

ಹೈದರಾಬಾದ್/ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮ ಅವರ ಒಂದು ವರ್ಷವೂ ತುಂಬಿಲ್ಲದ ಹೆಣ್ಣು ಮಗುವಿಗೆ ಟ್ವಿಟರ್ ಮೂಲಕ ಅತ್ಯಾಚಾರದ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಸೈಬರ್ ಸೆಲ್ ಪೊಲೀಸರ ಕಾರ್ಯಾಚರಣೆಯಲ್ಲಿ 23 ವರ್ಷ ವಯಸ್ಸಿನ ರಾಮ್ನಾಗೇಶ್ ಶ್ರೀನಿವಾಸನ್ ಅಕುಬತಿನಿ ಎಂಬಾತ ಈ ವಿಕೃತ ಬೆದರಿಕೆ ಹಾಕಿದ್ದ ಎಂಬುದು ಬೆಳಕಿಗೆ ಬಂದಿದೆ.
ಕ್ರಿಕೆಟ್ ಟಿ20 ವರ್ಲ್ಡ್ ಕಪ್ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡದ ವಿರುದ್ಧ ಸೋತಾಗ ದೇಶದ ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಅಸಮಾಧಾನ ಹೊರಹಾಕಿದ್ದರು. ಕೆಲವರು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ತಂಡದ ಆಟಗಾರರ ಮೇಲೆ ವೈಯಕ್ತಿಕ ವಾಗ್ದಾಳಿಯನ್ನೂ ನಡೆಸಿದರು. ಇದೇ ಸಂದರ್ಭದಲ್ಲಿ ಟ್ವಿಟರ್ನಲ್ಲಿ ವಿರಾಟ್ ಕೊಹ್ಲಿ ಪುತ್ರಿಯನ್ನು ಅತ್ಯಾಚಾರ ಮಾಡುವುದಾಗಿ ಒಂದು ವಿಕೃತ ಬೆದರಿಕೆ ಬಂದಿತ್ತು.
ಈ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಂದ ಈ ಬಗ್ಗೆ ಪ್ರತಿಕ್ರಿಯೆ ಕೇಳಿತ್ತು. ಇಂಥ ಕೃತ್ಯವು ನಾಚಿಕೆಗೇಡು ಎಂದು ಶೀಘ್ರವೇ ಆರೋಪಿಯನ್ನು ಬಂಧಿಸಲು ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿತ್ತು.
ರಾಮ್ನಾಗೇಶ್ ಶ್ರೀನಿವಾಸನ್ ಅಕುಬತಿನಿ ಎಂಬುವನನ್ನು ಟ್ರೇಸ್ ಮಾಡಿರುವ ಮುಂಬೈ ಪೊಲೀಸರು, ಬುಧವಾರದಂದು ಅವನನ್ನು ಹೈದರಾಬಾದಿನಲ್ಲಿ ವಶಕ್ಕೆ ಪಡೆದಿದ್ದಾರೆ. ಬಂಧಿತನು ಬಿ.ಟೆಕ್. ಪದವೀಧರನಾಗಿದ್ದು ಫುಡ್ ಡೆಲಿವರಿ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ. ಈತನನ್ನು ಮುಂಬೈಗೆ ಕರೆತಂದು ನ್ಯಾಯಾಲಯದಲ್ಲಿ ಪೊಲೀಸ್ ಕಸ್ಟಡಿ ಪಡೆಯಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)