

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದ ನಟ ಪುನೀತ್ ರಾಜ್ಕುಮಾರ್, ಕಣ್ಣುಗಳನ್ನು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಜನರನ್ನು ನೇತ್ರದಾನಕ್ಕೆ ನೋಂದಣಿ ಮಾಡಿಸುವ ಮೂಲಕ ಪುನೀತ್ಗೆ ಟ್ರಿಬ್ಯೂಟ್ ಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಪುನೀತ್ 46ನೇ ವಯಸ್ಸಿನಲ್ಲಿ ನಿಧನರಾದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 46 ಸಾವಿರ ಜನರನ್ನು ನೇತ್ರದಾನಕ್ಕೆ ನೋಂದಾಯಿಸುವ ಗುರಿ ಹೊಂದಲಾಗಿದೆ. ಈ ತಿಂಗಳ ಕೊನೆಯೊಳಗೆ ಹತ್ತು ಸಾವಿರ ಜನರನ್ನು ನೇತ್ರದಾನಕ್ಕೆ ನೋಂದಾಯಿಸುವ ಯೋಜನೆ ಇದೆ. ನೇತ್ರದಾನ ನೋಂದಣಿಗೆ ಅರ್ಜಿ ನಮೂನೆ, ಪ್ರಮಾಣ ಪತ್ರ, ಗುರುತಿನ ಚೀಟಿ ಸಿದ್ದಪಡಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇದಕ್ಕಾಗಿ ಸಮಿತಿ ರಚನೆ ಮಾಡಿ, ನೇತ್ರದಾನ ನೋಂದಣಿಗೆ ಅವಕಾಶ ಮಾಡಲಾಗುವುದು ಎಂದು ಜಿಲ್ಲಾಸ್ಪತ್ರೆಯ ಕೋವಿಡ್ ನೋಡಲ್ ಅಧಿಕಾರಿ ಡಾ.ಮಹೇಶ್ ಹೇಳಿದ್ದಾರೆ.
ಚಾಮರಾಜನಗರದಲ್ಲಿ ರೆಡ್ ಕ್ರಾಸ್ ಸೊಸೈಟಿ ಸಹಯೋಗದಲ್ಲಿ ಕಣ್ಣಿನ ಆಸ್ಪತ್ರೆ ನಿರ್ಮಾಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹೀಗೆ ಸ್ಥಾಪನೆಯಾಗುವ ಕಣ್ಣಿನ ಆಸ್ಪತ್ರೆಗೆ ಪುನೀತ್ ರಾಜ್ಕುಮಾರ್ ಹೆಸರಿಡಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿರುವ ಅಂಧರ ಪತ್ತೆಗೆ ಸರ್ವೇ ಕಾರ್ಯಕ್ಕೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.