

ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್ ಇದುವರೆಗೂ ಹಲವು ಗೀತೆಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ದುನಿಯಾ' ಎಂಬ ಹಾಡು, ಅವರ ಮಟ್ಟಿಗೆ ವಿಶೇಷ. ಕಾರಣ ಇದೊಂದು ಪ್ರಕೃತಿ ಗೀತೆ. ಈ ಹಾಡನ್ನು ಬಾಲಿವುಡ್ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್ ಸಂಯೋಜಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದೆ.
ಸಲೀಂ ಮತ್ತು ಸುಲೇಮಾನ್ ಜೋಡಿ ಪ್ರತೀ ವರ್ಷ 'ಭೂಮಿ' ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಇದೇ ಶೀರ್ಷಿಕೆಯಡಿ ಪ್ರತೀ ವರ್ಷ ಹಾಡುಗಳು ಮೂಡಿಬರುತ್ತಿದ್ದು, ಈ ಹಾಡುಗಳನ್ನು ದೇಶದ ಜನಪ್ರಿಯ ಗಾಯಕ-ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, 'ಭೂಮಿ 2022' ಆಲ್ಬಂನಲ್ಲಿ ಕನ್ನಡದಲ್ಲೂ ಒಂದು ಹಾಡು ಮೂಡಿಬಂದಿರುವುದು.
'ದುನಿಯಾ' ಎಂದು ಶುರುವಾಗುವ ಈ ಹಾಡಿಗೆ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಧ್ವನಿಯಾಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ರಚಿಸಿರುವ 'ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ ... ಕಲ್ಲುಗಳ ಮ್ಯಾಲೆ ಮಣ್ಣುಗಳ ಮ್ಯಾಲೆ ಪರಪಂಚ ... ಗಾಳಿಯಾಗೇ ಭೂಮಿ ನಿಂತೈತೆ ಸೋಜಿಗ ನೋಡೋ ... ಭೂಮಿಯಾಗೆ ಎಲ್ಲ ತುಂಬೈತೆ ...' ಎಂದು ಸಾಗುವ ಈ ಹಾಡಿನ ರಿದಮ್ ವಿಭಾಗದ ಉಸ್ತುವಾರಿಯನ್ನು ಜನಪ್ರಿಯ ಸಂಗೀತಗಾರ ತೌಫೀಕ್ ಖುರೇಷಿ ವಹಿಸಿಕೊಂಡಿದ್ದಾರೆ.
ಇತ್ತೀಚೆಗೆ ಈ ಹಾಡನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯಪ್ರಕಾಶ್ ಮತ್ತು ಸಲೀಮ್ ಮರ್ಚೆಂಟ್ ಸಹ ಹಾಜರಿದ್ದಾರೆ.