ಉಪಸಮರ | ಕೈ-ಕಮಲ ಸಮಬಲ: ಕಾಂಗ್ರೆಸ್ ತೆಕ್ಕೆಗೆ ಹಾನಗಲ್, ಸಿಂದಗಿ ಬಿಜೆಪಿ ವಶ, ಸಾರ್ವತ್ರಿಕ ಚುನಾವಣೆಯ ನಾಡಿಮಿಡಿತ ಗೋಚರ

Front
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ವಿವಿಧ ರಾಜ್ಯಗಳ 30 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಒಟ್ಟಾರೆ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಮೆರೆದಿದ್ದರೂ, ರಾಜ್ಯದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ಜಿದ್ದಾಜಿದ್ದಿ ಇರುವುದನ್ನು ಹಾನಗಲ್ ಹಾಗೂ ಸಿಂದಗಿ ಕ್ಷೇತ್ರಗಳ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ. ಸ್ವತಃ ಮುಖ್ಯಮಂತ್ರಿಗಳೇ ಪ್ರತಿಷ್ಠೆ ಪಣಕ್ಕಿಟ್ಟು ಪ್ರಚಾರ ನಡೆಸಿದ್ದ ಹಾನಗಲ್ ಕಾಂಗ್ರೆಸ್ ಪಾಲಾಗಿದ್ದರೆ, ಸಿಂದಗಿ ಗೆಲ್ಲುವ ಮೂಲಕ ಬಿಜೆಪಿ ಕೊಂಚ ಸಮಾಧಾನ ಪಟ್ಟಿದೆ. ಎರಡೂ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡಿರುವ ಜೆಡಿಎಸ್ ಮುಖಭಂಗಕ್ಕೀಡಾಗಿದೆ. ರಾಜ್ಯದ ಈ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲೂ ರಾಷ್ಟ್ರೀಯ ಪಕ್ಷಗಳ ನಡುವಿನ ಪೈಪೋಟಿ ಇದೇ ಹಾದಿಯಲ್ಲಿರಬಹುದು ಎಂಬುದಕ್ಕೆ ಮುನ್ನುಡಿ ಬರೆದಿದೆ. ಉಪ ಚುನಾವಣೆ ನಡೆದ ದೇಶದ 30 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 8, ಬಿಜೆಪಿ 7ರಲ್ಲಿ ಗೆಲುವು ಸಾಧಿಸಿವೆ. ಉಳಿದ 15 ಕ್ಷೇತ್ರಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿವೆ. ಹಾನಗಲ್​ನಲ್ಲಿ ಕಾಂಗ್ರೆಸ್​ನ ಶ್ರೀನಿವಾಸ ಮಾನೆ, ಸಿಂದಗಿಯಲ್ಲಿ ಬಿಜೆಪಿಯ ರಮೇಶ್ ಭೂಸನೂರ ಗೆಲುವು ಸಾಧಿಸಿದ್ದಾರೆ. ಯಾವುದೇ ಉಪ ಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲವಾದರೂ ಸಾರ್ವತ್ರಿಕ ಚುನಾವಣೆ 16 ತಿಂಗಳು ಇರುವಾಗ ನಡೆದಿರುವ ಈ ಚುನಾವಣೆಯ ಫಲಿತಾಂಶ ಜನರ ನಾಡಿಮಿಡಿತದ ಬಿಂಬ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಆಗಿನ ಸಂದರ್ಭಗಳು, ಚುನಾವಣಾ ವಿಷಯಗಳೇ ಬೇರೆ ಬೇರೆಯಾಗಿರುತ್ತವೆ. ದೇಶದಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳ ಎದುರು ಅಸ್ತಿತ್ವ ಉಳಿಸಿಕೊಂಡಿವೆ. ಆದರೆ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಪ್ರಾಬಲ್ಯ ಉಳಿಸಿಕೊಂಡಿವೆ.

ಕಾಂಗ್ರೆಸ್ ಹಾಗೂ ಬಿಜೆಪಿಯ ಮತಬ್ಯಾಂಕ್ ಉಳಿದಿದೆ. ಸಿಂದಗಿಯಲ್ಲಿ ಕಳೆದ ಬಾರಿ ಆಗಿದ್ದ ಸೋಲಿನ ಅನುಕಂಪ ಬಿಜೆಪಿಗೆ ಸಿಕ್ಕಿದೆ. ಹಾನಗಲ್​ನಲ್ಲಿ ಶ್ರೀನಿವಾಸ ಮಾನೆ ಮಾಡಿದ ಕೆಲಸ ಕೈ ಹಿಡಿದಿದೆ. ಸಿಂದಗಿಯಲ್ಲಿ ಜೆಡಿಎಸ್ ಮತಗಳು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಹಂಚಿ ಹೋಗಿವೆ. ಮಾಜಿ ಪ್ರಧಾನಿ ದೇವೇಗೌಡರೇ ಹತ್ತು ದಿನ ಕ್ಷೇತ್ರದಲ್ಲಿ ಕುಳಿತರೂ ಜನರ ಮನಗೆಲ್ಲಲಾಗಿಲ್ಲ. ಅವರ ಪಕ್ಷದ ಬಗ್ಗೆ ಇರುವ ಭಾವನೆ ದೂರ ಮಾಡಲು ಸಾಧ್ಯವಾಗಲಿಲ್ಲ.

ಎಚ್ಚರಿಕೆಯ ಗಂಟೆ: ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದು ಕ್ಷೇತ್ರ ಗೆದ್ದಿದ್ದರೂ ಎರಡೂ ಪಕ್ಷಗಳಿಗೆ ಈ ಫಲಿತಾಂಶ ಎಚ್ಚರಿಕೆ ಸಂದೇಶ ರವಾನಿಸಿದೆ. ಬಿಜೆಪಿಗೆ ರಾಜ್ಯದಲ್ಲಿ ಕಾಂಗ್ರೆಸ್ಸೇ ಪರ್ಯಾಯ ಹೊರತು ಜೆಡಿಎಸ್ ಅಲ್ಲ ಎಂಬುದನ್ನು ಹೇಳಿದೆ.

ಬೆಲೆ ಏರಿಕೆ, ನಿರುದ್ಯೋಗ ಸೇರಿ ಅನೇಕ ಸಮಸ್ಯೆಗಳಿದ್ದರೂ ಅವೆಲ್ಲವನ್ನೂ ಮೀರಿ ಚುನಾವಣೆ ನಡೆದಿದೆ. ಸರ್ಕಾರದ ವೈಫಲ್ಯಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಅದೇ ರೀತಿ ಬಿಜೆಪಿಗೆ ತನ್ನ ಸಾಧನೆ ಹೇಳಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಎರಡೂ ಕ್ಷೇತ್ರಗಳು ಯಾವುದೇ ಒಂದು ಪಕ್ಷದ ಪಾಲಾಗಲು ಸಾಧ್ಯವಾಗಿಲ್ಲ.

ಬಿಜೆಪಿ ವೈಯಕ್ತಿಕ ಟೀಕೆ ಟಿಪ್ಪಣಿಗಳಿಗಿಂತ ತನ್ನ ಸಾಧನೆಗಳನ್ನು ಜನರ ಮುಂದಿಡುವ ಅಗತ್ಯವಿದೆ ಎಂಬುದನ್ನು ಈ ಫಲಿತಾಂಶ ತಿಳಿಸಿದೆ. ಬಿಜೆಪಿಯಲ್ಲಿನ ಗುಂಪುಗಾರಿಕೆ, ಪ್ರಚಾರದಲ್ಲಿ ಎಲ್ಲರೂ ಸಕ್ರಿಯರಾಗಿಲ್ಲದಿರುವುದು ಇವೇ ಮೊದಲಾದ ಸಂಗತಿಗಳು ಹಾನಗಲ್​ನಲ್ಲಿ ಪರಿಣಾಮ ಬೀರಿವೆ.

ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದು, ಅವರ ಪಕ್ಕದ ಕ್ಷೇತ್ರವಾದ ಹಾನಗಲ್​ನಲ್ಲಿ ಪರಿಣಾಮ ಬೀರಿದೆ. ಯಡಿಯೂರಪ್ಪನವರನ್ನು ಬಿಜೆಪಿ ಕಾಟಚಾರಕ್ಕೆ ಬಳಸಿಕೊಂಡಿದೆ. ವಿಜಯೇಂದ್ರ ಹಾನಗಲ್​ನಲ್ಲಿ ಏಕಾಂಗಿಯಾಗಿ ಪ್ರಚಾರ ಮಾಡುವಂತಹ ಸ್ಥಿತಿ ತರಲಾಗಿತ್ತು. ಇವೆಲ್ಲ ಅಂಶಗಳು ಪರಿಣಾಮ ಬೀರಿವೆ.

ಕಾಂಗ್ರೆಸ್​ನಲ್ಲೂ ಗುಂಪುಗಾರಿಕೆ ಇದ್ದೇ ಇದೆ. ಸಿಂದಗಿ ಮಟ್ಟಿಗೆ ಒಗ್ಗಟ್ಟು ಕಾಣಲಿಲ್ಲ. ಬಿಜೆಪಿಯ ತಂತ್ರಕ್ಕೆ ಉತ್ತರ ನೀಡುವುದರಲ್ಲಿಯೇ ಕಾಂಗ್ರೆಸ್ ಸುಸ್ತಾಗುವಂತಾಯಿತು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಈ ಅಂಶಗಳನ್ನು ತಿದ್ದಿಕೊಳ್ಳದಿದ್ದರೆ ಮತ್ತೆ ಅತಂತ್ರ ವಿಧಾನಸಭೆ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಜೆಡಿಎಸ್ ವೈಯಕ್ತಿಕ ನೆಲೆಯಲ್ಲಿ ಟೀಕೆ ಟಿಪ್ಪಣಿ, ಬರೀ ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡದೇ ಕಾರ್ಯತಂತ್ರ ಬದಲಾವಣೆಯ ಮೂಲಕ ಜನರ ಮನಗೆಲ್ಲುವ ಅಗತ್ಯವಿದೆ ಎಂಬುದನ್ನು ಫಲಿತಾಂಶ ಹೇಳಿದೆ.

ಜನಪರ ಹೋರಾಟ ಅಗತ್ಯ: ಸರ್ಕಾರ ನಡೆಸುವವರು ಜನಪರವಾಗಿರಬೇಕು ಎಂಬುದನ್ನು ಫಲಿತಾಂಶ ಹೇಳಿದ್ದರೆ, ಪ್ರತಿಪಕ್ಷಗಳು ಜನಪರ ಹೋರಾಟಗಳನ್ನು ಹೆಚ್ಚು ಮಾಡಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ರವಾನಿಸಿದೆ. ಅದನ್ನು ಮೂರೂ ಪಕ್ಷಗಳು ಅರ್ಥಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಬಿಎಸ್​ವೈ, ಸಿದ್ದು ಅನಿವಾರ್ಯತೆ: ಬಿಜೆಪಿಗೆ ಯಡಿಯೂರಪ್ಪ ಹಾಗೂ ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತು ಮಾಡಿದೆ. ಬಿಜೆಪಿ ಯಡಿಯೂರಪ್ಪನವರನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಹೈಕಮಾಂಡ್ ಎಷ್ಟೇ ಪ್ರಬಲವಾಗಿದ್ದರೂ ರಾಜ್ಯದ ಮಟ್ಟಿಗೆ ಯಡಿಯೂರಪ್ಪ ಅವರೇ ಬಿಜೆಪಿಯ ಆಧಾರಸ್ತಂಭ. ಅದೇ ರೀತಿ ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅವರೇ ಗಟ್ಟಿ. ಅವರನ್ನು ಬಿಟ್ಟರೆ ದೊಡ್ಡ ಮತಬ್ಯಾಂಕ್ ನಷ್ಟವಾಗುತ್ತದೆ.

ಅಭ್ಯರ್ಥಿ ಆಯ್ಕೆ ವೈಫಲ್ಯ: ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಎಡವಿರುವುದು ಸ್ಪಷ್ಟವಾಗಿದೆ. ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಯಾವುದೇ ಸಮುದಾಯಕ್ಕೆ ಒಲವಿರಲಿಲ್ಲ. ಅವರ ಬಗ್ಗೆ ಸಾಕಷ್ಟು ವಿರೋಧ ಮೊದಲಿನಿಂದಲೂ ಇತ್ತು. ಇತ್ತ, ಹಾನಗಲ್​ನಲ್ಲಿ ದಿವಂಗತ ಉದಾಸಿ ಕುಟುಂಬವನ್ನು ಕಡೆಗಣಿಸಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದಾಸಿ ಸೊಸೆಗೆ ಟಿಕೆಟ್ ನೀಡುವಂತೆ ಶಿಫಾರಸು ಮಾಡಿದ್ದರು. ಆದರೆ ವರಿಷ್ಠರು ಹೊಸ ಅಭ್ಯರ್ಥಿ ತಂದರು. ಹೀಗಾಗಿಯೇ ಎರಡೂ ಪಕ್ಷಗಳು ಬೆಲೆ ತೆತ್ತಿವೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಬೊಮ್ಮಾಯಿಗೆ ಸಿಕ್ಕದ ಅಳಿಯತನ: ಈವರೆಗಿನ ಉಪ ಚುನಾವಣೆಗಳಲ್ಲಿ ಯಾವ ಸಿಎಂ ಬಸವರಾಜ ಬೊಮ್ಮಾಯಿ ಅವರಷ್ಟು ದಿನ ಕ್ಷೇತ್ರದಲ್ಲಿ ಹೋಗಿ ಕೂತಿರಲಿಲ್ಲ. ಇಡೀ ಮಂತ್ರಿಮಂಡಲ ಶಕ್ತಿಸೌಧ ಬಿಟ್ಟು ಇಷ್ಟು ದಿನ ಪ್ರಚಾರದಲ್ಲಿ ತೊಡಗಿದ ಉದಾಹರಣೆ ಇಲ್ಲ. ತವರು ಜಿಲ್ಲೆಯ ಹಾನಗಲ್ ಕ್ಷೇತ್ರ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿತ್ತು. ಜತೆಗೆ ಹಾನಗಲ್​ಗೆ ಅವರು ಅಳಿಯ ಸಹ. ಮುಖ್ಯಮಂತ್ರಿ ಆದ ನಂತರ ಮೊದಲ ಉಪ ಚುನಾವಣೆ. ‘ಮತ ಕೊಟ್ಟರೆ ಅಳಿಯತನಕ್ಕೆ ಬೆಲೆ’ ಎಂಬ ಮಾತನ್ನು ಅವರೇ ಹೇಳುತ್ತಿದ್ದರು. ಆದರೆ ಹಾನಗಲ್​ನ ಜನ ಕ್ಷೇತ್ರದಲ್ಲಿ ಸಂಕಷ್ಟದಲ್ಲಿ ಕೆಲಸ ಮಾಡಿದ ಮಾನೆ ಅವರ ಕೈ ಹಿಡಿದರೆ ಹೊರತು ಅಳಿಯನದ್ದಲ್ಲ. ಬೊಮ್ಮಾಯಿ ತಮ್ಮ ಪ್ರಚಾರ ವೈಖರಿಯನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂಬುದು ಬಿಜೆಪಿಯಲ್ಲಿಯೇ ಕೇಳಿಬರುತ್ತಿರುವ ಮಾತು.

ಮತ ಕ್ರೋಡೀಕರಣ ತಂತ್ರ ಯಶಸ್ವಿ: ಮತ ಕ್ರೋಡೀಕರಣದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯಶಸ್ವಿಯಾಗಿವೆ. ಕಾಂಗ್ರೆಸ್ ಅಹಿಂದ ಮತಗಳನ್ನು ತನ್ನಿಂದ ದೊಡ್ಡ ಪ್ರಮಾಣದಲ್ಲಿ ದೂರ ಸರಿಯಲು ಬಿಟ್ಟಿಲ್ಲ. ಆದರೆ ಹೊಸ ಮತದಾರರು ಕಾಂಗ್ರೆಸ್ ತೆಕ್ಕೆಗೆ ಬಂದಿಲ್ಲ. ಬಿಜೆಪಿ ಹಿಂದು ಮತಗಳ ಕ್ರೋಡೀಕರಣದ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿ ಯಶಸ್ವಿಯಾಗಿದೆ. ಅಲ್ಪಸಂಖ್ಯಾತರ ಮತಗಳನ್ನು ಬಸವಕಲ್ಯಾಣ ರೀತಿಯಲ್ಲಿ ವಿಭಜನೆ ಮಾಡುವ ಜೆಡಿಎಸ್ ತಂತ್ರ ಫಲಿಸದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಆದ್ದರಿಂದಲೇ ಜೆಡಿಎಸ್ ಠೇವಣಿ ಕಳೆದುಕೊಂಡಿದ್ದು.

ಅಲ್ಪಸಂಖ್ಯಾತರು ಹಿಂದೆಯೂ ಜೆಡಿಎಸ್​ನ ನಂಬಿಲ್ಲ, ಮುಂದೆಯೂ ನಂಬಲ್ಲ. ಅದೊಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ. ಸಿಂದಗಿಯಲ್ಲಿ ಜೆಡಿಎಸ್​ನಿಂದ ಬಂದ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಕೊರತೆಯಾಗಿದ್ದು ಸೋಲಿಗೆ ಕಾರಣವಾಗಿರಬಹುದು ಎಂಬ ಅನುಮಾನವಿದೆ. ಯಡಿಯೂರಪ್ಪ ಅವರೇ ಅಧಿಕಾರದಲ್ಲಿ ಇದ್ದಿದ್ದರೂ ಫಲಿತಾಂಶ ಹೀಗೆ ಇರುತ್ತಿತ್ತು.

| ಸಿದ್ದರಾಮಯ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ

ಹಾನಗಲ್​ನಲ್ಲಿ ಬಿಜೆಪಿ ಸೋತಿರುವುದು ಬಸವರಾಜ ಬೊಮ್ಮಾಯಿ ನಾಯಕತ್ವಕ್ಕೆ ಹಿನ್ನಡೆ ಎಂಬ ವ್ಯಾಖ್ಯಾನ ಸರಿಯಲ್ಲ. ಸಾಮೂಹಿಕ ನಾಯಕತ್ವದಲ್ಲೇ ಉಪ ಸಮರ ಎದುರಿಸಿದ್ದು, ಸೋಲು-ಗೆಲುವಿನಲ್ಲೂ ಸಾಮೂಹಿಕ ಹೊಣೆಗಾರಿಕೆಯಿದೆ. ಪಕ್ಷದ ವೇದಿಕೆಯಲ್ಲಿ ಈ ಫಲಿತಾಂಶದ ಅವಲೋಕನ ಮಾಡಲಾಗುವುದು. ಒಂದು ಕ್ಷೇತ್ರದಲ್ಲಿ ಗೆದ್ದ ಮಾತ್ರಕ್ಕೆ ಕಾಂಗ್ರೆಸ್ ಮತ್ತದರ ನಾಯಕರು ಬೀಗಬೇಕಿಲ್ಲ.

| ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

ಉಪಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ. ದೇವೇಗೌಡರು ಇನ್ನೂ ಬದುಕಿದ್ದಾರೆ, ಹೋರಾಟ ಮುಂದುವರಿಸುತ್ತಾರೆ. ವಯಸ್ಸಾಗಿದ್ದರೂ, ಸಂಘಟನೆ ಕಾರ್ಯ ಮಾಡುವೆ. ಚುನಾವಣೆಯಲ್ಲಿ ಕಾಂಗ್ರೆಸ್​ಗಿಂತ ಬಿಜೆಪಿ ಹೆಚ್ಚು ಹಣ ಖರ್ಚು ಮಾಡಿದೆ. ಒಂದು ಮನೆಗೆ 10 ಸಾವಿರ ರೂ. ಕೊಟ್ಟಿದ್ದಾರೆ ಎಂದು ಚರ್ಚೆಯಾಗಿದೆ. ಕಾಂಗ್ರೆಸ್​ನವರೂ ಹಣ ಸುರಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಸಿಂದಗಿಯಲ್ಲಿ ಅಂಗಡಿ ಕುಟುಂಬಕ್ಕೆ ಒಳ್ಳೆಯ ಹೆಸರಿದೆ ಮತ್ತು ನಮಗೆ ಲಿಂಗಾಯತರು ಮತ ಹಾಕಿಲ್ಲ.

| ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿ

ಜನಬಲ ಗೆದ್ದಿದೆ, ಹಣಬಲ ಸೋತಿದೆ. ಕ್ಷೇತ್ರದ ಜನರಿಗೆ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತೇನೆ. ನಮ್ಮ ನಾಯಕರು ಚುನಾವಣೆಯಲ್ಲಿ ಸಾಕಷ್ಟು ಪರಿಶ್ರಮ ಹಾಕಿ, ಸರ್ಕಾರದ ತಂತ್ರಗಾರಿಕೆ ಮಣಿಸಿದ್ದಾರೆ. ಕ್ಷೇತ್ರದಲ್ಲಿ ನನ್ನ ಮೊದಲ ಆದ್ಯತೆ ಆಡಳಿತ ಯಂತ್ರ ಸುಧಾರಿಸುವುದು. ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತೇನೆ.

| ಶ್ರೀನಿವಾಸ ಮಾನೆ ಕಾಂಗ್ರೆಸ್​ನ ವಿಜೇತ ಅಭ್ಯರ್ಥಿ (ಹಾನಗಲ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net