಾಗ ಹಿಡಿದಿಂದ ಧಾರಣಿ ತುಟ್ಟಿ ಆತು ಅಂತ ಕೆಳಗಿಟ್ಟರೆ ನಮ್ಮ ಕಿಮ್ಮತ್ತೇನು ಉಳೀತು, ಮನುಷ್ಯಾನ ಮನಸ್ಸಿಗೆ ಹಿಡಿಸಿದ್ದು ತಗೊಂಬಿಡಬೇಕಾ ದುಡ್ಡೇನು ಇವತ್ತು ಇರತೈತಿ ಇರಲಿಕ್ಕಿಲ್ಲ, ಆದರೆ ಉಡಬೇಕು ತೊಡಬೇಕು ಅನ್ನೋ ಆಶಾ ಹಿಂಗಾ ಖಾಯಂ ಇರಂಗಿಲ್ಲ” ಅಂದು ಕೊಡಿಸಿದ್ದೆ. ಅಲ್ಲಿಯವರೆಗೂ ಎಲ್ಲಾ ಚೆನ್ನಾಗಿಯೇ ಇತ್ತು. ಆದರೆ ಆ ಅಂಗಡಿಯವನು ಅಲ್ಲಿಗೆ ಸುಮ್ಮನಾಗಲಿಲ್ಲ. “ಇರಲಿ ತಗೋರಿ ಬಾಯೋರಾ, ಮುಂಜಾನೆ ಹೊತ್ತು ನೀವು ಉಟುಗೋರಿ, ಸಂಜಿಗೆ ನಿಮ್ಮ ಮನಿಯವರಿಗೆ ಉಡುಸ್ರಿ, ರಂಗದ ಮ್ಯಾಲ ಝಗಝಗ ಬೆಳಕಿಗೆ ಈ ರೇಷ್ಮಿ ಧಡಿ ಸೀರಿ ಚಮಕ್ಕು ನೋಡಿ ಇನ್ನೂ ಒಂದೆರೆಡು ಸಿಕ್ಕಾ ಜಾಸ್ತಿ ತೂರುತಾರ ಜನ, ಈ ಸೀರಿ ಧಾರಣಿ ಒಂದು ತಿಂಗಾಳಾಗ ಹಂಗ ತೂರಿದ ಸಿಕ್ಕಾದೊಳಗ ಸಿಕ್ಕುಬಿಟ್ಟೀತು” ಎಂದನು. ನನಗೆ ಕೆಂಡದಂತೆ ಕೋಪ ಬಂದಿತ್ತು. “ನೀನು ಸೀರಿ ಮಾರುತ್ತಿ, ಸೀರಿ ಉಡೋರ ಬಗ್ಗೆ ಹಿಂಗ ಹಗುರ ಮಾತಾಡಬ್ಯಾಡ” ಅಂದಿದ್ದೆ. “ಏಯ್ ಇರಲಿ ಕಂಡೀನಿ ನಡೀಲೇ ಬೃಹನ್ನಳಾ, ಹೆಣಮಕ್ಕಳು ಉಡಬೇಕು ಸೀರಿ, ಅವರಿಗೆ ಗೌರವ ಕೊಟ್ಟೇನು, ನಿನ್ನ ಹಂಗ ಸೀರಿ ಉಟ್ಟು ಕುಣಿಯೋ ಲಜ್ಜಗೇಡಿಗೆ ಯಾರು ಕಿಮ್ಮತ್ತು ಕೊಡ್ತಾರೋ ಕಿಸಬಾಯಿ, ಬೇಕಾದರೆ ಒಯ್ಯಿ, ಇಲ್ಲಿ ಕಟ್ಟಿ ಇಳಿದು ನಡಿ” ಎಂದಿದ್ದನು. ಅವಮಾನಕ್ಕೆ ಕಣ್ಣು ಕತ್ತಲೆ ಬಂದಿತ್ತು. ನನಗಿಂತಲೂ ಮೊದಲು ನನ್ನ ಹೆಂಡತಿ ಮಗುವನ್ನು ಎತ್ತಿಕೊಂಡು ಅಳುತ್ತಾ ಮನೆಗೆ ಹೋಗಿದ್ದಳು. ಆ ದಿನ ದಾರಿಯಲ್ಲಿ ನನ್ನ ನೋಡಿ ಜನ “ಏಯ್ ಕಾಂತಾಚಾರಿ, ಕಾಂತೇ ನೀ ಏಕಾಂತದಿ ಬಾ ಎಂದು ಯಾಕೆ ಹೇಳಿದ ದೊರೆಯು ಹಾಡಿಗೆ ಎರಡು ಹೆಜ್ಜಿ ಹಿಂಗನ್ನು ನೋಡಾಮು”ಎಂದಿದ್ದು ಕಿವಿಯಲ್ಲಿ ಕಾದ ಸೀಸ ಹೊಯ್ದಂತೆ ಅನ್ನಿಸಿತ್ತು.

ನನಗೆ ಬೇರೆ ಪಾತ್ರ ಕೊಡ್ರಿ ಮಾಸ್ಟರೇ ನಾನು ಬೇರೆ ಪಾತ್ರಗಳೂ ಸೈತ ಛಲೋನೇ ಮಾಡ್ತೀನಿ ಅಂತ ಅಂಗಲಾಚಿ ಬೇಡಿಕೊಂಡಿದ್ದೆ. ನೀನು ಮಾಡ್ತಿ ತಮ್ಮಾ ಆದರೆ ನೋಡ್ತೀನಿ ಅನ್ನೋರು ಬೇಕಲ್ಲಾ, ಈಗ ನೀನು ಚಲಾವಣೆಯೊಳಗಿರೋ ಸಿಕ್ಕಾ, ಅದಕ್ಕೆ ಸಾಕ್ಷಿ ನೀನು ಗೆಜ್ಜೆ ಕಟ್ಟಿಗ್ಯೆಂಡು “ಕಾಂತೇ ನೀ ಏಕಾಂತದಿ ಬಾರೆಂದು ಯಾಕೆ ಕರೆದು ದೊರೆಯು” ಅಂತ ಮೈ ಹೊಳ್ಳಿಸಿ ಕುಣಿದರೆ ನಿನ್ನ ಮ್ಯಾಲೆ ತೂರೋ ಸಿಕ್ಕಾಗಳೇ ಸಾಕ್ಷಿ, ಬೆಳಕಿದ್ದಾಗಲೇ ಮನೆ ಸ್ವಚ್ಛ ಇಟ್ಟುಗೋಬೇಕು, ಈಗೊಂದೆರೆಡು ವರ್ಷ ಹಿಂಗೆ ದುಡಿಕಿ ಇದ್ದೀತು, ಗಾಳಿ ಬಿಟ್ಟಾಗ ತೂರಿಕ್ಯೆಂಬೋದೋ ಬುದ್ಧಿವಂತಿಕೆ, ನಾವೂ ಸದಾರಮೆ, ಭೂಕೈಲಾಸ ಯಾವ ನಾಟಕ ಆಡಿದರೂ ಗಲ್ಲಾ ತುಂಬಂಗಿಲ್ಲ, ನಮ್ಮ ಕಂಪನಿ ಅಂದರೆ ನರ್ತನಶಾಲಾ, ನರ್ತನಶಾಲಾ ಅಂದರೆ ಬೃಹನ್ನಳಾ ಪಾತ್ರ, ಬೃಹನ್ನಳಾ ಪಾತ್ರ ಅಂದರೆ ಕಾಂತಾಚಾರಿ, ಕಾಂತಾಚಾರಿ ಅಂದರೆ ಕಾಂಚಾಣ, ಕಾಂಚಾಣ ಕಾರ್ಯಸಿದ್ಧಿ. ಹಿಂಗಾಗಿ ಇವೆಲ್ಲಾ ಬಿಡು, ನಾನು ಆ ಪಾತ್ರ ಪೋಷಿಸ್ತೀನಿ, ಈ ಪಾತ್ರ ಪೋಷಿಸ್ತೀನಿ ಅನ್ನೋದೆಲ್ಲಾ ಹೊಟ್ಟೆ ತುಂಬಿದೋರ ಷೋಕಿ, ನಾವು ಮೊದಲು ನಮ್ಮ ಹೊಟ್ಟಿ ಪೋಷಿಸ್ಕೋಬೇಕು, ನಮ್ಮ ನಂಬಿದವರ ಹೊಟ್ಟಿ ಪೋಷಿಸಬೇಕು. ಇಲ್ಲದ್ದು ಬಿಟ್ಟು, ಬಣ್ಣ ಹಚ್ಚಿಕೋ ನಡಿ, ಇವತ್ತು ಷೋಗೆ ಡಿಸಿ ಸಾಹೇಬರು ಬರುತಾರ, ಅವರಿಗೆ ಸನ್ಮಾನ ಮಾಡೋವಾಗ ನೀನೇ ಹಾರ ಹಾಕಬೇಕು, ಆಮ್ಯಾಲ ಸನ್ಮಾನ ಮಾಡೋವಾಗಿನ ನಿನ್ನ ಪೇಟೆಂಟ್ ಹಾಡೈತಲ್ಲಾ ಮೆಹಮಾನ್ ಹಮಾರಾ ಅದರಾಗೆ ಇವತ್ತು ಡಿಸಿ ಸಾಹೇಬ್ ಪ್ಯಾರಾ ಅಂತ ಒಂದು ಸಾಲು ಸೇರಿಸಿ ಹಂಗೆ ಒಗಿ ಜನ ಹುಚ್ಚೆದ್ದು ಕುಣಿಬೇಕು” ಎಂದರು.

ಗತದಿಂದ ಹೊರಬಂದು ತಲೆಕೊಡವಿಕೊಂಡು ಎದ್ದು ನಿಂತು ಕಿಟಕಿಯ ಹೊರಗೆ ನೋಡತೊಡಗಿದೆ. ಜೀವನದಲ್ಲಿ ಒಮ್ಮೆ ನಮ್ಮದಲ್ಲದ ಪಾತ್ರವನ್ನು ಜನರಿಗೆ ಒಪ್ಪಿತವಾಗುವಂತೆ ನಟಿಸಿತೋರಿಸಿಬಿಟ್ಟರೆ, ಅದು ಅವರಿಗೆ ರುಚಿಸಿಬಿಟ್ಟರೆ ಅಲ್ಲಿಗೆ ನಮ್ಮ ಅಸ್ಮಿತೆಯೇ ಅಳಿದು ಹೋಗುತ್ತದೆ. ನಾವು ಸಹಜವಾಗಿರುವುದು ಅವರಿಗೆ ಅಸಹಜವಾಗಿ ಕಾಣಿಸಲು ಪ್ರಾರಂಭಿಸುತ್ತದೆ. ತಾವು ಯಾವು ಪಾತ್ರದಲ್ಲಿ ನಮ್ಮನ್ನು ಒಪ್ಪಿಕೊಂಡಿದ್ದರೋ ಅದೇ ಪಾತ್ರದಲ್ಲಿ ಮುಂದುವರಿದಲ್ಲಿ ಮಾತ್ರ ಅವರ ಮುಂದೆ ಇರಲು ಅವಕಾಶವಿರುತ್ತದೆ. ಒಮ್ಮೆ ಒಪ್ಪಿತವಾಗುವಂತೆ ನಟಿಸಿದಲ್ಲಿ ಹಾಗೂ ನಾವು ಅವರೊಂದಿಗಿರುವುದು ಅನಿವಾರ್ಯವಾದಲ್ಲಿ ಜೀವನಪೂರ್ತಿ ಅದೇ ರೀತಿ ನಟಿಸುತ್ತಿರಬೇಕಾಗುತ್ತದೆ, ಅದು ನಾಟಕವಿರಲಿ, ಜೀವನವಿರಲಿ, ಅಸ್ಮಿತೆ ಅಡವಿಟ್ಟು ಇನ್ನೊಬ್ಬರಿಗಾಗಿ ಬಾಳುವುದು ಅನಿವಾರ್ಯ. ನನ್ನ ಹೊಟ್ಟೆ ಹೊರೆಯಬೇಕಾಗಿತ್ತು, ಭುಜದ ಮೇಲೆ ಕುಟುಂಬದ ಹೊರೆಯೂ ಇತ್ತು, ಅದಕ್ಕಾಗಿ ದುಡಿಯಬೇಕಿತ್ತು, ದುಡಿಯಲು ಅವಕಾಶವೂ ಇತ್ತು. ಇಷ್ಟೆಲ್ಲಾ ಇತ್ತುಗಳ ಮಧ್ಯೆ ಮನಸ್ಸು ಇದ್ದಿಲ್ಲ ಅನ್ನೋ ಒಂದೇ ಒಂದು ಇಲ್ಲವನ್ನು ಅಲ್ಲಗಳೆಯುವುದು ಅನಿವಾರ್ಯವಾಗಿತ್ತು. ಜೀವನ ಸಾಗಿತ್ತು.

“ಲಜ್ಜೆ ಬಿಟ್ಟು ಗೆಜ್ಜೆ ತೊಟ್ಟು ಹೆಜ್ಜೆ ಇಟ್ಟೆ ನಾ ಥೈಯ್ಯಾ ಥಕ್ಕಾ” ತದಾತ್ಮತೆಯಿಂದ ಕುಣಿಯುತ್ತಿದ್ದೆ. ಶಿಳ್ಳೆ, ಚಪ್ಪಾಳೆ, ನಾಣ್ಯಗಳ ಎಸೆತ ಯಥಾರೀತಿ ನಡೆದೇ ಇತ್ತು. ಮನದಲ್ಲಿ ಆ ವೃತ್ತಿಯ ಬಗ್ಗೆ ಅಗಾಧವಾದ ಜಿಗುಪ್ಸೆ ಇದ್ದರೂ ಹೊಟ್ಟೆ ತುಂಬಾ ಅನ್ನ ಕೊಡುವ ಕಾಯಕವಾದ ಕಾರಣ ಶ್ರದ್ಧೆಯಿಂದಲೇ ಮಾಡುತ್ತಿದ್ದೆ. ಮನದಲ್ಲಿನ ನೋವು ಅಡಗಿಸಿ ಮುಖದಲ್ಲಿ ನಾಚಿಕೆ, ಒಯ್ಯಾರ ಅಭಿವ್ಯಕ್ತಿಸಿ ಕುಣಿಯುತ್ತಿದ್ದೆ. ಮುಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯ ನೋಟದಲ್ಲಿ ಏನೋ ವ್ಯತ್ಯಾಸ ನಾನು ಗಮನಿಸುತ್ತಿದ್ದೆ. ಕಳೆದ ಒಂದು ವಾರದಿಂದಲೂ ಅವನು ಬರುತ್ತಿದ್ದಿದ್ದು ಗಮನಿಸಿದ್ದೆ. ನಾಟಕದ ಕೊನೆಯ ಉತ್ತರಗೋಗ್ರಹಣ ಸನ್ನಿವೇಶ ಮುಗಿಸಿ ಗ್ರೀನ್ ರೂಮಿನಲ್ಲಿ ಮೇಕಪ್ ತೆಗೆಯುತ್ತಿದ್ದೆ. ಆ ವ್ಯಕ್ತಿ ಬಂದು ಹೊರಗೆ ಕಾದು ನಿಂತಿದ್ದ. ಕೈ-ಕೈ ಹೊಸಕಿಕೊಳ್ಳುತ್ತಾ ಅತ್ತಿತ್ತ ಶತಪಥ ತಿರುಗುತ್ತಿದ್ದನು. ಒಳಗೆ ಕರೆದು ಎದುರಿಗೆ ಕೂಡಿಸಿದೆನು. ಏನೆಂಬಂತೆ ಹುಬ್ಬು ಹಾರಿಸಿದೆನು. “ಅದು ನಿನ್ನ..ನಿಮ್ಮ ಡ್ಯಾನ್ಸ್ ನೋಡಿ ನನಗೆ...ನನಗೆ” ಎಂದೇನೋ ಹೇಳಲು ಹೋಗುತ್ತಿದ್ದ. ಅವನ ಮನಸ್ಸಿನಲ್ಲಿ ಏನಿರಬಹುದು ಎಂದು ಊಹಿಸಿ ತಲೆಯ ಮೇಲಿನ ಟೋಪನ್ ತೆಗೆದಿಟ್ಟು ಕುಳಿತೆ. “ನೀವು ಇಷ್ಟು ತಲೆ ಕೆಡಿಸಿಕೊಂಡೀರಂದರೆ ನಾನು ಮಾಡಿದ ಪಾತ್ರ ಯಶಸ್ಸು ಕಂಡೈತೆ ಅಂತನೇ ಅರ್ಥ, ಸಂತೋಷ ಏನೂ ತಪ್ಪಿಲ್ಲ ಯಜಮಾನ್ರೇ, ಆದರೆ ಒಬ್ಬ ರಾಜನ ಪಾತ್ರ ಮಾಡ್ತಾನೆ ಅವನನ್ನ ನೀವು ನಿಜ ಜೀವನದಾಗ ರಾಜ ಅಂತ ತಿಳಕೊಂತೀರೇನು, ಇನ್ನೊಬ್ಬ ದೇವರ ಪಾತ್ರ ಮಾಡ್ತಾನೆ ಅವನನ್ನ ನೀವು ನಿಜ ಜೀವನದಾಗೂ ಭಗವಂತನೇ ಅಂತ ತಿಳಕೊಂತೀರೇನು? ನಾನೂ ಬೃಹನ್ನಳೆಯ ಪಾತ್ರ ಮಾತ್ರ ಮಾಡೋದು, ನನ್ನ ಹೊಟ್ಟೆ ಪಾಡಿಗೆ ಮತ್ತೆ ನನ್ನ ಯಾಕೆ ನಿಜವಾಗಿಯೂ ಬೃಹನ್ನಳೆ ಅಂತ ತಿಳಕೊಂತೀರಿ?” ಎಂದು ಪ್ರಶ್ನಿಸಿದೆ. ಅವನು ಉತ್ತರ ಕೊಡಲಿಲ್ಲ. ಅಲ್ಲಿಂದ ಎದ್ದು ಹೋದನು. ಆದರೆ ನಾನು ಆ ಪ್ರಶ್ನೆ ಎಷ್ಟು ಜನಕ್ಕೆ, ಎಷ್ಟು ಸಲ ಕೇಳಲು ಶಕ್ಯವಿತ್ತು. ನನ್ನ ಜೊತೆ ಮಲಗಿ ಮಗುವನ್ನು ಹೆತ್ತ ಹೆಂಡತಿಗೂ, ತಾನು ಯಾವ ದುಡಿತದಿಂದ ತುತ್ತು ಅನ್ನ ಕಾಣುತ್ತಿದ್ದೇನೆ ಅನ್ನುವ ಪರಿಜ್ಞಾನವಿರಲಿಲ್ಲ. “ಮಗಳು ದೊಡ್ಡವಳಾಗುತ್ತಿದ್ದಾಳೆ, ಈ ಹಾಡು ಕುಣಿತ ಬಿಟ್ಟು ಮರ್ಯಾದೆಯಾಗಿ ಏನಾದರೂ ದುಡಿದುಕೊಂಡು ಬಾಳೋಣ” ಎಂದಿದ್ದಳು. “ಮರ್ಯಾದೆಯಾಗಿ ಬಾಳೋದು ಅಂದರೆ ಏನು? ನಾನು ಏನು ಲಜ್ಜೆಗೇಡಿ ಕೆಲಸ ಮಾಡೀನಿ” ಅವಳು ಉತ್ತರಿಸಿದೆ ಮುಖ ಆಚೆ ಮಾಡಿ ಮಲಗಿದ್ದಳು. ಮರುದಿನ ಮುಂಜಾನೆ ನಾನು ಎದ್ದಾಗ ಅವಳಿರಲಿಲ್ಲ. ಒಂದು ಚೀಟಿ ಮಾತ್ರ ಬಿಟ್ಟು ಹೋಗಿದ್ದಳು. “ನನ್ನನ್ನು ಹುಡುಕಬೇಡ, ನಿನ್ನ ಹೆಂಡತಿ ಆಗಿದ್ದಕ್ಕೆ ದಿನ ರಾತ್ರಿ ಕಂಡ ಕಂಡ ಕುಡುಕರು ಮನೆಯ ಬಾಗಿಲು ಬಡಿಯುತ್ತಾರೆ, ನಿನ್ನ ಗಂಡನಿಂದ ಏನು ಸುಖ ಕಂಡೀಯಾ ಅಂತ, ನೀನು ಗಂಡಸು ಅನ್ನೋದು ನನಗೆ ಗೊತ್ತು, ಅದಕ್ಕೆ ನನ್ನ ಮಗಳೇ ಸಾಕ್ಷಿ ಆದರೆ ಆ ಅರ್ಜುನನಿಗೂ ಒಂದು ವರ್ಷಕ್ಕೆ ಅಜ್ಞಾತವಾಸ ಮುಗಿದು ಬೃಹನ್ನಳೆಯ ಶಾಪಗ್ರಸ್ತ ಬದುಕಿನಿಂದ ಹೊರಗೆ ಬಂದ. ನೀನು ಈ ಜೀವಮಾನ ಪರ್ಯಂತ ಅದೇ ಪಾತ್ರದಲ್ಲಿ ಮುಂದುವರೆಯುತ್ತೀಯ ಅನ್ನಿಸುತ್ತದೆ. ನನಗೆ ಈ ಶಾಪಗ್ರಸ್ತ ಬದುಕು ಬೇಡ” ಎಂದಷ್ಟು ಬರೆದಿಟ್ಟು ಮಗುವನ್ನೂ ಬಿಟ್ಟು ಹೋಗಿ ಬಿಟ್ಟಿದ್ದಳು. ನಾನು ಬೇಡವಾಗಿದ್ದರೂ ಅವಳಿಗೆ ನನ್ನ ದುಡ್ಡು ಬೇಕಾಗಿತ್ತು. ನಾನು ಅವಳು ನನ್ನೊಂದಿಗೆ ಬಾಳದಿದ್ದರೂ ಹಣದಿಂದ ವಂಚಿತಳನ್ನಾಗಿ ಮಾಡಲಿಲ್ಲ.

ಈ ಎಲ್ಲಾ ಕೆಟ್ಟ ಪ್ರಪಂಚದಿಂದ ದೂರ ಮಗಳನ್ನು ದೂರ ಬೋರ್ಡಿಂಗ್ ಸ್ಕೂಲಿನಲ್ಲಿಟ್ಟು ಓದಿಸಿದ್ದೆ, ಒಳ್ಳೆಯ ಕೆಲಸವನ್ನೂ ಮಾಡುತ್ತಿದ್ದಾಳೆ. ಇಷ್ಟರಲ್ಲಿಯೇ ತಾನು ಇಷ್ಟ ಪಟ್ಟ ಹುಡುಗನನ್ನೂ ಮದುವೆಯಾಗುವವಳಿದ್ದೇನೆ ಎಂದೂ ತಿಳಿಸಿದ್ದಳು. ಮನಸ್ಸು ಅವಳತ್ತ ಎಳೆಯಿತು. ನನಗೆ ರಾಜ್ಯ ಪ್ರಶಸ್ತಿ ಬಂದಿದೆ ಅಂದರೆ ನಮ್ಮ ಕಂಪನಿಯ ಎಲ್ಲರೂ ಹೆಮ್ಮೆ ಪಡುತ್ತಾರೆ, ಆದರೆ ನನ್ನ ಜೊತೆ ಸಂಭ್ರಮಿಸುವ ರಕ್ತ ಸಂಬಂಧಿ ಯಾರಿದ್ದಾರೆ ಅವಳ ವಿನಹ, ಮನಸ್ಸು ತಾಳದೇ ಅವಳಿಗೆ ಫೋನ್ ಮಾಡಿದೆ. “ಅಪ್ಪಾ, ನಿನಗೆ ಎಷ್ಟೋ ಸಲ ಸೂಕ್ಷ್ಮವಾಗಿ ಹೇಳಿದ್ದೀನಿ, ನಿನಗೆ ಅರ್ಥ ಆಗುತ್ತಿಲ್ಲವೋ, ಅರ್ಥವಾದರೂ ಮಗಳು ಅನ್ನೋ ಮಮಕಾರ ಹೀಗೆ ಮಾಡಿಸುತ್ತಿದ್ದೆಯೋ ಗೊತ್ತಿಲ್ಲ. ನಾನು ಎಲ್ಲರಿಗೂ ಅನಾಥೆ ಅಂತಲೇ ಹೇಳಿಕೊಂಡು ಬಂದಿರುವುದು. ನೀನು ಕಷ್ಟ ಪಟ್ಟು ದುಡಿದ ಹಣದಿಂದಲೇ ನನ್ನ ಓದಿಸಿದ್ದೀಯಾ, ಈ ಸ್ಥಿತಿಗೆ ತಂದಿದ್ದೀಯ ನಿಜ, ಆದರೆ ನೀನೇ ನನ್ನ ತಂದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ನಾನು ಇಲ್ಲ ಅಪ್ಪ. ನಿನ್ನ ಮಗಳು ಅಂತ ಗೊತ್ತಾದರೆ ಅವರೂ ಸಹ ನನ್ನ ಮದುವೆ ಆಗಲಿಕ್ಕಿಲ್ಲ, ಅರ್ಥಮಾಡಿಕೊಳ್ಳಿರಿ” ಇನ್ನೂ ಏನೋ ಹೇಳುತ್ತಿದ್ದಳು. ನಾನು ಮಾತು ಮುಂದುವರೆಸಲಿಲ್ಲ. ಫೋನ್ ಬಂದ್ ಮಾಡಿದೆ.

ನಾನು ಹೋಗಿ ರಾಜ್ಯ ಪ್ರಶಸ್ತಿ ಸ್ವೀಕಾರ ಮಾಡುತ್ತೀನಿ. ಯಾರೂ ನನಗಾಗಿ ಚಪ್ಪಾಳೆ ಹೊಡೆಯದಿದ್ದರೆ ನನಗೆ ನಾನೇ ಚಪ್ಪಾಳೆ ಹೊಡೆದುಕೊಳ್ಳುತ್ತೇನೆ. ಎತ್ತಿಟ್ಟಿದ್ದ ಸಿಲ್ಕಿನ ಅಂಗಿ-ಧೋತರ ಎತ್ತಿ ಒಗೆದು, ಅವಳಿಗಾಗಿ ಕೊಂಡಿದ್ದ ಕಂದು ಬಣ್ಣದ ಒಡಲಿನ-ಮೆಂತ್ಯೆ ಬಣ್ಣದ ಅಂಚಿನ ಗಾಡಿ ಧಡಿ ಸೀರೆ ಕೈಗೆತ್ತಿಕೊಂಡೆನು. ವಿಧಿ ನನ್ನ ಅಸ್ತಿತ್ವ ಇಲ್ಲಿ ಅಡಗಿಸಿಟ್ಟಾಗ ನಾನು ನನ್ನ ಅಸ್ಮಿತೆ ಇನ್ನೆಲ್ಲಿಯೋ ಹುಡುಕಿದರೆ ಎಂತು ಸಿಕ್ಕೀತು? ನನ್ನ ವೃತ್ತಿ ಜೀವನದ ಯಶಸ್ಸು ಹಾಗೂ‌ ವೈಯಕ್ತಿಕ ಜೀವನದ ಅಧಃಪತನ, ದಾನ ಪ್ರವೃತ್ತಿ, ಹಠ, ಸ್ವಾಭಿಮಾನ, ಮೋಸಹೋಗುವ ಮುಗ್ಧತೆ ಯಾವುದೂ ಅತಿರೇಕವಲ್ಲ. ಅದು ನಾನು, ನನ್ನ ಜೀವನವನ್ನು ಮನಸ್ಸಿನಿಂದ ನೋಡಿದವನಿಗೆ ನನ್ನ ಬದುಕಿನ ಆರೋಹಣ ಅವರೋಹಣಗಳೆರಡೂ‌ ಏಕೋಭಾವದಲ್ಲಿ ಏಕೀಭವಿಸಿದ ಸುಂದರ ಭಾವಗೀತೆ. ನನ್ನ ಮನಸ್ತತ್ವ ಹಾಗೂ ಅಂತಃಸತ್ವ ಎರಡರ ಮಧ್ಯೆ ಅನವರತ ನಡೆವ ಕದನ, ಅರಿರತರಿತು ಎಸಗಿದ ತಪ್ಪುಗಳು, ಆ ತಪ್ಪುಗಳನ್ನು ಸರಿ ಪಡಿಸಲು ತೆತ್ತಬೆಲೆಗಳು, ಮತ್ತೆ ಮತ್ತೆ ಮೋಸಹೋಗುವ ಪರಿ, ಹಣ-ಕೀರ್ತಿಗಳ ಉತ್ತುಂಗ ಶಿಖರದ ಮೇಲೆ ಕುಳಿತು‌ ಹಿಡಿ ಪ್ರೀತಿಗಾಗಿ ಅಂಡಲೆಯುವ ರೀತಿ ಎಲ್ಲವೂ ನಾನೊಬ್ಬನೇ ಅರ್ಥಮಾಡಿಕೊಳ್ಳಬಹುದಾದ ಭಾವಗಳು. ನಾನು ದುಡಿದ‌ ದುಡ್ಡು‌ ನನ್ನ ಕೈಯಲ್ಲೂ ಉಳಿಯಲಿಲ್ಲ, ವಂಚಿಸಿ ನನ್ನ ಕೈಯಿಂದ ದೋಚಿದವರ ಕೈಯಲ್ಲೂ ಉಳಿಯಲಿಲ್ಲ, ಯಾವ ಮಾನುಷ ಸಂಬಂಧಗಳಿಗೆ ನಾನು ನನ್ನತನವನ್ನೂ ಪಣಕ್ಕಿಟ್ಟು ಹೋರಾಡಿದನೋ ಆ ಸಂಬಂಧಗಳ ಮಾಧುರ್ಯವೂ ಉಳಿಯಲಿಲ್ಲ. ಕೊನೆಗುಳಿದಿದ್ದು ಒಂದೇ ರಂಗದ ಮೇಲೆ ರಾರಾಜಿಸಿದ ನನ್ನ ಪಾತ್ರ. ಆ ಪಾತ್ರದ ಆಂತರ್ಯದಲ್ಲಿ ನನ್ನ ಅಸ್ಮಿತೆ ಲೀನವಾಗಿತ್ತು. ಪ್ರಶಸ್ತಿ ಸ್ವೀಕಾರ ಮಾಡಲು ನಾನು ಸೀರೆಯುಟ್ಟೇ ಹೋಗುತ್ತೇನೆ. ಅದೇ ನನಗೆ ಈ ಹಣ, ಈ ಪ್ರಶಸ್ತಿ, ಈ ಬದುಕು ತಂದುಕೊಟ್ಟಿದ್ದು. ಯಾವ ಭಿಡೆ-ಬಿಗುಮಾನವಿಲ್ಲದೇ ನೆರೆದ ಎಲ್ಲರಿಗೂ ಮನದಟ್ಟಾಗುವಂತೆ ಕಗ್ಗದ ಗುರುವಿನ ನುಡಿಯೊಡೆದು ಹೇಳುತ್ತೇನೆ, ಸಂಕುಚಿತ ಮನಗಳ ಕಗ್ಗಂಟು ಕಳಚುವಂತೆ:

ಬರಿಯಹೆಣ್ ಬರಿಯ ಗಂಡೆಂಬುದಿಳೆಯೊಳಗಿಲ್ಲ |ಬೆರಕೆಯೆಲ್ಲರುಮರ್ಧನಾರೀಶನಂತೆ ||ನರತೆಯಣು ನಾರಿಯಲಿ ನಾರೀತ್ವ ನರನೊಳಣು |ತಿರಿಚುತಿರುವುದು ಮನವ – ಮಂಕುತಿಮ್ಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net