

ನವದೆಹಲಿ: ಮೊಬೈಲ್ಫೋನ್ಗಳಲ್ಲಿ ವಿಡಿಯೋ ನೋಡಲು, ಹಂಚಿಕೊಳ್ಳಲು ಸಿಮ್ ಕಾರ್ಡ್ ಇರಲೇಬೇಕು. ಜತೆಗೆ ಇಂಟರ್ನೆಟ್ ಸಂಪರ್ಕ ಕೂಡ ಅತ್ಯಗತ್ಯ. ಆದರೆ, ನೆಟ್ ಸಂಪರ್ಕವೂ ಇಲ್ಲದೆ, ಸಿಮ್ ಕಾರ್ಡೂ ಇಲ್ಲದೆ ವಿಡಿಯೋಗಳ ವೀಕ್ಷಣೆ- ಹಂಚಿಕೆಯು ಇನ್ನು ಕೆಲವೇ ದಿನಗಳಲ್ಲಿ ಸಾಧ್ಯವಾಗಲಿದೆ.
ಇಂತಹ ಒಂದು ತಂತ್ರಜ್ಞಾನವನ್ನು ಬೆಂಗಳೂರು, ದೆಹಲಿ ಸೇರಿದಂತೆ ಆಯ್ದ ಕೆಲ ನಗರಗಳಲ್ಲಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಬ್ರಾಡ್‌ಕಾಸ್ಟಿಂಗ್ ಶೃಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು, ಶೀಘ್ರದಲ್ಲೇ 19 ನಗರಗಳಲ್ಲಿ ಪ್ರಯೋಗಗಳನ್ನು ನಡೆಸಿ D2M (Direct To mobile) ತಂತ್ರಜ್ಞಾವನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ D2M ತಂತ್ರಜ್ಞಾನವು ದೇಶಾದ್ಯಂತ ಟಿವಿ ಸೌಲಭ್ಯವಿಲ್ಲದ ಅಂದಾಜು 8-9 ಕೋಟಿ ಮನೆಗಳನ್ನು ತಲುಪಲು ಸಹಾಯ ಮಾಡುತ್ತದೆ. ದೇಶದ 28 ಕೋಟಿ ಮನೆಗಳಲ್ಲಿ ಕೇವಲ 19 ಕೋಟಿ ಕುಟುಂಬಗಳು ಟಿವಿ ಸೆಟ್ ಹೊಂದಿವೆ. 80 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರ ಪೈಕಿ ಹೆಚ್ಚಿನವರು ವೀಡಿಯೊ ಮೂಲಕವೇ ಸುದ್ದಿಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಕ್ಕೆ ನೆಟ್‌ವರ್ಕ್‌ಗಳ ಅಭಾವ ಇದ್ದು, ಈ ಕೊರತೆಯನ್ನು ನಿವಾರಿಸಲು ಈ ತಂತ್ರಜ್ಞಾನವು ಉಪಯೋಗಕಾರಿಗಬಹುದಾಗಿದೆ ಎಂದು ಅಪೂರ್ವ ಚಂದ್ರ ಹೇಳಿದ್ದಾರೆ.
D2M ತಂತ್ರಜ್ಞಾನವನ್ನು ಸಾಂಖ್ಯ ಲ್ಯಾಬ್ ಮತ್ತು ಐಐಟಿ ಕಾನ್ಪುರ್ ಅಭಿವೃದ್ಧಿಪಡಿಸಿವೆ, ನಿರ್ದಿಷ್ಟ ಸ್ಪೆಕ್ಟ್ರಂ ಬಳಸಿಕೊಂಡು ಮೊಬೈಲ್ ಮತ್ತು ಸ್ಮಾರ್ಟ್ ಸಾಧನಗಳಿಗೆ ವೀಡಿಯೊ, ಆಡಿಯೋ ಮತ್ತು ಡೇಟಾ ಸಂಕೇತಗಳನ್ನು ಈ ತಂತ್ರಜ್ಞಾನದ ಮೂಲಕ ರವಾನಿಸಬಹುದಾಗಿದೆ. ಸಿಮ್ ಕಾರ್ಡ್ ಅಥವಾ ಇಂಟರ್ನೆಟ್ ಸಂಪರ್ಕವಿಲ್ಲದೆ ನೇರವಾಗಿ ಮೊಬೈಲ್ನಲ್ಲಿ ಮಲ್ಟಿ ಮೀಡಿಯಾದ ವೀಡಿಯೊಗಳನ್ನು ರವಾನೆ ಮಾಡುವುದು ಈ ತಂತ್ರಜ್ಞಾನದ ವೈಶಿಷ್ಟ್ಯ.