

ಜೈಪುರ: ಚಲಿಸುವ ಬೈಕ್ ಮೇಲೆ ಪ್ರೇಮಿಗಳು ರೊಮ್ಯಾನ್ಸ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿರುವಂತೆ ಕಾಣುತ್ತಿದೆ. ಏಕೆಂದರೆ, ದಿನಕ್ಕೊಂದು ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇದೆ. ಇದೀಗ ವೇಗವಾಗಿ ಚಲಿಸುತ್ತಿದ್ದ ಬೈಕ್ ಮೇಲೆ ಪ್ರೇಮಿಗಳಿಬ್ಬರು ಸರಸವಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ರಾಜಸ್ಥಾನದ ಅಜ್ಮೇರ್ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದಿದೆ. ಯುವತಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಬೈಕ್ ಸವಾರರನ್ನು ಅಪ್ಪಿಕೊಂಡು, ಚುಂಬಿಸುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಇಬ್ಬರು ಅಜ್ಮೇರ್ನಿಂದ ಪುಷ್ಕರ್ಗೆ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಅನುಚಿತವಾಗಿ ವರ್ತಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಜ್ಮೇರದಲ್ಲಿರುವ ಕ್ರಿಶ್ಚಿಯನ್ ಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಕೊನೆಗೆ ಬೈಕ್ ಸವಾರನ ಮಾಹಿತಿ ಪತ್ತೆಹಚ್ಚಲಾಯಿತು. ಆತನನ್ನು ಸಾಹಿಲ್ ಎಂದು ಗುರುತಿಸಲಾಗಿದೆ. ಆತ ಅಜ್ಮೇರ್ನ ಫೈ ಸಾಗರ್ ರಸ್ತೆಯ ನಿವಾಸಿಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸಾಕಷ್ಟು ವಿಚಾರಣೆಯ ಬಳಿಕ ತನ್ನೊಂದಿಗೆ ಇದ್ದ ಯುವತಿಯ ಬಗ್ಗೆ ಸಾಹಿಲ್ ಮಾಹಿತಿ ನೀಡಿದ್ದಾನೆ. ಇದೀಗ ಆ ಯುವತಿಗೂ ಪೊಲೀಸರು ಸಮನ್ಸ್ ನೀಡಿದ್ದು, ಆಕೆಯು ಸಹ ವಿಚಾರಣೆಯನ್ನು ಎದುರಿಸಬೇಕಿದೆ. (ಏಜೆನ್ಸೀಸ್)