ಯುಪಿ ವರದಕ್ಷಿಣೆ ಕೊಲೆ ಪ್ರಕರಣ: ಸಾಯುವ ಮುನ್ನ ಯುವತಿ ಹೇಳಿಕೆ, ಯಾರೂ ಊಹಿಸದ ಸ್ಫೋಟಕ ಟ್ವಿಸ್ಟ್​! UP dowry murder case

UP dowry murder case
Published on

UP dowry murder case : ದೇಶದಾದ್ಯಂತ ಭಾರಿ ಸಂಚಲನ ಮೂಡಿಸಿದ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದ ವರದಕ್ಷಿಣೆ ಕಿರುಕುಳ ಹತ್ಯೆ ಪ್ರಕರಣ ಯಾರು ಊಹೆ ಮಾಡದಂತಹ ತಿರುವು ಪಡೆದುಕೊಂಡಿದೆ. ಮೃತ ನಿಕ್ಕಿ ಭಾಟಿ, ಸಾವಿಗೂ ಮುನ್ನ ವೈದ್ಯರಿಗೆ ನೀಡಿದ್ದಾರೆ ಎನ್ನಲಾದ ಹೇಳಿಕೆಯಲ್ಲಿ ಅತ್ತೆಯ ಮನೆಯಲ್ಲಿ ಸಿಲಿಂಡರ್​ ಸ್ಫೋಟಗೊಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿತು ಎಂದು ಹೇಳಿದ್ದಾರಂತೆ. ಚಿಕಿತ್ಸೆಗೆಂದು ನಿಕ್ಕಿ ಅವರನ್ನು ದಾಖಲಿಸಲಾದ ಫೋರ್ಟಿಸ್​ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್​ಗಳು ಇದನ್ನು ಬಹಿರಂಗಪಡಿಸಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ.

ಹೆಚ್ಚುವರಿ ವರದಕ್ಷಿಣೆ ಬೇಡಿಕೆ ಈಡೇರಿಸದಿದ್ದಕ್ಕೆ 26 ವರ್ಷದ ನಿಕ್ಕಿಯನ್ನು ಆಕೆಯ ಪತಿ ವಿಪಿನ್ ಭಾಟಿ ಮತ್ತು ಅವರ ಕುಟುಂಬದವರು ದಹನಕಾರಿ ವಸ್ತುವಿನಿಂದ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪಗಳು ಈ ಮುಂಚೆ ಕೇಳಿಬಂದಿತು. ಆದರೆ, ಇದೀಗ ನಿಕ್ಕಿ ಸಾಯುವ ಮುನ್ನ ವೈದ್ಯರಿಗೆ ನೀಡಿರುವ ಹೇಳಿಕೆ ಈ ಪ್ರಕರಣಕ್ಕೆ ಹೊಸ ತಿರುವನ್ನು ನೀಡಿದೆ. ಆದರೆ, ತನಿಖಾಧಿಕಾರಿಗಳಿಗೆ ನಿಕ್ಕಿಯ ಅತ್ತೆ ಮನೆಯಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಬಗ್ಗೆ ಯಾವುದೇ ಪುರಾವೆಗಳು ಸಿಗಲಿಲ್ಲ. ಹೀಗಾಗಿ ಸಾವಿಗೂ ಮುನ್ನ ಆ ರೀತಿ ಹೇಳಿಕೆ ನೀಡಲು ನಿಕ್ಕಿಯನ್ನು ಒತ್ತಾಯಿಸಿರಬಹುದು ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ತನಿಖೆ ಕೈಗೊಂಡಿದ್ದಾರೆ.

ಕಳೆದ ವಾರ ನಿಕ್ಕಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರು. ಅವರ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶೇ. 80 ರಷ್ಟು ಸುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ನಿಕ್ಕಿಯ ಪತಿ ವಿಪಿನ್​, ಆತನ ಪಾಲಕರು ಮತ್ತು ನಿಕ್ಕಿಯ ಸಹೋದರಿ ಕಾಂಚನ್‌ರನ್ನು ಮದುವೆಯಾಗಿರುವ ವಿಪಿನ್​ ಸಹೋದರ ರೋಹಿತ್​ನನ್ನು ಬಂಧಿಸಲಾಗಿದೆ. ಕಳೆದ ಭಾನುವಾರ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ವಿಪಿನ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದರು.

ಸುಟ್ಟ ಗಾಯಗಳಿಂದ ಬಳಲುತ್ತಿದ್ದ ನಿಕ್ಕಿಯನ್ನು ಆಸ್ಪತ್ರೆಗೆ ಕರೆತಂದ ಸಂದರ್ಭದಲ್ಲಿ ಆಕೆ ಇನ್ನೂ ಮಾತನಾಡುತ್ತಿದ್ದಳು ಎಂದು ವೈದ್ಯರು ಮತ್ತು ನರ್ಸ್ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಹಿಂದಿ ಭಾಷೆಯಲ್ಲಿರುವ ಆಸ್ಪತ್ರೆಯ ಮೆಮೊದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟದಿಂದಾಗಿ ರೋಗಿಯು ತೀವ್ರ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಬರೆಯಲಾಗಿದೆ. ಇದರ ನಡುವೆ, ಪೊಲೀಸರು ಫೋರ್ಟಿಸ್ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದು, ಅದರಲ್ಲಿ ನಿಕ್ಕಿಯ ನೆರೆಮನೆ ನಿವಾಸಿ ದೇವೇಂದ್ರ ಎಂಬುವರು ಕಾರನ್ನು ಚಲಾಯಿಸಿರುವುದು ಕಂಡುಬಂದಿದೆ. ಹಿಂದಿನ ಸೀಟಿನಲ್ಲಿ ನಿಕ್ಕಿ, ಆಕೆಯ ಅತ್ತೆ ಮತ್ತು ಮಾವ ಇದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ರೋಹಿತ್ ಕೂಡ ಕಾಣಿಸಿಕೊಂಡಿದ್ದಾನೆ.

ಏನಿದು ಪ್ರಕರಣ?

ಹಣದ ದಾಹಕ್ಕೆ ಗಂಡ ಮತ್ತು ಆತನ ಹೆತ್ತವರು ಸೇರಿ ಪತ್ನಿಗೆ ಬೆಂಕಿ ಹಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಗ್ರೇಟರ್​ ನೋಯ್ಡಾದಲ್ಲಿ ನಡೆದಿದೆ. ಮೃತಳನ್ನು ನಿಕ್ಕಿ ಎಂದು ಗುರುತಿಸಲಾಗಿದೆ. ಈಕೆ 2016ರಲ್ಲಿ ಸಿರ್ಸಾ ಮೂಲದ ವಿಪಿಎನ್​ ಎಂಬಾತನನ್ನು ಮದುವೆಯಾಗಿದ್ದಳು. ಕಳೆದ ಗುರುವಾರ (ಆಗಸ್ಟ್​ 21) ಗಂಭೀರ ಸುಟ್ಟು ಗಾಯಗಳಿಂದ ನಿಕ್ಕಿಯನ್ನು ಗ್ರೇಟರ್​ ನೋಯ್ಡಾದ ಫೋರ್ಟೀಸ್​ ಆಸ್ಪತ್ರೆಗೆ ಕರೆತಂದಾಗ ಘಟನೆ ಬೆಳಕಿಗೆ ಬಂದಿತು. ಗಂಭೀರ ಗಾಯಗೊಂಡಿದ್ದ ನಿಕ್ಕಿಯನ್ನು ಪರೀಕ್ಷಿಸಿದ ಫೋರ್ಟೀಸ್​ ಆಸ್ಪತ್ರೆ ವೈದ್ಯರು, ಉತ್ತಮ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಅಂತೆಯೇ, ಆಕೆಯನ್ನು ಕರೆದೊಯ್ಯುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಮದುವೆ ಸಮಯದಲ್ಲಿ ಭಾರೀ ವರದಕ್ಷಿಣೆ ನೀಡಲಾಗಿತ್ತು. ಆದರೆ, ಇಷ್ಟಕ್ಕೆ ಗಂಡನ ಮನೆಯವರ ಹಣದಾಹ ತಣಿಸಲಿಲ್ಲ. ಮತ್ತೆ 36 ಲಕ್ಷ ರೂ. ಹಣ ತೆಗೆದುಕೊಂಡು ಬರುವಂತೆ ವಿಪಿನ್​ ಮತ್ತು ಆತನ ಕುಟುಂಬ ನಿಕ್ಕಿಯನ್ನು ಒತ್ತಾಯಿಸಿದರು. ಅಷ್ಟೊಂದು ಹಣವನ್ನು ತೆಗೆದುಕೊಂಡು ಬರಲು ಸಾಧ್ಯವಾಗದಿದ್ದಾಗ, ಮನಬಂದತೆ ಥಳಿಸಿದ ಗಂಡನ ಮನೆಯವರು, ಆಕೆಯನ್ನು ಬೆಂಕಿ ಹಚ್ಚಿ ಭೀಕರವಾಗಿ ಕೊಲೆಗೈದರು ಎಂದು ನಿಕ್ಕಿಯ ಸಹೋದರಿ ಕಾಂಚನ್ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರನ್ನು ಆಧರಿಸಿ ಎಫ್‌ಐಆರ್‌ ಕೂಡ ದಾಖಲಾಗಿದೆ. ಇನ್ನು ಈ ಭಯಾನಕ ಕೃತ್ಯವನ್ನು ಮೃತ ನಿಕ್ಕಿಯ 6 ವರ್ಷದ ಪುಟ್ಟ ಮಗುವಿನ ಮುಂದೆ ಎಸಗಲಾಗಿದೆ. ಆ ಮಗು ಮಾಧ್ಯಮಗಳ ಮುಂದೆ ಮಾಹಿತಿ ಹಂಚಿಕೊಂಡಿದ್ದು, ನನ್ನ ಕಣ್ಣ ಮುಂದೆಯೇ ನನ್ನ ಅಪ್ಪ ನನ್ನ ತಾಯಿಯನ್ನು ಕೊಂದರು ಎಂದು ಹೇಳಿರುವುದು ಅನೇಕರ ಕಣ್ಣಂಚಲ್ಲಿ ನೀರು ತರಿಸಿದೆ.

ಮದುವೆಯ ಸಮಯದಲ್ಲಿ ಅವರ ಕುಟುಂಬವು ಎಸ್‌ಯುವಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ನೀಡಿದ್ದರೂ, ನಿಕ್ಕಿಯ ಅತ್ತೆ-ಮಾವ ಹೆಚ್ಚಿನ ವರದಕ್ಷಿಣೆಗಾಗಿ ಒತ್ತಾಯಿಸುತ್ತಲೇ ಇದ್ದರು ಎಂದು ಸಹೋದರಿ ಕಾಂಚನ್ ಆರೋಪಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡಿದ್ದು, ಅದರಲ್ಲಿ ನಿಕ್ಕಿಯ ಪತಿ ವಿಪಿನ್​ ಹಾಗೂ ಅತ್ತೆ-ಮಾವ ಹಲ್ಲೆ ನಡೆಸಿ ಕೂದಲು ಹಿಡಿದು ಎಳೆದಾಡುತ್ತಿರುವ ದೃಶ್ಯವಿದೆ. ಈ ಘಟನೆಯ ಸಮಯದಲ್ಲಿ ತಾನು ಸ್ಥಳದಲ್ಲಿದ್ದೆ ಆದರೆ, ನನ್ನ ಸಹೋದರಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಕಾಂಚನ್ ಹೇಳಿಕೊಂಡಿದ್ದಾರೆ.

ನನಗೆ ಯಾವುದೇ ಪಶ್ಚಾತಾಪವಿಲ್ಲ!

ಬಂಧಿತನಾದ ಆರೋಪಿ ವಿಪಿನ್​, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಲು ಯತ್ನಿಸಿದ ವೇಳೆ ಆತನ ಕಾಲಿಗೆ ಗುಂಡು ಹಾರಿಸಲಾಯಿತು. ಗುಂಡೇಟಿನ ನೋವಿನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವಿಪಿನ್​ಗೆ ಪೊಲೀಸರು ಸರಣಿ ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಆರೋಪಿ, “ಈ ಕೃತ್ಯದಲ್ಲಿ ನನಗೆ ಯಾವುದೇ ಪಶ್ಚಾತಾಪವಿಲ್ಲ. ನಾನು ಆಕೆಗೆ ಬೆಂಕಿ ಹಚ್ಚಲಿಲ್ಲ. ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದು. ಗಂಡ-ಹೆಂಡತಿ ಮಧ್ಯೆ ಇಂತಹ ಜಗಳಗಳು ನಡೆಯುತ್ತಲೇ ಇರುತ್ತದೆ. ಇದು ತೀರ ಸಾಮಾನ್ಯ. ನಾನವಳನ್ನು ಕೊಂದಿಲ್ಲ” ಎಂದು ಹೇಳಿರುವುದಾಗಿ ‘ಪಿಟಿಐ’ ವರದಿ ಉಲ್ಲೇಖಿಸಿದೆ. ಪ್ರಸ್ತುತ, ವಿಪಿನ್​ ತಾಯಿಯನ್ನು ಬಂಧಿಸಿರುವ ಖಾಕಿ ಪಡೆ, ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net