ಸಂಪಾದಕೀಯ: ಸ್ಥಳೀಯ ಸ್ಪರ್ಶ; ಹಲವು ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ

Edit
Published on

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಅನಾವರಣ ಮಾಡಿ, ಥೀಮ್ ಪಾರ್ಕ್ ಉದ್ಘಾಟಿಸಿದ ಪ್ರಧಾನಿ ಮೋದಿ, ವಿಮಾನ ನಿಲ್ದಾಣದಲ್ಲಿ ಟರ್ವಿುನಲ್-2 ಉದ್ಘಾಟನೆಯನ್ನೂ ಮಾಡಿದರು. ಜತೆಗೆ, ಮೈಸೂರು-ಚೆನ್ನೈ ವಂದೇ ಭಾರತ್ ರೈಲು ಹಾಗೂ ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿಗೆ ಚಾಲನೆ ನೀಡಿದರು. ಈ ವಂದೇ ಭಾರತ್ ರೈಲು ದಕ್ಷಿಣ ಕರ್ನಾಟಕದ ಇಂಥ ಮೊದಲ ರೈಲು ಎಂಬುದು ವಿಶೇಷ.

ದೇಶದ ಅತಿ ವೇಗದ ರೈಲು ಎಂಬ ಹೆಗ್ಗಳಿಕೆಯ ಇದು ಪ್ರಯಾಣಿಕರಿಗೆ ಐಷಾರಾಮಿ ಸವಲತ್ತುಗಳನ್ನು ಹೊಂದಿದೆ. ಭಾರತೀಯ ರೈಲ್ವೆ ವ್ಯವಸ್ಥೆ ಈಚಿನ ವರ್ಷಗಳಲ್ಲಿ ತನ್ನನ್ನು ಬದಲಾವಣೆಗೆ ತೆರೆದುಕೊಂಡಿದ್ದು, ಇಂಥ ರೈಲಿನ ಸೇರ್ಪಡೆ ಜನರಿಗೆ ಹೆಚ್ಚುವರಿ ಅನುಕೂಲತೆಗಳನ್ನು ಒದಗಿಸಲು ಸಹಕಾರಿಯಾಗಲಿದೆ. ಹಾಗೇ, ರೈಲಿನ ಮೂಲಕ ಕಾಶಿ ಯಾತ್ರೆಗೆ ವ್ಯವಸ್ಥೆ ಮಾಡಿರುವುದು ಜನಭಾವನೆಗೆ ಹತ್ತಿರವಾದ ಕ್ರಮ. ಬೆಂಗಳೂರು ನಿರ್ವತೃ ಕೆಂಪೇಗೌಡರ ಪ್ರತಿಮೆಯು ಆ ದಕ್ಷ ಆಡಳಿತಗಾರನಿಗೆ ಸಲ್ಲಿಸುವ ಸೂಕ್ತ ಗೌರವ ಹಾಗೂ ಮುಂದಿನ ದಿನಗಳಲ್ಲಿ ಇದು ಬೆಂಗಳೂರಿನ ಹೆಗ್ಗುರುತುಗಳಲ್ಲಿ ಒಂದಾಗುವುದು ಖಚಿತ. ಆದರ್ಶ ಆಡಳಿತ ಹಾಗೂ ಯೋಜನಾಬದ್ಧ ನಗರ ನಿರ್ವಣದ ವಿಷಯದಲ್ಲಿ ಕೆಂಪೇಗೌಡರು ಸರ್ವಕಾಲಕ್ಕೂ ಮಾದರಿಯಾಗಬಲ್ಲರು. ಅವರ ಜೀವನ-ಸಾಧನೆ ಆಡಳಿತಗಾರರಿಗೆ ಮೇಲ್ಪಂಕ್ತಿಯಾಗಬೇಕು.

ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಇದೀಗ ಉದ್ಘಾಟನೆಗೊಂಡಿರುವ ಎರಡನೇ ಟರ್ವಿುನಲ್ ಭವ್ಯವಾಗಿ ನಿರ್ವಿುತವಾಗಿದ್ದು, ಜಾಗತಿಕ ನಿಲ್ದಾಣಗಳ ಮಟ್ಟದಲ್ಲಿದೆ ಎಂದು ತಜ್ಞರಿಂದ ಹೊಗಳಿಸಿಕೊಂಡಿದೆ. ಈ ಟರ್ವಿುನಲ್ ವಿನ್ಯಾಸ, ಹೊಸತನ ಜನರ ಗಮನ ಸೆಳೆಯುತ್ತಿದೆ. ಇಲ್ಲಿ ದೇಶವಿದೇಶಗಳ ವಸ್ತುಗಳನ್ನು ಬಳಸಲಾಗಿದ್ದು, ವಿಶೇಷವಾಗಿ ಬಿದಿರನ್ನು ಬಳಸಿ ಆಕರ್ಷಕವಾಗಿ ಒಳಾಂಗಣ ವಿನ್ಯಾಸ ಮಾಡಿರುವುದು ಹೆಚ್ಚುಗಾರಿಕೆ. ಇದರಿಂದ ಬಿದಿರಿನ ಬಗ್ಗೆ ಸಹಜವಾಗಿ ಪ್ರಯಾಣಿಕರ ಆಸಕ್ತಿ ಹರಿಯಲಿದ್ದು, ರೈತರಿಗೆ ಕೂಡ ಕೆಲ ಮಟ್ಟಿಗೆ ಉತ್ತೇಜನ ನೀಡುವುದೆಂದು ನಿರೀಕ್ಷಿಸಲಾಗಿದೆ. ಮೊದಲು ಕೇವಲ ಅರಣ್ಯಬೆಳೆಯಾಗಿದ್ದ ಬಿದಿರು ಈಗ ಕೃಷಿ ಬೆಳೆಯಾಗಿ ಮನ್ನಣೆ ಪಡೆಯುತ್ತಿದೆ.

ಬಿದಿರಿನ ವಿವಿಧ ತಳಿಗಳು ಬರುತ್ತಿದ್ದು, ರೈತರ ಆದಾಯ ಹೆಚ್ಚಿಸುವಲ್ಲಿಯೂ ಕೊಡುಗೆ ನೀಡುತ್ತಿದೆ. ಸದಾಕಾಲ ಒಂದಿಲ್ಲೊಂದು ಸವಾಲು ಎದುರಿಸುತ್ತಲೇ ಇರುವ ಕೃಷಿಕರಿಗೆ ಮಿಶ್ರ ಬೇಸಾಯ ಪ್ರಯೋಜನಕಾರಿಯಾಗಬಲ್ಲದು. ಅದರಲ್ಲೂ ಈಗ ರೈತರ ಆದಾಯ ದುಪ್ಪಟ್ಟು ವಿಷಯ ಬಹಳ ಚರ್ಚೆಯಲ್ಲಿದ್ದು, ಇಂಥ ಉಪಕ್ರಮಗಳು ಈ ನಿಟ್ಟಿನಲ್ಲಿ ನೆರವಾಗಲಿವೆ. ಸರ್ಕಾರಿ ಯೋಜನೆಗಳಲ್ಲಿ, ನಿರ್ವಣಗಳಲ್ಲಿ ಈ ರೀತಿಯಾಗಿ ಹೊಸತರಹದ ಆಲೋಚನೆಗಳನ್ನು ಕೃತಿಗಿಳಿಸುವುದರಿಂದ ಬಗೆ ಬಗೆಯ ಪ್ರಯೋಜನಗಳಿವೆ. ವಿಶೇಷವಾಗಿ ಕರೊನೋತ್ತರ ದಿನಗಳಲ್ಲಿ ಸ್ಥಳೀಯತೆಗೆ ಆದ್ಯತೆ ನೀಡಲಾಗುತ್ತಿದ್ದು, ಇದರಿಂದ ಸ್ಥಳೀಯ ಆರ್ಥಿಕತೆ ಚೇತರಿಕೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಕೆಲಮಟ್ಟಿಗೆ ನೆರವಾಗುತ್ತಿದೆ. ಪ್ರಾದೇಶಿಕ ಸಂಸ್ಕೃತಿ ಕಾಪಾಡಿಕೊಂಡು ಹೋಗುವುದು ಹಾಗೂ ತಳಹಂತಕ್ಕೂ ಅಭಿವೃದ್ಧಿಯ ವೇಗ ತಲುಪಬೇಕಾದುದು ಇಂದಿನ ತುರ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net