

ಬೆಂಗಳೂರು: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಶ್ವ ವಿಖ್ಯಾತ ಹಂಪಿಯನ್ನು ಒಡಲಲ್ಲಿ ಇಟ್ಟುಕೊಂಡಿರುವ ವಿಜಯನಗರವನ್ನು ನೂತನ ಜಿಲ್ಲೆಯಾಗಿ ಮಾಡುವುದು ಬಹುತೇಕ ನಿಶ್ಚಿತವಾಗಿದ್ದು, ಸರ್ಕಾರದಮಟ್ಟದಲ್ಲಿ ನಡೆದಿರುವ ತಯಾರಿ ಅಂತಿಮಘಟ್ಟಕ್ಕೆ ತಲುಪಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆಯಂತೆ ಮುಂದಿನ ಸಚಿವ ಸಂಪುಟದಲ್ಲಿ ವಿಷಯ ಮಂಡಿಸುವುದಕ್ಕೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅಗತ್ಯ ಕ್ರಮವಹಿಸಿದ್ದಾರೆ. ಹೊಸಪೇಟೆ ಸಹಿತ 6 ತಾಲೂಕುಗಳನ್ನು ಒಳಗೊಂಡ ವಿಜಯನಗರ ಜಿಲ್ಲೆ ರಚನೆಗೆ ಕಂದಾಯ ಇಲಾಖೆ ಹಸಿರು ನಿಶಾನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಳ್ಳಾರಿ ಜಿಲ್ಲೆ 11 ತಾಲೂಕುಗಳು ಹಾಗೂ 3 ಕಂದಾಯ ಉಪ ವಿಭಾಗಗಳಿವೆ. ಕೆಲವು ಹಳ್ಳಿಗಳು ಜಿಲ್ಲಾ ಕೇಂದ್ರದಿಂದ 200 ಕಿ.ಮೀ.ಗೂ ಅಧಿಕ ದೂರದಲ್ಲಿವೆ. ದೊಡ್ಡ ಜಿಲ್ಲೆ ವಿಭಜಿಸಿದರೆ ಆಡಳಿತಾತ್ಮಕ ಹಾಗೂ ಅಭಿವೃದ್ಧಿ ಸೇರಿ ಹಲವು ಅನುಕೂಲತೆಗಳಿವೆ ಎನ್ನುವ ಪೂರಕ ಅಂಶಗಳ ಸಹಿತ ಇಲಾಖೆ ವರದಿ ಸಲ್ಲಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ನವೆಂಬರ್ 1ಕ್ಕೆ ಘೋಷಣೆ?: ನಿಗದಿಯಂತೆ ಪೂರ್ವಭಾವಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ನವೆಂಬರ್ 1ರ ರಾಜ್ಯೋತ್ಸವ ಕೊಡುಗೆಯಾಗಿ ವಿಜಯನಗರ ನೂತನ ಜಿಲ್ಲೆ ಘೋಷಣೆಯಾಗುವ ಸಾಧ್ಯತೆಗಳಿವೆ. ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳು ಒಳಗೊಂಡ ವಿಜಯನಗರ ರಾಜ್ಯದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರಲಿದೆ. ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಸಂಡೂರು ಮತ್ತು ಕೂಡ್ಲಿಗಿ ತಾಲೂಕುಗಳು ಮೂಲ ಬಳ್ಳಾರಿ ಜಿಲ್ಲೆಯಲ್ಲಿ ಉಳಿಯಲಿವೆ. ಹೊಸ ಜಿಲ್ಲೆಗಾಗಿ ದಶಕದ ಹೋರಾಟ ಫಲಪ್ರದವಾಗುವ ದಿನಗಳು ಹತ್ತಿರವಾಗಿವೆ. ಇದನ್ನೂ ಓದಿ: ‘ಮನೆಗೆ ಕರೆದುಕೊಂಡು ಹೋಗಿ ಮಾಡಬಾರದ್ದು ಮಾಡಿದ…’: ಠಾಣೆ ಮೆಟ್ಟಿಲೇರಿದ ಯುವತಿ
ಎಲ್ಲರ ಸಹಾಯ-ಸಹಕಾರದಿಂದ ವಿಜಯನಗರ ಜಿಲ್ಲೆ ಕನಸು ಶೀಘ್ರ ನನಸಾಗುವ ವಿಶ್ವಾಸದಲ್ಲಿ ಸಚಿವ ಆನಂದ್ ಸಿಂಗ್ ಇದ್ದಾರೆ. ಅನಗತ್ಯ ವಿವಾದ ಸೃಷ್ಟಿಯಾಗಿ ಹೊಸ ಜಿಲ್ಲೆ ಘೋಷಣೆ ಮತ್ತೆ ಮುಂದಕ್ಕೆ ಹೋಗಬಹುದು ಎನ್ನುವ ಅಳುಕು ಆನಂದ್ ಸಿಂಗ್ಗೆ ಇದ್ದಂತಿದೆ. ಹೀಗಾಗಿಯೇ ಈ ಕುರಿತು ಅವರ ಅಭಿಪ್ರಾಯ ನೀಡಲು ಸಿದ್ಧರಿಲ್ಲ.
ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಿದ್ದಂತೆ ವಿಜಯನಗರ ಜಿಲ್ಲೆ ಘೋಷಿಸಿ, ಆನಂದ್ ಸಿಂಗ್ ಮೊದಲ ಬೇಡಿಕೆಯನ್ನು ಬಿಎಸ್ವೈ ಈಡೇರಿಸಲು ಸಜ್ಜಾಗಿ ಟಿಪ್ಪಣಿ ಹೊರಡಿಸಿದ್ದರು. ಆದರೆ ಶಾಸಕ ಜಿ.ಸೋಮಶೇಖರರೆಡ್ಡಿ ಸೇರಿ ಬಳ್ಳಾರಿ ಜಿಲ್ಲೆಯ ಸ್ವಪಕ್ಷದ ಅನೇಕ ಮುಖಂಡರು ಪ್ರಬಲ ವಿರೋಧ ವ್ಯಕ್ತಪಡಿಸಿದ ಕಾರಣ ನನೆಗುದಿಗೆ ಬಿದ್ದಿದೆ. ವಿಜಯನಗರ ಜಿಲ್ಲೆ ರಚನೆ, ಹೊಸಪೇಟೆ ಏತ ನೀರಾವರಿ ಯೋಜನೆ ಹಾಗೂ ಜಿಂದಾಲ್ ಕಂಪನಿಗೆ ಭೂಮಿ ಕೊಡಬಾರದು ಎಂಬ ಬೇಡಿಕೆಗಳನ್ನಿಟ್ಟು ಆನಂದ್ ಸಿಂಗ್ ಮೊದಲನೆಯವರಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿಂಗ್ ರಾಜೀನಾಮೆ ಮುನ್ನುಡಿ ಬರೆದರೆ, 16 ಶಾಸಕರು ರಾಜೀನಾಮೆ ದಾರಿ ಹಿಡಿದರು. ಇದರಿಂದಾಗಿ ಸಂಖ್ಯೆಯಾಟದಲ್ಲಿ ಬಿಜೆಪಿ ಮೇಲುಗೈ ಸಾಧಿಸಿ ಅಧಿಕಾರದ ಗದ್ದುಗೆ ಏರಿತು. ಹೊಸಪೇಟೆ ಏತ ನೀರಾವರಿ ಯೋಜನೆಗೆ ಬಿಎಸ್ವೈ ಈಗಾಗಲೇ ಅನುದಾನ ನೀಡಿದ್ದರೆ, ಇದೀಗ ಹೊಸ ಜಿಲ್ಲೆ ರಚನೆಯತ್ತ ಹೆಜ್ಜೆಯಿಟ್ಟಿದ್ದಾರೆ.