ವಿದ್ಯುತ್ ಕ್ಷೇತ್ರ ಖಾಸಗೀಕರಣ ಬೇಡ: ಮಸೂದೆ ಮಂಡಿಸದಂತೆ ರೈತ ಸಂಘ, ಹಸಿರುಸೇನೆಯಿಂದ ಪ್ರತಿಭಟನೆ

10-08-rama-Raitha
Published on

ರಾಮನಗರ :  ರೈತರು, ಬಡವರಿಗೆ ಮಾರಕವಾಗಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಪ್ರಸ್ತುತ ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸದಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ವಿದ್ಯುತ್ ಖಾಸಗೀಕರಣ ಜನವಿರೋಧಿಯಾಗಿದ್ದು, ಯಾವುದೇ ಕಾರಣಕ್ಕೂ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ರೀತಿ ಕಾಯ್ದೆ ತರಲು ಮುಂದಾದಾಗ ರೈತರು ಮತ್ತು ಜನರ ವಿರೋಧಕ್ಕೆ ಹೆದರಿ ಹಿಂದೆ ಸರಿದಿದ್ದರು. ಅದೇರೀತಿ ಮತ್ತೊಮ್ಮೆ ಪ್ರತಿಭಟನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಚ್.ಬಿ. ಚಂದ್ರಶೇಖರ್ ಮಾತನಾಡಿ, ವಿದ್ಯುತ್ ಖಾಸಗೀಕರಣ ಮಸೂದೆ ಒಮ್ಮೆ ಪಾಸಾದರೆ ರೈತರ ನೀರಾವರಿ ಪಂಪ್‌ಸೆಟ್‌ಗಳಿಗೆ ಪ್ರಿಪೇಯ್ಡಿ ಸ್ಮಾರ್ಟ್ ಮೀಟರ್‌ಗಳು ಬರಲಿವೆ. ಸರ್ಕಾರದ ಯೋಜನೆಗಳಾದ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಕುಡಿಯುವ ನೀರಿನ ಯೋಜನೆಗಳ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವುದರಿಂದ ಬಡವರಿಗೆ ಮತ್ತು ರೈತರಿಗೆ ತುಂಬಾ ನಷ್ಟ ಉಂಟಾಗಲಿದೆ ಎಂದರು.

ಈಗಾಗಲೇ ಹಲವು ಕಾರಣಗಳಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರು, ತಿಂಗಳಿಗೆ 20-30 ಸಾವಿರ ರೂ. ವಿದ್ಯುತ್ ಬಿಲ್ ಕಟ್ಟಲಾಗದೆ, ವಿದ್ಯುತ್ ಕಂಪನಿಗಳ ಕಾಟಕ್ಕೆ ಹೆದರಿ ಸಾವಿನ ಹಾದಿ ತುಳಿಯುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಸರ್ಕಾರ ವಿದ್ಯುತ್ ಖಾಸಗೀಕರಣ ಬಿಲ್ ಮಂಡಿಸಬಾರದು ಎಂದು ಆಗ್ರಹಿಸಿದರು.

ರೈತ ಮುಖಂಡ ಬೈರೇಗೌಡ ಮಾತನಾಡಿ, ಕೇಂದ್ರ ಸರ್ಕಾರ ಈಗಾಗಲೇ ಬಿಸ್ಸೆನ್ನೆಲ್, ರೈಲ್ವೆ, ಏರ್ ಇಂಡಿಯಾ ಸೇರಿದಂತೆ ಹಲವಾರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದೆ. ಈಗ ವಿದ್ಯುತ್ ಇಲಾಖೆಯನ್ನು ಮಾರಾಟ ಮಾಡಲು ಹೊರಟಿದೆ. ಇದಕ್ಕೆ ವಿರೋಧ ಪಕ್ಷಗಳು ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳಾದ ರಮೇಶ್, ಗೋವಿಂದ, ಅನಂತರಾಮು, ಸೀಬೆಕಟ್ಟೆಕೃಷ್ಣಪ್ಪ, ಎಂ.ಕೆ. ಗಂಗಾಧರಯ್ಯ, ಅಮಿರ್ ಜಾನ್, ಶಿವರುದ್ರಯ್ಯ, ಗಿರೀಶ್ ಇತರರು ಪಾಲ್ಗೊಂಡಿದ್ದರು.

ಉಚಿತ ವಿದ್ಯುತ್ ಸುಳ್ಳು :  ರೈತರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿದ್ದೇವೆ ಎಂಬುದು ಹಸಿ ಸುಳ್ಳು. ಸರ್ಕಾರ ವಿದ್ಯುತ್ ತಯಾರಿಸಿದರೂ ಅದನ್ನು ತಮ್ಮ ಪಂಪ್‌ಸೆಟ್‌ಗಳಿಗೆ ತರಲು ಅಗತ್ಯವಾದ ಕಂಬ ಮತ್ತು ತಂತಿಯನ್ನು ಅಳವಡಿಸಲು ರೈತರೇ ಹಣ ಭರಿಸುತ್ತಿದ್ದಾರೆ. ಒಂದು ವೇಳೆ ವಿದ್ಯುತ್ ಕ್ಷೇತ್ರ ಖಾಸಗೀಕರಣವಾದರೆ ರೈತರು ಮತ್ತು ಸರ್ಕಾರದ ನಡುವೆ ಸಂಪರ್ಕವೇ ಇಲ್ಲದಂತಾಗುತ್ತದೆ. ಹಾಗಾಗಿ ಸರ್ಕಾರ ರೈತರು ಮತ್ತು ಬಡವರಿಗೆ ಮಾರಕವಾಗಿರುವ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಪ್ರಬಲ ವಿರೋಧವಿದೆ ಎಂದು ಚಂದ್ರಶೇಖರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net