

ಬೆಂಗಳೂರು: ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಪರ್ಯಾಯ ಶಿಕ್ಷಣ ವ್ಯವಸ್ಥೆ ಕಲ್ಪಿಸುವ ನಿಟ್ಟಿಯಲ್ಲಿ ವಿದ್ಯಾಗಮ ಅನುಷ್ಠಾನಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕಠಿಣ ನಿಯಮ ಹಾಗೂ ಲಾಕ್ಡೌನ್ ಆಧಾರದ ಮೇಲೆ ಜಾರಿಯಾಗಲಿದ್ದು, 3 ಹಂತದಲ್ಲಿ ಅನುಷ್ಠಾನಕ್ಕೆ ಅವಕಾಶ ಕಲ್ಪಿಸಿದೆ.
ವಿಧಾನ-1: ಯಾವುದೇ ತಂತ್ರಜ್ಞಾನ ಆಧಾರಿತ ಸಾಧನಗಳು ಇಲ್ಲದೆ ಮಕ್ಕಳಿಗೆ ತರಗತಿ ತೆಗೆದುಕೊಳ್ಳುವುದು. (ವಿದ್ಯಾರ್ಥಿಗಳಿಗೆ ಭೌತಿಕ ಆಫ್ಲೈನ್ ತರಗತಿಗಳ ನಿರ್ವಹಣೆ).
ವಿಧಾನ-2: ಇಂಟರ್ನೆಟ್ರಹಿತ ಮೊಬೈಲ್ ಫೋನ್ ಹೊಂದಿರುವ ತರಗತಿ.
ವಿಧಾನ-3: ಇಂಟರ್ನೆಟ್ಸಹಿತ, ಕಂಪ್ಯೂಟರ್, ಟ್ಯಾಬ್, ಸ್ಮಾಟ್ಫೋನ್ ಹೊಂದಿರುವ ತರಗತಿ.
ಪ್ರತಿ ಶಾಲೆಯ 20-25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಕಾಲ್ಪನಿಕ ಕೋಣೆಯ ಉಸ್ತುವಾರಿ ವಹಿಸಿ ಶಾಲೆಯಲ್ಲಿರುವ ಮಕ್ಕಳ ಹಾಗೂ ಶಿಕ್ಷಕ ಸಂಖ್ಯೆ ಅನುಗುಣವಾಗಿ ಕಲಿಕಾ ಕೋಣೆಯ ಮಕ್ಕಳ ಸಂಖ್ಯೆಯನ್ನು ಬದಲಿಸಲು ಅವಕಾಶ ಕಲ್ಪಿಸಿದೆ. ಪ್ರಸ್ತುತ ಕರೊನಾ ಕಠಿಣ ನಿಯಮಗಳು ಇದೇ ರೀತಿ ಮುಂದುವರಿದಲ್ಲಿ, ರಾಜ್ಯಾದ್ಯಂತ ಶಾಲೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಿದೆ. ವಿದ್ಯಾರ್ಥಿಗಳ ಭವಿಷ್ಯದ ಹಿನ್ನೆಲೆಯಲ್ಲಿ ಕಲಿಕೆಯಲ್ಲಿ ಭೌತಿಕವಾಗಿ ತೊಡಗಿಸಲು ಸಾಧ್ಯವಾಗದೆ ಇರುವುದರಿಂದ ಪರ್ಯಾಯ ಮಾರ್ಗಗಳ ಮೂಲಕ ಕಲಿಕೆಯ ನಿರಂತರೆಯನ್ನು ಮುಂದುವರಿಸಲು ವಿದ್ಯಾಗಮ ಅನಿವಾರ್ಯ ಎಂದು ಇಲಾಖೆ ತಿಳಿಸಿದೆ. ತಂತ್ರಜ್ಞಾನದ ಸೌಲಭ್ಯ ಇಲ್ಲದ ಮಕ್ಕಳಿಗೆ ಭೌತಿಕ ತರಗತಿ ಹಾಗೂ ಭೌತಿಕವಾಗಿ ಹಾಜರಾಗಲು ಸಾಧ್ಯವಾಗದ ಮಕ್ಕಳಿಗೆ ಆನ್ಲೈನ್ ಮೂಲಕ ತರಗತಿ ನಿರ್ವಹಿಸಲು ಸೂಚಿಸಲಾಗಿದೆ. ಆನ್ಲೈನ್ ತರಗತಿ ನಡೆಸುವುದಾದರೆ, ಆಯಾ ತರಗತಿ ಮಕ್ಕಳಿಗೆ ಸ್ಕ್ರೀನ್ ಟೈಮ್ ಮಿತಿಯನ್ನು ವಿಧಿಸಲಿದೆ. ಶಾಲಾವರಣದಲ್ಲಿ ಭೌತಿಕ ತರಗತಿಗಳನ್ನು ನಡೆಸುವುದಾದರೆ, ವಾರದ 5 ದಿನ ಮಕ್ಕಳನ್ನು ತಂಡಗಳಾಗಿ ವಿಂಗಡಿಸಿಕೊಂಡು ಕಲಿಸುವಂತೆ ಸೂಚಿಸಲಾಗಿದೆ.
ಬಿಸಿಯೂಟ: ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಬಿಸಿಯೂಟ ತಯಾರಿ, ಊಟಕ್ಕೆ ಇತರ ಮಕ್ಕಳು ಬರಬಹುದು ಎಂದು ಸೂಚಿಸಲಾಗಿದೆ. 20ರಿಂದ 25 ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿ ಉಸ್ತುವಾರಿ ವಹಿಸಲಾಗುತ್ತದೆ. ವಿದ್ಯಾಗಮ ನಿರ್ವಹಣೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಪಂ ಸಿಇಒಗಳಿಗೂ ಜವಾಬ್ದಾರಿಗಳನ್ನು ನೀಡಲಾಗಿದೆ.
ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ವರ್ಗಾವಣೆ ಪ್ರಮಾಣಪತ್ರ (ಟಿಸಿ) ವಿತರಿಸಲು ಖಾಸಗಿ ಶಾಲೆಗಳ ಮೇಲೆ ಒತ್ತಡ ಹೇರದಂತೆ ಕೋರಿ ಕ್ಯಾಮ್್ಸ ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಿರುವ ಹೈಕೋರ್ಟ್, ಶಾಲೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ಆದೇಶಿಸಿದೆ. ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ಟಿಸಿ ವಿತರಿಸುವಂತೆ ಸೂಚಿಸಿ ನೋಟಿಸ್ ಜಾರಿಗೊಳಿಸಿದ್ದ ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಕ್ಯಾಮ್್ಸ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಆಕ್ಷೇಪವೇನು?: ಅರ್ಜಿದಾರರ ಪರ ವಕೀಲ ಜಿ. ಆರ್. ಮೋಹನ್ ವಾದ ಮಂಡಿಸಿ, ಕೋವಿಡ್ ಕಾರಣದಿಂದ ಈಗಾಗಲೆ ಶಾಲೆಗಳು ಸಾಕಷ್ಟು ನಷ್ಟ ಅನುಭವಿಸಿವೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳ ಪಾಲಕರು ಈವರೆಗೂ ಶುಲ್ಕ ಪಾವತಿಸಿಲ್ಲ. ಇದರಿಂದ, ಶಾಲೆ ನಿರ್ವಹಣೆ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ನೀಡಲು ಸಮಸ್ಯೆಯಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಶುಲ್ಕ ಪಾವತಿಸದ ವಿದ್ಯಾರ್ಥಿಗಳಿಗೂ ಟಿಸಿ ವಿತರಿಸುವಂತೆ ಶಿಕ್ಷಣ ಇಲಾಖೆ ಬಿಇಒಗಳ ಮೂಲಕ ಒತ್ತಡ ಹೇರುತ್ತಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಟಿಸಿ ವಿತರಿಸಲು ಒತ್ತಡ ಹೇರದಂತೆ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಆದರೆ, ಮನವಿ ಪರಿಗಣಿಸಿ, ಸಮಸ್ಯೆ ಬಗೆಹರಿಸುವ ಬದಲು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು, ಟಿಸಿ ವಿತರಿಸದ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಮನವಿ ಸಲ್ಲಿಸಲಾ ಗಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.