ಯೂಕ್ರೇನ್​ ಅತಿದೊಡ್ಡ ನೌಕಾಪಡೆಯ ಹಡಗು ರಷ್ಯಾದ ಡ್ರೋನ್​ ದಾಳಿಗೆ ಛಿದ್ರ! ಭಯಾನಕ ವಿಡಿಯೋ ವೈರಲ್​... Drone Attack

Drone Attack
Published on

Drone Attack : ಕಳೆದ ಒಂದು ದಶಕಗಳಿಂದ ಯೂಕ್ರೇನ್​ ದೇಶದ ಅತಿದೊಡ್ಡ ನೌಕಾಪಡೆಯ ಹಡಗು ಎನಿಸಿಕೊಂಡಿರುವ ಸಿಮ್ಫೆರೊಪೋಲ್, ರಷ್ಯಾದ ಡ್ರೋನ್​ ದಾಳಿಗೆ ಸಂಪೂರ್ಣ ನಾಶವಾಗಿ, ಸಮುದ್ರದ ಪಾಲಾಗಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಗುರುವಾರ (ಆಗಸ್ಟ್​ 28) ತಿಳಿಸಿದೆ.

ರೇಡಿಯೋ, ಎಲೆಕ್ಟ್ರಾನಿಕ್, ರಾಡಾರ್ ಮತ್ತು ಆಪ್ಟಿಕಲ್ ವಿಚಕ್ಷಣಕ್ಕಾಗಿ ವಿನ್ಯಾಸಗೊಳಿಸಲಾದ ಲಗುನಾ-ವರ್ಗದ, ಮಧ್ಯಮ ಗಾತ್ರದ ಹಡಗಿನ ಮೇಲೆ ಯೂಕ್ರೇನ್‌ನ ಒಡೆಸ್ಸಾ ಪ್ರದೇಶದ ಒಂದು ಭಾಗವಾಗಿರುವ ಡ್ಯಾನ್ಯೂಬ್ ನದಿಯ ಡೆಲ್ಟಾದಲ್ಲಿ ರಷ್ಯಾ ಡ್ರೋನ್​ ದಾಳಿ ಮಾಡಿದ್ದು, ಹಡಗು ನಾಶವಾಗಿರುವುದಾಗಿ ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.

ಮಾನವರಹಿತ ವೈಮಾನಿಕ ವಾಹನ (ಯುಎವಿ) ತಜ್ಞರ ಹೇಳಿಕೆಯನ್ನು ಉಲ್ಲೇಖಿಸಿರುವ TASS ವರದಿಯ ಪ್ರಕಾರ, ಯೂಕ್ರೇನಿಯನ್ ನೌಕಾಪಡೆಯ ಹಡಗನ್ನು ಹೊಡೆದುರುಳಿಸಲು ರಷ್ಯಾ ಮಾಡಿದ ಸಮುದ್ರ ಡ್ರೋನ್‌ನ ಮೊದಲ ಯಶಸ್ವಿ ಬಳಕೆ ಇದಾಗಿದೆ ಎಂದು ರಷ್ಯಾ ಟುಡೇ ಹೇಳಿದೆ.

ಇತ್ತ ತಮ್ಮ ಹಡಗಿನ ಮೇಲೆ ದಾಳಿ ಮಾಡಿರುವುದನ್ನು ಯೂಕ್ರೇನಿಯನ್ ಅಧಿಕಾರಿಗಳು ಕೂಡ ದೃಢಪಡಿಸಿದ್ದಾರೆ. ಈ ದಾಳಿಯಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಯೂಕ್ರೇನಿಯನ್ ನೌಕಾಪಡೆಯ ವಕ್ತಾರರು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಕೀವ್ ಇಂಡಿಪೆಂಡೆಂಟ್ ಮಾಧ್ಯಮ ಗುರುವಾರ ವರದಿ ಮಾಡಿದೆ.

ದಾಳಿಯ ನಂತರದ ಪರಿಣಾಮಗಳನ್ನು ಪರಿಹರಿಸುವ ಪ್ರಯತ್ನಗಳು ಪ್ರಸ್ತುತ ನಡೆಯುತ್ತಿವೆ. ಹೆಚ್ಚಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಮತ್ತು ಕಾಣೆಯಾದ ಹಲವಾರು ನಾವಿಕರಿಗಾಗಿ ಹುಡುಕಾಟ ಮುಂದುವರೆದಿದೆ ಎಂದು ಯೂಕ್ರೇನ್​ನ ವಕ್ತಾರರು ಹೇಳಿದ್ದಾರೆ.

ಅಂದಹಾಗೆ, ಸಿಮ್ಫೆರೊಪೋಲ್ ಹಡಗನ್ನು 2019 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಎರಡು ವರ್ಷಗಳ ನಂತರ ಯೂಕ್ರೇನಿಯನ್ ನೌಕಾಪಡೆಗೆ ಸೇರಿಸಲಾಯಿತು. ವಾರ್‌ಗೊಂಜೊ ಟೆಲಿಗ್ರಾಮ್ ಚಾನೆಲ್ ಪ್ರಕಾರ, ಈ ಹಡಗು 2014 ರಿಂದ ಯೂಕ್ರೇನ್​ ಉಡಾವಣೆ ಮಾಡಿದ ಅತಿದೊಡ್ಡ ಹಡಗು ಆಗಿತ್ತು. ಇದೀಗ ನಾಶವಾಗಿದ್ದು, ಯೂಕ್ರೇನ್​ಗೆ ಭಾರಿ ಪೆಟ್ಟು ಬಿದ್ದಿದೆ.

ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ, ನೌಕಾ ಡ್ರೋನ್‌ಗಳ ಉತ್ಪಾದನೆಯನ್ನು ವೇಗಗೊಳಿಸಲು ಮುಂದಾಗಿದೆ. ಇದರ ಜೊತೆಗೆ ಇನ್ನಿತರ ಮಾನವರಹಿತ ವ್ಯವಸ್ಥೆಗಳನ್ನು ಸಹ ಹೆಚ್ಚಿಸಿದೆ. ರಷ್ಯಾವು ರಾತ್ರೋರಾತ್ರಿ ಎರಡು ಕ್ಷಿಪಣಿ ದಾಳಿಗಳೊಂದಿಗೆ ಯೂಕ್ರೇನ್​ ರಾಜಧಾನಿ ಕೀವ್‌ನಲ್ಲಿರುವ ಪ್ರಮುಖ ಡ್ರೋನ್ ಸೌಲಭ್ಯವನ್ನು ಸಹ ಹೊಡೆದುರುಳಿಸಿದೆ ಎಂದು ಯೂಕ್ರೇನಿಯನ್ ರಾಜಕಾರಣಿ ಇಗೊರ್ ಜಿಂಕೆವಿಚ್ ಗುರುವಾರ ಹೇಳಿಕೊಂಡಿದ್ದಾರೆ ಎಂದು ರಷ್ಯಾ ಟುಡೆ ವರದಿ ಮಾಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net