ಭಾರತದಲ್ಲಿ ಸಚಿನ್-ಕೊಹ್ಲಿಗಿಂತ ಈ ಕ್ರಿಕೆಟಿಗನೇ ಫೇಮಸ್ ಎಂದ ಗಾವಸ್ಕರ್

kohli-sachin web
Published on

ಅಬುಧಾಬಿ: ಭಾರತದ ಕ್ರಿಕೆಟ್ ದಿಗ್ಗಜ ಸುನೀಲ್ ಗಾವಸ್ಕರ್ ಅವರು ಕ್ರಿಕೆಟ್ ಆಟವನ್ನು ಧರ್ಮದಂತೆ ಪ್ರೀತಿಸುವ ದೇಶ ಭಾರತದಲ್ಲಿ ಬ್ಯಾಟಿಂಗ್ ಮಾಂತ್ರಿಕರಾದ ಸಚಿನ್ ತೆಂಡುಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗಿಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟಿನನನ್ನು ಹೆಸರಿಸಿದ್ದಾರೆ. ಅವರೇ ಟೀಮ್ ಇಂಡಿಯಾಗೆ 2 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿರುವ ನಾಯಕ ಮಹೇಂದ್ರ ಸಿಂಗ್ ಧೋನಿ. ಇದಕ್ಕೆ ಸೂಕ್ತ ಕಾರಣಗಳನ್ನೂ ಗಾವಸ್ಕರ್ ವಿವರಿಸಿದ್ದಾರೆ.

13ನೇ ಆವೃತ್ತಿಯ ಐಪಿಎಲ್ ವೀಕ್ಷಕವಿವರಣೆಗಾಗಿ ಸದ್ಯ ಯುಎಇಯಲ್ಲಿರುವ ಗಾವಸ್ಕರ್, ಉದ್ಘಾಟನಾ ಪಂದ್ಯಕ್ಕೆ ಮುನ್ನ ಧೋನಿ ಬಗ್ಗೆ ಮಾತನಾಡಿದ್ದಾರೆ. ‘ಧೋನಿ ಅವರು ಕ್ರಿಕೆಟ್ ಸಂಸ್ಕೃತಿ ಅಷ್ಟೇನೂ ಇಲ್ಲದ ರಾಂಚಿಯಿಂದ ಬಂದವರು. ಆದರೆ ಇಡೀ ದೇಶವೇ ಅವರನ್ನು ಪ್ರೀತಿಸುತ್ತದೆ. ತೆಂಡುಲ್ಕರ್ ಅವರು ಮುಂಬೈ ಮತ್ತು ಕೋಲ್ಕತದಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದರೆ, ಕೊಹ್ಲಿ ಅವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಧೋನಿ ಅವರು ಭಾರತದ ಎಲ್ಲೆಡೆ ಅಭಿಮಾನಿಗಳನ್ನು ಹೊಂದಿದ್ದಾರೆ’ ಎಂದು ಗಾವಸ್ಕರ್ ವಿವರಿಸಿದ್ದಾರೆ.

ಐಪಿಎಲ್ 13ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕರಾಗಿ 436 ದಿನಗಳ ಬಳಿಕ ಕ್ರಿಕೆಟ್ ಮೈದಾನಕ್ಕೆ ಮರಳಿರುವ 39 ವರ್ಷದ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಭರ್ಜರಿ ಪುನರಾಗಮನ ಸಾರಿದ್ದಾರೆ. ಪಂದ್ಯದಲ್ಲಿ ಧೋನಿ ತೆಗೆದುಕೊಂಡ ಕೆಲ ಅಚ್ಚರಿಯ ನಿರ್ಧಾರಗಳು ಅನುಭವದ ಮಹತ್ವವನ್ನು ಸಾರಿದ್ದು, ಅಭಿಮಾನಿಗಳ ಮನವನ್ನೂ ಗೆದ್ದಿದ್ದಾರೆ. ಐಪಿಎಲ್‌ಗೆ ಮುನ್ನ ಕಳೆದ ಆಗಸ್ಟ್ 15ರಂದು ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net