

ಬೆಂಗಳೂರು: ಇತ್ತೀಚೆಗೆ ನಿಧನರಾದ ಕನ್ನಡದ ಯುವರತ್ನ ಪುನೀತ್ ರಾಜ್ಕುಮಾರ್ ಅವರು ನೇತ್ರದಾನ ಮಾಡಿ ಉದಾತ್ತ ಆದರ್ಶವನ್ನು ಹುಟ್ಟುಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಎಷ್ಟೋ ಜನರು ತಮ್ಮ ಸಾವಿನೊಂದಿಗೆ ಅಳಿಸಿಹೋಗುವ ಕಣ್ಣುಗಳನ್ನು ದಾನ ಮಾಡಿ ಇತರರ ಬದುಕಿನಲ್ಲಿ ಬೆಳಕು ಮೂಡಿಸಲು ಮುಂದಾಗುತ್ತಿದ್ದಾರೆ. ಇದೇ ಸಂದರ್ಭಕ್ಕೆ, ಪುಟ್ಟ ಬಾಲೆಯೊಬ್ಬಳು ಕನ್ನಡಕದಿಂದ ದೃಷ್ಟಿ ಸುಧಾರಿಸಿದಾಗ ತನ್ನ ಸುತ್ತಲ ಜಗತ್ತನ್ನು ವಿಸ್ಮಯದಿಂದ ನೋಡುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಪುಟ್ಟ ಹೆಣ್ಣುಮಗುವಿಗೆ ಅವಳ ಅಪ್ಪ ಗುಲಾಬಿ ಬಣ್ಣದ ಹೊಸ ಕನ್ನಡಕವನ್ನು ತಂದುಕೊಟ್ಟಾಗ, ಅವಳು ತೋರುವ ಪ್ರತಿಕ್ರಿಯೆಯನ್ನು ಈ ವಿಡಿಯೋದಲ್ಲಿ ನೋಡಬಹುದು. ಗುಡ್ನ್ಯೂಸ್ ಮೂವ್ಮೆಂಟ್ ಎಂಬ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಆಗಿರುವ ಈ ದೃಶ್ಯದಲ್ಲಿ ಮಗುವು ತನ್ನ ಸುತ್ತಲ ಜಗತ್ತಿನ ನಿಜವಾದ ರಂಗನ್ನು ನೋಡಿ ಆನಂದಿಸುವ ಪರಿ ಯಾರನ್ನಾದರೂ ಭಾವುಕವಾಗಿಸುತ್ತದೆ.
"ಎರಡು ವರ್ಷ ತುಂಬಿದಾಗಿನಿಂದ ಅವಳಿಗೆ ದೂರದೃಷ್ಟಿ ಬಂದ ಕಾರಣದಿಂದ ಸ್ಪಷ್ಟವಾಗಿ ಏನೂ ಕಾಣುತ್ತಿರಲಿಲ್ಲ. ಇದೀಗ ಮೊದಲ ಬಾರಿ ಅವಳು ಸ್ಪಷ್ಟವಾಗಿ ನೋಡಬಹುದಾಗಿದೆ. ಇದು ಅತ್ಯಮೂಲ್ಯವಾದ ಘಳಿಗೆ" ಎಂದು ಅವಳ ಪಾಲಕರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)