ವಿಜಯವಾಣಿ ದೀಪಾವಳಿ ಕಥಾ ಸ್ಪರ್ಧೆ: ವಾಸನಿ… Story writing Competition

Story writing Competition
Published on

ವಿಜಯವಾಣಿ ‘ದೀಪಾವಳಿ ಕಥಾ ಸ್ಪರ್ಧೆ ( Story writing Competition ) -2024’ರಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು.

ವಾಸನಿ

Ananya Tushira 1
ಅನನ್ಯ ತುಷಿರಾ

ಅದು ನಾನು ಕೆಲಸ ಮಾಡುವ ಬ್ಯಾಂಕಿನ ಮುಂದಿನ ಜಗತ್ತು. ಪ್ರತೀ ಬಾರಿ ಇಲ್ಲಿ ಕಸ ಚೆಲ್ಲಬಾರದು ಎಂಬ ಗೋಡೆ ಬರಹ ಕ್ರಮೇಣ ಗೋಡೆಯಲ್ಲಿ ಲೀನವಾಗುತ್ತ ಹೋಗುತ್ತದೆ. ಮತ್ತ್ಯಾರೋ ಪೇಂಟು ತಂದು ತಿಳಿಯಾದ ಅಕ್ಷರಗಳ ಮೇಲೆ ತೀಡುತ್ತಾರೆ. ಒಂದೆರಡು ದಿನ ಸ್ವಚ್ಛ. ಮತ್ತೆ ನಿಧಾನಕ್ಕೆ ಕಸ ತುಂಬಿಕೊಳ್ಳುತ್ತ ಬರುತ್ತದೆ. ಅದನ್ನು ನೋಡುತ್ತ ಎಷ್ಟೋ ಬಾರೀ ನಾನೇ ಸಿಟ್ಟಾಗಿದ್ದೇನೆ, ಒಬ್ಬನೇ ಬೈದುಕೊಂಡಿದ್ದೇನೆ. ಅವನು ಮಾತ್ರ ಎಂದಿನಂತಿರುತ್ತಾನೆ. ಯಾವ ಪ್ರತಿಕ್ರಿಯೆಯೂ ಇಲ್ಲದೆ.

ಅವನು ಶಿವಮೂರ್ತಿ. ಮಾಸಿದ ಬೂದು , ಕೇಸರಿ ಬಣ್ಣದ ಶರ್ಟ್ ಯಾವಾಗಲು. ಯಾವತ್ತೂ ತನ್ನ ಎಕ್ಸ್ಪ್ರೆಶನ್ ಬದಲಿಸುವುದೇ ಇಲ್ಲ. ಮುಖ ಸುಮ್ಮನೆ ಸಾದಾ ಸಾದಾ. ದಿನ ಮನೆಗೆ ಹೋಗಿ ಮುಖ ತೊಳೆದು ದೇವರಿಗೆ ಕೈ ಮುಗಿಯದೇ ಸಮಾಧಾನವಾಗದೆಂದು ಒಂದು ಸೆಕೆಂಡು ಕೈ ಮುಗಿದು ಸೋಫಾದಲ್ಲಿ ಬೀಳುತ್ತೀವಲ್ಲ ಅಷ್ಟು ಯಥಾಪ್ರಕಾರ.

ಅವನೇನೋ ನನ್ನ ಮಾತಾಡಿಸಿದ್ದವ ಅಲ್ಲ. ಈಗೊಂದು ಐದಾರು ತಿಂಗಳಿಂದ ಅವನನ್ನು ನೋಡುತ್ತಿದ್ದೇನೆ. ಬೆಳಗೆದ್ದು ೬:೪೫ ರ ಹೊತ್ತಿಗೆ ಚಹಾ ಕುಡಿಯೋಕೆ ಅಂತಲೇ ದಿನವೂ ಹೊರ ಹೋಗುವ ರೂಢಿ ನನ್ನದು. ಅಮ್ಮನ ಪ್ರೀತಿ ಚಹದ ಸಕ್ಕರೆಯನ್ನು ಹೆಚ್ಚಿಸಿ ಮೊದಲಿಂದಲೂ ಮನೆಯಲ್ಲಿ ಮಾಡುವ ಚಹಾ ಎಂದರೆ ಕಣ್ಣು ಮುಚ್ಚಿಬಿಡುತ್ತಿದ್ದೆ. ಅದು ಈಗೂ ಅಷ್ಟೇ. ಇವಳು ಇಷ್ಟೇ ಇಷ್ಟು ಸಕ್ಕರೆಯೊಂದಿಗೆ ಹಾಲು ಒಂದು ರೌಂಡು ಕುದ್ದ ಮೇಲೆ ಚಹ ಪುಡಿ, ಅದರ ಜೊತೆ ಒಂದು ಏಲಕ್ಕಿ ಸಿಪ್ಪೆ ಉದುರಿಸಿ, ಬಿದ್ದೇ ಇಲ್ಲ ಎನ್ನುವಷ್ಟು ತಟಗು ಉಪ್ಪು ಚಿಮುಕಿಸಿ, ತುಂಬಾ ಕುದಿಸದೇ ಒಳ್ಳೆ ಚಹಾ ಮಾಡುತ್ತಾಳೆ. ಅವಳ ತಮ್ಮ ಅಂತೂ ಆ ಚಹ ಕುದಿಯುವ ವಾಸನೆಗೆ ಅಕ್ಕನ ಫ್ಯಾನು. ನನಗೆ ಒಮ್ಮೊಮ್ಮೆ ಆ ಚಹದ ವಾಸನೆ ಇಷ್ಟವಾದಂತಾದರೂ, ಕುಡಿಯಲು ನಾಲಗೆ ಮಾತ್ರ ಹೆದರುತ್ತದೆ. ಅಲ್ಲದೇ ಹೊರಗಡೆ ಚಹ ಕುಡಿಯುವಾಗ ಸಿಗುವ ಏಕಾಂತದಲ್ಲಿ ಹೊಳೆವ ತೂಕದ ಆಲೋಚನೆಗಳು ಮನೆಯಲ್ಲಿ ಚಹ ಕುಡಿಯುತ್ತ ಹೊಳೆಯುವದಿಲ್ಲ.

ಹ್ಮ್ಮ್, ಮರೆತೆ, ಶಿವಮೂರ್ತಿ. ಹಾಗೆ ಚಹ ಕುಡಿಯುತ್ತ ಬ್ಯಾಂಕಿನ ಪಕ್ಕದಲ್ಲೆ ಇದ್ದ ಪುಟ್ಟ ಹೋಟೆಲ್ ನಲ್ಲಿ ಅವನನ್ನು ಸಮೀಪದಿಂದ ನೋಡಿದ್ದೆ. ತೀರಾ ಟೇಬಲ್ ನ ಅಂಚಿಗೆ ಕೂತಿದ್ದ. ಮಾತಿಂದ ನಮ್ಮ ಕಡೆಯವನು ಅಂತ ಖಾತ್ರಿಯಾಯ್ತು. ನಮ್ಮ ಕಡೆ ಅಂದರೆ ನಮ್ಮೂರ ಕಡೆಯವರು. ನಾನೇ ಕೇಳಿದೆ.

‘ಬಾಗಲಕೋಟೆ ಹತ್ತಿರ ಶಿವನಳ್ಳಿ’ ಅಂದ.

ನಿಮ್ಮದು ಸಾರ್? ಪಟ್ ಅಂತ ಕೇಳಿದ್ದ .

‘ಅಲ್ಲೇ ಮೇಗಲಕೇರಿ’ ಅಂದೆ

‘ನಮಗ ಸಮೀಪಾನ ರೀ’ ಅಂದ.

‘ಹ್ಮ್’ ಅಂದು ನಕ್ಕು ಬಂದಿದ್ದೆ.

ಅಲ್ಲಿಂದಾಚೆ ಭೇಟಿ ಇದ್ದೆ ಇತ್ತು. . ಅದೇ ಸರಳ ನಗು. ಸದಾ ಸಾದಾ. ಒಂದು ಗುಟುಕು ಶುರು ಹಚ್ಚುವ ಹೊತ್ತಿಗೋ ಅಥವಾ ಮುಗಿಸುವ ಹೊತ್ತಿಗೋ ಕಣ್ಣಿಗೆ ಬೀಳದೆ ಇದ್ದುದಿಲ್ಲ ಶಿವಮೂರ್ತಿ. ತನ್ನ ಸಣ್ಣ ಪಾಜಿಯೋ ಸುತ್ತ ಅಲ್ಲೆಲ್ಲೋ ಕಾಣುತ್ತಲೇ ಇದ್ದ. ಇತ್ತೀಚಿಗಂತೂ ನಾನು ಚಹಾ ಕುಡಿಯಲು ಹೋಗದೇ ಇದ್ದಾಗ , ಮರುದಿನ ನಾನು ಕಂಡಕೂಡಲೇ ಓಡಿ ಬಂದು ಕೇಳುತ್ತಿದ್ದ.

ಬರಿ ಕಸದ ಲಾರಿ ಪಕ್ಕದಲ್ಲಿ ಹಾಡು ಹೋದರೆ ಮೈ ಕೈ ನೋವು ಜ್ವರ ಅನ್ನಿಸುವ ನನಗೆ, ಎಷ್ಟೋ ಬಾರಿ ಕೇಳಬೇಕು ಅನ್ನಿಸಿತ್ತು ಆ ಕಸದ ವಾಸನೆ ಹೆಂಗೆ ತಡೀತೀಯ ಮಾರಾಯಾ ಅಂತ. ಹೇಗೆ ಕೇಳಲೆಂದು ಸುಮ್ಮನಾಗಿದ್ದೆ. ಅವತ್ತು ಚಹಾದಂಗಡಿ ಮಣಿ ಜೊತೆ ಮಾತಾಡುತ್ತ ಮಾತು ಬಂತು.

‘ಅವರಿಗೆಲ್ಲಿ ವಾಸನೆ ಸಾರ್? ಈ ವಾಸನೆ ಬರೋಕೂ ಮೊದಲೇ ಅವರೇ ಇನ್ನೊಂದು ವಾಸನೆ ಸೃಷ್ಟಿಸ್ಕೊಂಡು ಟೈಟ್ ಮಾಡ್ಕೊಂಡು ಬಿಟ್ಟಿರ್ತಾರೆ. ಇಲ್ದಿದ್ರೆ ಇಂಥ ಕೆಲಸ ಮಾಡೋಕಾಗೋದಾ ಸಾರ್? ಎನ್ನುತ್ತಾ ಮಣಿ ನನ್ನನ್ನೇ ಮಿಕ್ಸೆಡ್ ಫೀಲಿಂಗ್ ಗೆ ತಳ್ಳಿದರು. ಅವತ್ತು ವಾಕಿಂಗ್ ಗೆ ಹೋದವ ಹೋಟೆಲಿಗೆ ಹೋಗಿ ಚಹ ಹೇಳಿದೆ.

ಮಣಿ ಯಾಕೋ ಬೇಗ ಬಂದರಲ್ಲ! ಎನ್ನುವಂತೆ ನೋಡಿ, ‘ಕೊಡ್ತೀನಿ ೫ ನಿಮಿಷ ಸಾರ್’ ಅಂದರು.

ಚಹಾ ಕುಡಿದು ಬಂದೆ. ಕೂತಿರುವವರೆಗೂ ಶಿವಮೂರ್ತಿ ಕಾಣಲಿಲ್ಲ. ಮರುದಿನವೂ ಕೂಡ. ಅವತ್ತು ಮಗಳದು ಒಂದೇ ಹಠ. ಮಳೆಯಲ್ಲಿ ತೋಯಬೇಕು, ಕಾಗದದ ದೋಣಿ ಮಾಡಿ ತೇಲಿ ಬಿಡಬೇಕು ಅಂತ. ಅವಳ ಆಸೆಯಂತೆ ಬ್ಯಾಂಕಿನಲ್ಲಿ ಅವಸರಕ್ಕೆ ಇರುವ ಫೈಲಿಗೆ ಸೈನ್ ಹಾಕಿ ಮನೆಗೆ ಹೋಗಿ ಮಗಳ ಆಸೆ ಈಡೇರಿಸಿದ್ದೆ. ಮರುದಿನ ಇವಳಿಗೆ ಜ್ವರ, ಬ್ಯಾಂಕಿಗೆ ಹೋಗಿ ಅರ್ಜೆಂಟ್ ಇರೋ ಅಪ್ಲಿಕೇಶನ್ ಮಾತ್ರ ತಗೊಂಡು ಬಾ ಅಂತ ಪಿಯೋನ್ ಸದಾಶಿವನಿಗೆ ಒತ್ತಿ ಒತ್ತಿ ಹೇಳಿ ಮತ್ತೆ ಕೆಲವಕ್ಕೆ ಮಾತ್ರ ಸೈನ್ ಹಾಕಿ ಬಂದಿದ್ದೆ. ಎರಡು ದಿನ ರಜೆ ಕೇಳಿ ಮನೆಗೆ ಬಂದರೆ ಇವಳ ಜೊತೆ ಮಗನಿಗೆ ಜ್ವರ. , ಎಂಟು ದಿನವೇ ಆಯಿತು. ರಜೆ ಎಕ್ಸ್ಟೆಂಡ್ ಮಾಡಿಕೊಂಡೆ.

ಮರುದಿನ ಹೋದೆ. ಮಣಿ ನನಗೇ ಕಾಯ್ತಾ ಇರೋ ಹಾಗೆ,

‘ಸಾರ್ ಎಲ್ಲಿ ಹೋಗಿದ್ರಿ? ಕಾಣಲೇ ಇಲ್ಲಾ ? ’ ಅಂದ.

ಜ್ವರ ಬಂದಿದ್ದೆಲ್ಲ ಹೇಳಿದೆ.

‘ಏನೇನೋ ಯೋಚ್ನೆ ಬಂದಿತ್ತಲ್ಲ ಸರ್ ನಮಗೆ? ಅನ್ನುತ್ತಾ ಟೀ ಕಪ್ಪು ಟೇಬಲ್ ಗೆ ತಂದಿಟ್ಟ.

‘ನಮಗೆ ಅಂದ್ರೆ ನೀವೊಬ್ಬರೇ ಅಲ್ಲ ಅನ್ನೋದು ಕನ್ಫರ್ಮ್’ ಕೈಗೆತ್ತಿಕೊಂಡಿದ್ದ ಕಪ್ಪು ಬಹಳ ಬಿಸಿ ಅನ್ನಿಸಿ ಮತ್ತೆ ಕೆಳಗಿಡುತ್ತ ನಕ್ಕೆ.

‘ಶಿವಮೂರ್ತಿ ನಿಮ್ ಬಗ್ಗೆ ಕೇಳ್ತಾನೆ ಇದ್ದ ಸರ್. ಅವತ್ತು ನಿಮ್ಮ ಬ್ಯಾಂಕಿನ ಕಡೆಯೂ ಹೋಗಿದ್ದನಂತೆ. ನೀವಿರಲಿಲ್ಲ ಅಂದ. ನನಗಾ? ಅಚ್ಚರಿಯಿಂದ ಕೇಳಿದೆ

ಹ್ಮ್ಮ್ ಸರ್, ಈ ನಂಬರು ಕೊಟ್ಟಿದಾನೆ, ಫೋನ್ ಮಾಡೋಕೆ ಹೇಳಿ ಅಂದಿದಾನೆ’ ಅಂದ ಮಣಿ. ವಿಚಿತ್ರ ಅನ್ನಿಸಿತು. ನಂಬರು ಬರೆದ ಚೀಟಿ ಪ್ಯಾಂಟಿನ ಕಿಸೆಯಲ್ಲಿಟ್ಟುಕೊಂಡು ಮನೆಗೆ ಬಂದೆ.

ಬ್ರೇಕ್ಫಾಸ್ಟು, ಮಗಳ ಸ್ಕೂಲು, ಬಾಕ್ಸು ಅಂತೆಲ್ಲ ಚೀಟಿ ಗಮನಕ್ಕೆ ಬರಲೇ ಇಲ್ಲ. ಆಫೀಸಿನಿಂದ ವಾಪಸು ಬರುವಾಗ ಮಾತ್ರ ಥಟ್ ಅಂತ ನೆನಪಾಯ್ತು. ಕಿಸೆಯಲ್ಲಿ ತಡಕಾಡಿದೆ. ಬೆಳಿಗ್ಗೆ ಚಹಾ ಕುಡಿಯುವಾಗ ಹಾಕಿರುವ ಪ್ಯಾಂಟು ಬಾತ್ರೂಮ್ ಬಕೆಟ್ ಅಲ್ಲಿದ್ದುದು ನೆನಪಾಯ್ತು. ಯಾಕೋ ಮನಸಿಗೆ ಸಮಾಧಾನವೇ ಆಗಲಿಲ್ಲ. ಮನೆಗೆ ತಲುಪಲು ಎರಡು ಗಂಟೆ. ಇವಳಿಗೆ ಫೋನ್ ಮಾಡಿ ಕೇಳೋಣವೆಂದರೆ ಅವಳು ಮನೆ ಮುಟ್ಟುವುದೇ ನನಗಿಂತ ಲೇಟ.

ಏನಾಗಿರಬಹುದು ಶಿವಮೂರ್ತಿಗೆ? ನನಗೇಕೆ ಫೋನ್ ಮಾಡಲು ಹೇಳಿದ್ದಿರಬೇಕು? ನಾನು ಬೆಳಿಗ್ಗೆಯೇ ಮಾತಾಡಬೇಕಿತ್ತಲ್ಲ? ನನಗೆ ನಾನೇ ಬೈದುಕೊಳ್ಳುತ್ತಾ ಕಿಟಿಕಿಯ ಕಡೆ ನೋಡುತ್ತಾ ಕುಳಿತೆ. ಕಾವೇರಿ ಥೀಯೇಟರ್ ಬಲಕ್ಕೆ ಮಾಡಿ ಎಡಕ್ಕೆ ಪ್ಯಾಲೇಸ್ ಗ್ರೌಂಡ್ ಮುಂಭಾಗದಲ್ಲಿ ಕಸದ ಲಾರಿ ನಿಂತಿತ್ತು. ಐದಾರು ಜನ ಅದರ ಮುಂದೆ ಮಾತಾಡುತ್ತ ನಿಂತಿದ್ದರು. ಶಿವಮೂರ್ತಿಯಂಥದ್ದೇ ಬೂದು ಕೇಸರಿ ಬಣ್ಣದ ಯುನಿಫಾರ್ಮು. ಇಳಿದು ಕೇಳಲಾ ಅಂದುಕೊಂಡೆ. ಅಲ್ಲಿ ಕೇಳಿದರೆ ಯಾರಾದರೂ ನಕ್ಕಾರು ಅಂತಲೂ ಮುಜುಗರವಾಯಿತು.

ಮನೆಗೆ ತಲುಪುವ ಹೊತ್ತಿಗೆ ಅಷ್ಟೇಕೆ ಚಡಪಡಿಕೆಯಾಯಿತೋ . ಮನೆಗೆ ಹೋಗದೆ ನೇರವಾಗಿ ಮಣಿ ಹೋಟೆಲಿಗೆ ಹೋದೆ. ಅಲ್ಲಿ ನೋಡಿದರೆ ಮಣಿಯ ಹೆಂಡತಿ ಇದ್ದಳು. ಏನೂ ಕೇಳದೆ ಮನೆಗೆ ಬಂದೆ. ಪಕ್ಕದಲ್ಲಿ ಹಾದು ಬರುವಾಗ ಕಸದ ಲಾರಿಯ ಕೆಟ್ಟ ವಾಸನೆ. ಗಂಟಲು ಗುಸುಗುಸು ಮಾಡತೊಡಗಿತು. ಪಕ್ಕಾ ಇದು ಜ್ವರದ ಬಾಬತ್ತು ಅಂದುಕೊಂಡೆ.

ಮನೆಗೆ ಬಂದು ಬಾಗಿಲು ತೆಗೆದವನೇ ನೇರವಾಗಿ ಬಾತ್ರೂಮಿನ ಬಾಸ್ಕೆಟ್ ತೆಗೆದು ನೋಡಿದೆ, ಪ್ಯಾಂಟು ಅಲ್ಲಿರಲಿಲ್ಲ. ಬಾಲ್ಕನಿ ಡ್ರೈ ಪುಲ್ಲಿ ನೆನಪಾಗಿ ಓದಿದೆ. ಪ್ಯಾಂಟು ಆರಾಮಾಗಿ ಒಣಗಿಸಿಕೊಳ್ಳುತ್ತಿತ್ತು. ಪಟ್ ಅಂತ ಪ್ಯಾಂಟು ಕೆಳಗೆಳೆದು ಜೇಬಿಗೆ ಕೈ ಹಾಕಿದೆ. ಕಾಗದ ನೆನೆದು ತೋಯಿಸಿದ ಕಡ್ಲೆಪುರಿಯಂತಾಗಿತ್ತು. ಅದರ ಮೇಲೆ ಬರೆದ ಅಕ್ಷರ ಕಾಣುವದಿರಲಿ, ಅದೊಂದು ಪೇಪರ್ ಆಗಿತ್ತು ಅನ್ನುವ ಕುರುಹೂ ಇರದಂತಾಗಿತ್ತು. ಪ್ಯಾಂಟಿನ ಜೇಬಿನಲ್ಲಿ ಸೇರಿ ಒಂಥರಾ ವಾಸನೆ ಆಗಿತ್ತು. ಎಸೆದು ಕೈ ತೊಳೆದುಕೊಂಡೆ.

ರಾತ್ರಿ ಊಟ ಮಾಡುವ ಹೊತ್ತಿಗೆ ಅಂದುಕೊಂಡದ್ದಾಗಿತ್ತು. ಮೈ ಕೆಂಡ ಕೆಂಡ. ಇವಳಿಗೆ ಮಗಳಿಗೆ ಬೆಡ್ರೂಮ್ ಅಲ್ಲಿ ಮಲಗಲು ಹೇಳಿ ಹಾಲಿಗೆ ಹೋಗಿ ಮಲಗಿದೆ. ಎರಡು ದಿನ ಕೆಟ್ಟ ಮಳೆ. ಬಿಡುವ ಮಾತೆ ಇರಲಿಲ್ಲ. ಅವತ್ತು ರಾತ್ರಿಯೇ ಟ್ಯಾಬ್ಲೆಟ್ ತೆಗೆದುಕೊಂಡರೂ , ಜ್ವರ ಎರಡು ಮೂರೂ ದಿನ ಬಿಡಲಿಲ್ಲ. ಫುಲ್ ಸುಸ್ತಾಗಿತ್ತು. ಯಾಕೋ ಕೆಲಸ ಮಾಡುವ ಮನಸಾಗಲೇ ಇಲ್ಲ. ಬೈದುಕೊಂಡರೂ ಸರಿ ಎಂದುಕೊಂಡು ರಜೆ ಕೇಳಿ, ಒಂದೆರಡು ದಿನ ಮನೆಯಲ್ಲಿದ್ದು, ಎರಡು ದಿನ ಮಡಿಕೇರಿಗೆ ಹೋಗಿಬಂದೆವು. ಮಳೆಗಾಲದ ಮಡಿಕೇರಿಯ ವೈಭವವೇ ಬೇರೆ ಅನ್ನುತ್ತಿದ್ದಳು ಇವಳು. ಎಂಟು ದಿನದಲ್ಲಿ ಮನಸ್ಸು ಜಡ ಕಳೆದು ರಿಫ್ರೆಶ್ ಆಗಿತ್ತು.

ಮುಂಜಾನೆ ಇನ್ನೂ ಐದಾಗಿರಲಿಕ್ಕಿಲ್ಲ, ಎಚ್ಚರವಾಯ್ಯಾಕೋ ಶಿವಮೂರ್ತಿ ನೆನಪಾದ. ಬೆನ್ನಲ್ಲೇ ಆ ನಂಬರ್ ಚೀಟಿ. ಇವತ್ತು ಮಣಿಗೆ ಇನ್ನೊಮ್ಮೆ ಕೇಳಬೇಕು ಅಂದುಕೊಂಡೆ.. ಬಾತ್ರೂಮ್ ಬಾಗಿಲ ಸದ್ದಿಗೆ ಎದ್ದ ಇವಳು ನನ್ನ ಕಡೆಅರೆಗಣ್ಣಲ್ಲಿ ನೋಡುತ್ತ ಟೈಮ್ ಎಷ್ಟು ಅಂದಳು.

‘ಐದೂ ಹತ್ತು’ ಅಂದೆ.

‘ಮಲಗಬಾರ್ದಾ ವಿನೀ? ಹೋಗ್ಲಿ ಆ ಬಾಲ್ಕನಿ ಬಾಗಿಲು ಆದ್ರೂ ಕರೆಕ್ಟ್ ಆಗಿ ಮುಚ್ಚು. ಎಷ್ಟು ಸ್ಮೆಲ್ ಬರ್ತಿದೆ ಈಗೀಗ!’

ಹೊರಗೆ ಟಾಯ್ಲೆಟ್ ರೂಮ್ಗಳ ಲಾಫ್ಟ್ ಕಡೆಯಿಂದ ಭಸ್ ಅಂತ ಗಾಳಿ ಬಂದರೆ ಅದರೊಟ್ಟಿಗೇ ಕೆಟ್ಟ ವಾಸನೆ ಇತ್ತೀಚಿಗೆ. ಏನಾಗಿದೆಯೋ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗೆ ಹೇಳಬೇಕು ಅನ್ನುತ್ತಲೇ ತಿಂಗಳುಗಳು ಮುಗಿದಿವೆ. ಸಣ್ಣದಾಗಿ ತೆಗೆದಿದ್ದ ಬಾಗಿಲು ಲಾಕ್ ಮಾಡಿ ಹಾಸಿಗೆಯ ಮೇಲೆ ಕುಳಿತೆ.

ಒಳಗಿನ ವಾಸನೆ ಹೊರಗೆ ಹೇಗೆ ಹೋಗಬೇಕು? ಫ್ಯಾನಿನ ಗಾಳಿಗೆ ಒಳಗೆ ಸುತ್ತತೊಡಗಿತು. ನಿದ್ದೆ ಮಾಡಿಬಿಡಬೇಕು. ಪ್ರಜ್ಞೆಯಿಲ್ಲದ ಜಗತ್ತು ಒಂದು ರೀತಿ ಅದು, ಆದರೆ ನಿದ್ದೆ ಬರಬೇಕಲ್ಲ! ಇಲ್ಲವೇ ವಾಸನೆ ಮರೆಯಲು ಬೇರೆ ದಾರಿ ಹುಡುಕಬೇಕಿತ್ತು. ಬಾಲ್ಕನಿ ಬಾಗಿಲು ತೆಗೆದು ಗಾಳಿಗೂ ಅದರೊಂದಿಗೆ ಬರುವ ವಾಸನೆಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಾ!

ಮತ್ತದೇ ಶಿವಮೂರ್ತಿಯ ನೆನಪು. ಅಷ್ಟು ವಾಸನೆ ಹೆಂಗೆ ತಡಕೊತಿರ್ಬೇಕು ಮಾರಾಯಾ? ಅಂತ ಕೇಳಬೇಕೆಂದಿದ್ದು ನೆನಪಾಯ್ತು. ನಿದ್ದೆ ಬರಲಿಲ್ಲ, ವಾಚು ನೋಡುತ್ತಾ ಆರರವರೆಗೂ ದೂಡಿ ಮುಖ ತೊಳೆದು, ಬೈಕ್ ಬೇಡವೆನ್ನಿಸಿ ನಡೆಯುತ್ತಲೇ ಹೊರಬಿದ್ದೆ.

ಇನ್ನೂ ಕದಂಬ ಅಪಾರ್ಟ್ಮೆಂಟ್ ಬಳಿ ಇದ್ದೆ. ಮಣಿ ಹೋಟೆಲು ಮುಚ್ಚಿದ್ದು ಅಲ್ಲಿಂದಲೇ ಕಂಡಿತು. ಮತ್ತೊಮ್ಮೆ ಮೊಬೈಲು ನೋಡಿದೆ. ಇಷ್ಟೊತ್ತಿಗೆ ಓಪನ್ ಆಗಬೇಕಿತ್ತಲ್ಲ! ಒಳ್ಳೆ ಕಥೆಯಾಯ್ತು. ಮಗಳ ಹೋಮೇವರ್ಕ್, ಅಸೈನ್ಮೆಂಟ್ ಇವಲ್ಲದೆ, ಟ್ರಾನ್ಸ್ಪೋರ್ಟಷನ್ ಫಿ ಕಟ್ಟುವದರ ಬಗ್ಗೆ ಸ್ವಲ್ಪ ಆದರೂ ನನ್ನ ತಲೆಯಲ್ಲಿದೆಯಾ? ಒಂದು ಕ್ಷಣ ನನ್ನ ಬಗ್ಗೆ ನನಗೇ ವಿಚಿತ್ರವೆನ್ನಿಸಿತು. ‘ಮನೆ ರಿಪೇರ್ ಕೆಲಸಗಳು ಹಂಗೆ ಕೂತಿದಾವು, ಟೈಮ್ ಸಿಕ್ಕಾಗಾದ್ರು ಮಾಡಸಿ’ ಅಂತ ಇವಳು ಅಂದಾಗಲೇ ನೆನಪಾಗುವುದು, ಅದು ಹೋಗಲಿ ‘ಚೆಕ್ ಅಪ್ ಇದೆ, ಡಾಕ್ಟರ್ ಹತ್ರ ಹೋಗೋಣ’ ಅಂತಂದರೆ ‘ನೀನು ಹೋಗಿರು ಸಾಧ್ಯ ಆದ್ರೆ ಬರೋವಾಗ ಪಿಕ್ ಮಾಡ್ತೀನಿ’ ಅನ್ನೋ ನಾನು ಅದೆಲ್ಲ ಬಿಟ್ಟು ಮಣಿ, ಶಿವಮೂರ್ತಿ ಅಂತ ತಲೆ ಕೆಡಿಸ್ಕೊಳ್ತಿದ್ದೇನೆ.

ಹಾಗೆ ನಡೆಯುತ್ತಾ ಒಂದು ರೌಂಡ್ ಪಾರ್ಕ್ ಸುತ್ತಾಕಿದೆ. ಒಂದು ರೌಂಡ್ ಪೂರ್ತಿ ಮುಗಿದು, ಇನ್ನೇನು ಮಣಿ ಅಂಗಡಿಯನ್ನು ದಾಟಿ ಕದಂಬ ಅಪಾರ್ಟ್ಮೆಂಟ್ ಕಡೆ ಬರಬೇಕು, ಸರ್! ಅನ್ನುವ ಧ್ವನಿ.

ತಿರುಗಿ ನೋಡಿದೆ. ಶಿವಮೂರ್ತಿ. ಯಾವಾಗಲೂ ಬೂದು ಬಣ್ಣದ ಶರ್ಟ್ ಅಲ್ಲಿ ನೋಡಿದವನಿಗೆ ತಕ್ಷಣ ಬೇರೆ ಕಂಡ. ಸರ್ ಅನ್ನುತ್ತಾ ಓಡಿ ಬಂದ. ನಾನು ತಿರುಗಿ ಒಂದೆರಡು ಹೆಜ್ಜೆ ಬಂದೆ. ಕಣ್ಣಿನಲ್ಲಿ ಸುಸ್ತಿತ್ತು. ಸರ್ ನಿಮ್ ಹತ್ರ ಸ್ವಲ್ಪ ಮಾತಾಡಬೇಕಿತ್ತರಿ, ಏನಾಯ್ತು ಶಿವಮೂರ್ತಿ ಅಂದೆ . ಸರ್ ಇಲ್ಲಿ ಬ್ಯಾಡ್ರಿ ಒಂದ ಹತ್ತ ಹದನೈದ ನಿಮಷ ನಿಮಗೇನೋ ಹೇಳುದದ ಇಲ್ಲೇ ಪಾರ್ಕ್ ಹತ್ರ ಬೆಂಚ ಅದಾವ್ರಿ. ಬರ್ತೀರಿ ಸರ್? .

ನಾನು ಇವನನ್ನು ನೋಡಿದಾಗೆಲ್ಲ ನಕ್ಕಿರಬಹುದು, ಚಾ ನಾಷ್ಟಾ ಅಂತ ಮಾತಾಡಿರಬಹುದು ಆದರೆ ಇವನು ಯಾಕೆ ನನ್ನ ಜೊತೆ ಹೀಗೆ ಪರ್ಸನಲ್ ಆಗಿ ಮಾತಾಡಬೇಕು? ಏನಾದ್ರು ದುಡ್ಡು ಕೇಳಬಹುದಾ? ಬ್ಯಾಂಕ್ ಅಲ್ಲಿ, ಮನೆ ಕೆಳಗಿನ ಪ್ಲಾಟ ಅವ್ರಿಗೆ ದುಡ್ಡು ಕೊಟ್ಟು ಆಗಲೇ ಕೈ ಸುಟ್ಟುಕೊಂಡಾಗಿದೆ. ಕೇಳಿದರೆ ಇಲ್ಲ ಎನ್ನಬೇಕು, ಮತ್ತೆಲ್ಲಿಯ ಕಿರಿಕಿರಿ ಅಂದುಕೊಳ್ಳುತ್ತಿದ್ದೆ.

ಸರ್, ಏನೂ ಇಳ್ರಿ. ಒಂಧತ್ತು ನಿಮ್ಸ್. ಆಟ ರೀ’ ಅಂದ.

ಸರಿ ನದಿ ಅಂದೆ. .

ನನಗಿಂತ ಮುಂದೆ ಹೋಗಿ ಬೆಂಚ್ ಮೇಲೆ ಬಿದ್ದಿದ್ದ ಒಣ ಎಲೆ ತೆಗೆದು ಊದಿ ಬೆಂಚು ಸ್ವಚ್ಛಗೊಳಿಸಿದ.

ಹೋಗಿ ಕೂತೆ.

ದೂರ ನಿಂತ. ಕೂಡು ಅಂದೆ

ಇಲ್ತೊಗೋರಿ ಸರ್, ಇಲ್ಲಿ ಕೂಡ್ತೀನಿ ಅನ್ನುತ್ತಾ ಬೆಂಚಿನ ಪಕ್ಕದ ಮುರಿದ ಇನ್ನೊಂದು ಬೆಂಚಿನ ಮುರಿದ ಕಲ್ಲಿನ ಮೇಲೆ ಕೂತ .

ದುಡ್ಡಿನ ಸಮಸ್ಯೆಯಿರಬೇಕು ಅದಕ್ಕೆ ಹೀಗೆ ಮಾತಾಡುತ್ತಿದ್ದಾನೆ, ಅಂದುಕೊಳ್ಳುತ್ತಲೇ ಶುರು ಮಡಿದ.

ಸರ್, ನಮ್ಮೂರು ಶಿವನಳ್ಳಿ ರೀ. ಅಪ್ಪ ಅವ್ವ ಸಣ್ಣವರಿದ್ದಾಗ ಹೋದರಿ. ತಂಗಿ ಒಬ್ಬಾಕಿ ,ನನಗಿಂತ ಭಾಳ ಸಣ್ಣಕ್ಕಿ. ಬೆಂಗಳೂರಿಗ್ ಬಂದು ಇಲ್ಲೇ ಉಳದ್ವಿ. ಏನೂ ಕೆಲಸ ಸಿಗಾಕ ತಯಾರಿದ್ದಿದ್ದಿಲ್ರಿ. ಅವಾಗ ಈ ಕೆಲಸ ಸಿಕ್ಕಿತ್ತು. ಒಂದ ಸಣ್ಣ ರೂಮ್ ಮಾಡಿ ತಂಗಿ ನಾನು ಉಳಕೊಂಡ್ವಿ. ಪುಣ್ಯಾ ಅಂದ್ರ ಮನೀ ಮಗ್ಗಲಕ ನಮ್ಮ ಕಡಿಯವ್ರು ಇದ್ರು.

ಈ ಕೆಲಸ ಹಿಡದ ಮ್ಯಾಗ ತಂಗಿಗಿ ಚೊಲೋ ಸಾಲಿಗಿ ಹಾಕಿದ್ಯಾ. ಮುಂಜಾನಿ ಆಕಿಗಿ ಸಾಲಿಗಿ ಕಲಸಿ ಬಂದಾವ ಒಮ್ಮೆ ರಾತ್ರಿ ಮೊಕ್ಕೊಂಡಾಗ ಹೋಗತಿದ್ದ್ಯ ರೀ, ಅಕಿ ಮಧ್ಯಾಹ್ನ ಬಂಡ ಮ್ಯಾಗ ಮಗ್ಗಲಕ ಚಿಗವ್ವ ಇದ್ರಲ್ರಿ ಅವರ ನೋಡ್ಕೊತಿದ್ರು, ಒಂದಿನಾ ಆದರು ಜಲ್ದಿ ಬರುದಿಲ್ಲಲ ಅಣ್ಣಾ ನೀನು ಅನ್ನಕ್ಕಿ ನಮ್ಮ ಅವಿ, ಈ ವಾಸನಿ ಹೊತ್ತ ಹ್ಯಾಂಗ ಜಲ್ದಿ ಹೋಗುದ್ರಿ ಸರ್ ಮನಿಗೆ? ದಿನಾ ಬಾಳ ಕೊಡು ಕಸದ ಜೊತಿ ಇರಬೇಕಂದ್ರ ಮತ್ತೊಂದು ವಾಸನಿ ಹುಡುಕ್ಕೋಬೇಕಿತ್ರಿ, ಕುಡಿಲಾರ್ದ ಕೆಲಸಾನ ಆಗಂಗಿಲ್ಲ ಅಂತ ಗೊತ್ತಾದ ಮ್ಯಾಲಿ ವಾಸನಿ ಆಕಿಗಿ ಹತ್ತಬಾರ್ದು ಅಂತ ರಾತ್ರಿನ ಹೋಗುದು ರೂಢಿ ಮಾಡ್ಕೊಂಡ್ಯಾರೀ. ಪಗಾರ ಚೊಲೋ ಇತ್ತು, ಅವಿ ಸಾಲಿಗಿ ನಾಕ ರೊಕ್ಕಾ ಜಮಾ ಆಗುದು ಆತದ ಅನ್ನೂ ಆಸ್ಯಾ, ಎಲ್ಲಾ ಚೋಲೊನಾ ಇತ್ತ ರೀ.

ಮೊನ್ನೆ ಒಂದಿನಾ ಚಿಗವ್ವನ ಫೋನ್ ಬಂತ್ರಿ. ಮಳಿ ಹೊಡ್ಯಾಕತ್ತಿತ್ತು . ರಾತ್ರಿ ಆಗಾಕತ್ತಿತ್ತು. ‘ಇನ್ನಪ್ಪಾ, ಮನಿಗಿ ಬಾ ನಿಮ್ ಅವಿ ಹಬ್ಬಾ ಮಾಡ್ಯಾಳ’ ಅಂದ್ಲು. ಗೊತ್ತಾಗಲಿಲ್ಲ.

ಏನಾಯ್ತ ಬೆ , ಅವಿಗಿ ಆರಾಮದಾಳ? ಅಂದೆ

‘ಅಯ್ಯ ಹುಚ್ಚಪ್ಪ, ಆರಾಮದಾಳೋ. ದೊಡ್ಡಕ್ಯಾಗ್ಯಾಳ, ಬಾ ಮನಿಗಿ. ದಿನಾ ತಡಾ ಮಾಡ್ತಿ ಅಂತ. ನಾನಾ ಫೋನ್ ಹಚ್ಚದ್ಯಾ.

ಸರ್, ಒಂದ್ ನಿಮಿಷ ಸುಮ್ಮ ನಿಂತ್ಯಾ ರೀ ನಾನು. ಅಷ್ಟ ದಿನಾ ಅಕಿ ಅಷ್ಟು ದೊಡ್ಡಕ್ಯಾಗ್ಯಾಳ ಅಂತ ಅನ್ಸಿದ್ದೆ ಇಲ್ರಿ . ಯಾಕ ಗೊತ್ತಿಲ್ಲಾ. ಶಶಿಧರ್ ಸಾಹೇಬರಿಗಿ ಫೋನ್ ಹಚ್ಚಿ ನಂಗ್ ಯಾಡ ದಿನಾ ರಜಾ ಬೇಕ್ರಿ ಅಂದ್ಯಾ. ಕೆಲಸಕ್ಕ ಸೇರಿದಾಗಿಂದ ಒಂದ್ ದಿನಾನೂ ರಜಾ ಕೇಳಿಲ್ಲಲೋ ಅಂತಿದ್ರು ಸಾಹೇಬ್ರು,

ಯಾಕೋ ಮೂರ್ತಿ. ರಜಾ ಕೇಳ್ತಾ ಇದಿ ಅಂದು, ಹೋಗು ಎರಡು ದಿನಾ ಯಾಕೆ ಮೂರೂ ದಿನಾ ಹೋಗು ಅಂದ್ರು.

ಮನಿಗಿ ಬರುದ್ರೋಳಗ ಚಿಗವ್ವ ಅವಿಗಿ ನೀರ ಹಾಕಿ ಒಂದ ಮೂಲ್ಯಾಗ ಕುಂದರಿಸಿದ್ದಳ್ರಿ. ಹೊರಗ ಮಳಿ ಜೋರ ಹೊಡ್ಯಾಕತ್ತಿತ್ತು. ಅವ್ರ ಕೊಟ್ಟಿದ್ದ ಸಜ್ಜಕಾ ಹಾಲ ಉಂಡ ಮೊಕ್ಕೊಂಡ್ವಿ. ಮರದಿನಾ ಮನ್ಯಾಗ ಉಳದ್ಯಾ. ಜಳಕದ ರೂಮ್ ಬ್ಯಾರೆ ಇಲ್ಲ ಅಲ್ರಿ ಅಲ್ಲೇ ಜಳಕಾ ಮಾಡಿ ತನ್ನು ಬಟ್ಟಿ ತೊಳದ ಹಾಕೋತದು. ಅವತ್ತಿನ ಆ ಬಟ್ಟಿನೂ ತನ್ನ ಬಟ್ಟಿ ತಳಗ ಒಣಗಾಕ ಹಾಕತು. ಅವಿಗಿ ನಾಷ್ಟಕ ಉಪ್ಪಿಟ್ಟ ಮಾಡಿ ಕೊಟ್ಟೆ. ಮಧ್ಯಾಹ್ನ ಏನಾರೆ ಪಾಯಸಾ ಮಾಡೂಣು ಅಂತ ಅಂಗಡಿಗಿ ಸಾಮಾನು ತರಾಕ ಹೋದ್ರ ರಪ್ಪ ಅಂತ ಮಳಿ. ಬಚ್ಚಲದಾಗ ನೀರ ಇಳ್ಯಾಕ ಸುರು ಆತವು ಅಂತ ನೆನಪಾತು. ಸರಾಸರಾ ಓಡಿ ಬಂದು ಒಣಗ ಹಾಕಿದ್ದ ಅರಬಿ ಏಳದ್ಯ ನೋಡ್ರಿ ಹಾಕಿದ್ದೆಲ್ಲಾ ಅರಬಿ ಮೈಮ್ಯಾಗ ಬಿದ್ದ ಕೆಟ್ಟ ವಾಸನಿ ಮೈ ತುಂಬಾ.

ಥೋ ಇವ್ನ ಇದೇನ ಹೊಲಸ ವಾಸ್ನಿಬೇ ಅಂತ ಜೋರಾಗೆ ಅಂದ್ಯಾ . ಅವಿ ನಂ ಜೋರ ದನಿ ಕೇಳಿ ಮಕ್ಕೊಂಡಿದ್ದು ಪಟ್ ಅಂತ ಎತ್ತು. ಹೊರಗ ಬಂದವ್ನ ಕಟ್ಟಿ ಮ್ಯಾಗ ಕುಂತ್ಯಾ. ಏನೂ ಮುಟ್ಟಬ್ಯಾಡ ಮೂರ ದಿನಾ ಅಂತ ಚಿಗವ್ವ ಹೇಳಿದ್ದಕ್ಕ ಮೂಲ್ಯಾಗ ಕುಂತಿದ್ದ ನಮ್ ಅವಿ ಗಾಬರ್ಯಾಗಿ ಬಂದು ಬಡಾ ಬಡಾ ತನ್ನು ಎಲ್ಲಾ ಬತ್ತಿ ಆ ಅರಬಿ ತಕ್ಕೊಂಡ ಮೂಲ್ಯಾಗ ಇಟಗೋತ್ರಿ.

ಮುಷ್ಠಿ ಬಿಗಿ ಮಾಡಿಕೊಳ್ಳುತ್ತ ಎದ್ದು ನಿಂತ ಶಿವಮೂರ್ತಿ. ಅವನ ಕಥೆ ನಾನೇಕೆ ಕೇಳುತ್ತಿದ್ದೆ ನನಗೇ ಗೊತ್ತಿರಲಿಲ್ಲ.

. ಏನೋ ಸಂಕಟ ಅವನ ಒಳಗೆ ಸಾಯುತ್ತಿತ್ತು. ಮತ್ತೆ ಕೂತ.

ಮನೀ ಎಲ್ಲ ಕಡೆ ಸೋರಿ ನೀರ ನೀರ ಆಗಿತ್ತರಿ. ಮಧ್ಯಾಹ್ನ ಆದಂಗ ಆದಂಗ ಇಡೀ ಮನಿ ವಾಸ್ನಿ ಹಿಡಿತು. ಒಣಗಲಾರ್ದ ಆ ಅರಬೀದ ವಾಸ್ನಿ ತಲಿ ಚಿಟ್ಟ ಅಂದಂಗಾಗಿ ಅವಿಗಿ ಜರ ಊಟ ಕೊಡು ಬೆ ಅಂತ ಚಿಗವ್ವ ಹೇಳಿ ಶಾವಿಗಿ ತುಪ್ಪಾ ಸಕ್ಕರಿ ಎಲ್ಲ ತಂದಿದ್ದ ಚೀಲ ಬಿಟ್ಟು ಹೊರಗ ಬಂದ ಬಿಟ್ಟ್ಯಾ. ತಲಿ ಗಿಮ್ಮ ಅನ್ನಾಕತ್ತಿತ್ತು. ಸೀದಾ ಹೋದವ್ನ ಕುಡದ ಕೆಲಸಕ್ಕ ಹೋಗಿಬಿಟ್ಯಾ ರೀ ಸರ್. ಯಾಕೋ ರಜಾ ಅಂದು ಮತ ಬಂದೀ ಅಂದ್ರು ಸರ್.

ಇಲ್ರಿ ಸರ್ ಕೆಲಸ ಆತು, ಅದಕ್ಕ ಅಂತಂದು ಸುಮ್ನಾದ್ಯ. ರಾತ್ರಿ ಆದಂಗ ಜೀವಾ ತ್ರಾಸ ಆಗಾಕತ್ತು ನೋಡ್ರಿ. ನಿಶಾ ಇಳದಂಗ ಅವಿ ಮುಖಾ ನೆನಪಾಗಾಕತ್ತು. ಹಂಗ್ಯಾಕ ಮಾಡಿದ್ಯಾ ನಾ ಅಂತ ನಂಗ ನನ್ನ ಮ್ಯಾಲಿ ಹೊಡ್ಕೋಳಂಗ ಸಿಟ್ಟ ಬಂತ್ರಿ. ತಪ್ಪಾಯ್ತು ಅವಿ, ಅಂತ ಹೇಳಿ ಅಡಗಿ ಮಾಡಿ ಬಡಸಬೇಕು. ಮಳಿ ನಿಂತದ ನಾನ ಮನಿ ಸ್ವಚ್ಛ ಮಾಡದ್ರಾತು ನಾಳೆ ಅವಿಜಿ ಹೊಸ ಅರಬಿ ತಂದ್ರಾತು ಅಂತನಕೋತ ಹಣ್ಣ ಹೂವಾ ತಗೊಳ್ಳಾಕ ಅಂಗಡಿಗಿ ಬರೂದಕ ಚಿಗವ್ವನ ಫೋನ್. ಯಾಕ ಒಮ್ಮೆ ಏಡಿ ಧಸಕ್ ಅಂತ ನೋಡ್ರಿ ಸರ್ . ಫೋನ್ ಎತ್ತಲಾರ್ದ ಮನಿಗೆ ಓಡದ್ಯಾ.

ನಾ ಏನ್ ಅನ್ಕೊಂಡ್ಯಾ ಅದ ಆಗಿಬಿಟ್ಟಿತ್ತರಿ ಸರ್ .. ಅನ್ನುತ್ತಾ ಮುಸಿ ಮುಸಿ ಅಳತೊಡಗಿದ. ಒಂದು ಕ್ಷಣ ಜನ ಏನೆಂದರೂ ಅಂದುಕೊಂಡೆ ಆದರೂ ನನ್ನ ಕಣ್ಣಲ್ಲೇ ನೀರು ತುಂಬಿದ್ವು. ನಮ್ ಅವಿಗೆ ಏನ್ ತಿಳಿತೋ ಏನೋ ಜೀವಾ ಕಳ್ಕೊಂಡ ಬಿಟ್ಟಾಳರಿ . ನಾ ಹೋಗುತನ ಜೀವಾ ಹೋಗಿಬಿಟ್ಟಿತ್ತು. ಅಳು ಜೋರಾಗಿ, ಮತ್ತೆ ಸಾವರಿಸಿಕೊಂಡ.

ತಪ್ಪು ಮಾಡಿಬಿಟ್ಟ್ಯಾ ನೋಡ್ರಿ ಸರ್. ಎಂಟು ದಿನಾ ಆತು. ಜೀವಾ ಎಲ್ಲಿ ನಿಂದ್ರವಲ್ಲದು. ಅವತ್ತ ಮೊನ್ನಿ ಒಂದಿನ ಮಣಿ ಅಣ್ಣಗ ಕೇಳಿದ್ಯಾ . ನೀವು ಬಂದೆ ಇಲ್ಲಾ ಅಂದ್ರು. ಫೋನ್ ನಂಬರ್ ನು ಕೊಟ್ಟ ಬಂದಿದ್ದ್ಯಇಷ್ಟ ದಿನಾ ಆದ ಮ್ಯಾಲ ಇವತ್ತು ನೀವು ಸಿಕ್ಕರಿ . ತಪ್ಪು ತಿಳ್ಕೋಬ್ಯಾಡ್ರಿ ಸರ್. ನಾ ನಿಮಗ ಇದೆಲ್ಲಾ ಹೇಳ್ಕೊಳ್ಳಾಕ ಏನ್ ಸಂಬಂಧಾನೂ ಇಲ್ಲಾ. ಆದರ ಒಂದನಸ್ತು, ನಿಮ್ಮ ಬಾಂಕ್ಣ್ಯಾಗ ಸಾಲಾ ಕೇಳಿದ್ಯಾ ರೀ. ಮಳಿಗಾಲ ಬರುದ್ರೋಳಗ ಇದ ಮನಿದು ಸ್ವಲ್ಪ ಪತ್ರಾಸ ತಗದ ಹಾಕೋಬೇಕು ಅಂತ. ನಿಮಗ ಮಾತಾಡದ್ರ ಕೆಲಸ ಆತದ ಅಂತ ನಿಮ್ಮ ಆಫೀಸ್ ನ್ಯಾಗ ಕೆಲಸಾ ಮಾಡವ್ರು ಹೇಳಿದರ್ ರೀ . ಅರ್ಜಿ ಕೊಟ್ಟ ಭಾಳ ದಿನಾ ಆಗಿತ್ತ ರೀ. ಅದನ್ನ ಕೇಳಾಕ ಅವತ್ತಿಂದ ಕಾದ್ಯಾ. ಯಾಡ ದಿನಾ ಜಾತ್ರಿಗಿ ಹೋಗಿ ಬರುದ್ರೋಳಗ ನಿವ ಭೇಟಿನ ಆಗಲಿಲ್ಲ. . ನನ್ನ ನಸೀಬ್ ಕ ನೀವ ಸಿಗಲಿಲ್ಲ. ಮಳಿ ಪತ್ರಾಸ ವಾಸ್ನಿ ಎಲ್ಲಾ ಕೂಡಿ ನನಗ ಅಪರಾಧಿ ಮಾಡಿಬಿಟ್ವು ರೀ ಸರ್.. ಅಂತ ಅಳುತ್ತ ಕಣ್ಣೊರೆಸಿಕೊಂಡ.

ಅವನು ಎದ್ದು ನಿಂತ. ನಾನು ಕೂತೆ ಇದ್ದೆ. ಅವತ್ತು ಬ್ಯಾಂಕಿನಲ್ಲಿ ಇಂಪಾರ್ಟೆಂಟ್ ಫೈಲ್ ಮಾತ್ರ ಸೈನ್ ಹಾಕಿ ಬಂದದ್ದು ನೆನಪಾಯ್ತು.

ಸರ್ ತಪ್ಪು ತಿಳ್ಕೋಬ್ಯಾಡ್ರಿ , ನಿಮ್ಮ ಮುಂದ ಯಾಕ ಹೇಳ್ಕೊಬೇಕು ಅನ್ನಸ್ತೊ ಹೇಳಿಬಿಟ್ಟ್ಯಾ ಸರ್. ನಂದ ಅರ್ಜಿ ಮತ್ ಯಾರಿಗರ ಅವಶ್ಯಕತಿ ಇದ್ದವ್ರಿಗಿ ಕೊಟ್ಟ ಬಿಡ್ರಿ ಸರ್’ ಅನ್ನುತ್ತಾ ಅವರು ಇನ್ನಷ್ಟು ಎತ್ತರದವರಾದ್ರು. ನಿಧಾನಕ್ಕೆ ಎದ್ದು ಮನೆಗೆ ಬಂದೆ.

ಮರುದಿನ ಚಾ ಕುಡಿಯಲು ಹೋದಾಗ ಶಿವಮೂರ್ತಿ ಕಸ ಎತ್ತಿ ಹಾಕುವದನ್ನು ನೋಡಿದೆ. ಸ್ಯಾನಿಟರಿ ಪ್ಯಾಡ್ಗಳನ್ನು ಬೇರ್ಪಡಿಸಿ ಪಾಜಿಯೊಗೆ ತುಂಬುತ್ತಿದ್ದ. ಅಲ್ಲಿಂದಲೇ ಕೈ ಮುಗಿದ.

ಮಳೆ ಹನಿ ಮತ್ತೆ ಸಣ್ಣಗೆ ಶುರುವಾದವು.

- ಅನನ್ಯ ತುಷಿರಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net