ಎರಡರ ಬಳಿಕ ಒಂದು ಬಿಡುಗಡೆ!; ಕಾಂತಾರ ಚಿತ್ರಕ್ಕೂ ಮೊದಲೇ ಜೂಲಿಯೆಟ್ 2 ಪ್ಲ್ಯಾನ್

Ullasa 1
Published on

ಕಾಂತಾರ ಚಿತ್ರದ ಶತದಿನೋತ್ಸವದ ಸಂದರ್ಭದಲ್ಲಿ ನಿರ್ದೇಶಕ, ನಾಯಕ ರಿಷಬ್ ಶೆಟ್ಟಿ ಈಗ ನೋಡಿದ್ದು ಪಾರ್ಟ್ 2, ಮುಂದೆ ಬರಲಿರುವುದು ಪಾರ್ಟ್ 1 ಎಂದಿದ್ದರು. ವಿಶೇಷ ಅಂದರೆ ಈ ಐಡಿಯಾವನ್ನು ಈ ಹಿಂದೆಯೇ ಕನ್ನಡ ಚಿತ್ರತಂಡವೊಂದು ಮಾಡಿದೆ. ಹೆಸರು ಜೂಲಿಯೆಟ್ 2. ವಿರಾಟ್ ನಿರ್ದೇಶನದ ಈ ಚಿತ್ರದಲ್ಲಿ ಪ್ರೇಮಂ ಪೂಜ್ಯಂ ನಟಿ ಬೃಂದಾ ಆಚಾರ್ಯ ನಾಯಕಿ. ಜೂಲಿಯೆಟ್ 2 ತೆರೆಗೆ ಬರಲು ರೆಡಿಯಾಗಿದ್ದು, ಜೂಲಿಯೆಟ್ 1 ಚಿತ್ರೀಕರಣ ಶೇಕಡಾ 30ರಷ್ಟು ಪೂರ್ಣಗೊಂಡಿದೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರವಾಗಿದ್ದು, ನಾವು ಕಥೆ ಪ್ಲ್ಯಾನ್​ ಮಾಡಿಕೊಂಡಿದ್ದೇ ಹೀಗೆ, ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ ನಿರ್ದೇಶಕ ವಿರಾಟ್.

ಪಶ್ಚಿಮ ಘಟ್ಟಗಳ ದಟ್ಟ ಕಾಡಿನಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ಶೂಟಿಂಗ್ ಸಮಯದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಹೇಳಿಕೊಳ್ಳುವ ವಿರಾಟ್, ಕಾಡಿನ ಮಧ್ಯ 200 ಎಕರೆ ಜಾಗದಲ್ಲಿ ಒಂದೇ ಮನೆ. ಅಲ್ಲಿಗೆ ಹೋಗಲು ಮುಕ್ಕಾಲು ತಾಸು ಬೇಕು. ತುಂಬ ಮಳೆ ಬರುತ್ತಿತ್ತು. ಅದರಿಂದ ಹಲವು ದಿನ ಶೂಟಿಂಗ್ ಕ್ಯಾನ್ಸಲ್ ಮಾಡಬೇಕಾಯಿತು. ಜತೆಗೆ ಎರಡು ಬಾರಿ ಮಳೆಯಿಂದಾಗಿ ಸೆಟ್​ಗಳು ಸಹ ಹಾಳಾಗಿದ್ದವು. 48 ದಿನ ಚಿತ್ರೀಕರಣ ಮಾಡಿದ್ದೇವೆ. ಮಹಿಳಾ ಪ್ರಧಾನ ಸಿನಿಮಾ. ಎಲ್ಲಿಯೂ ಗುಣಮಟ್ಟ ಬಿಟ್ಟುಕೊಟ್ಟಿಲ್ಲ, ಪ್ರೇಕ್ಷಕರಿಗೆ ಚಿತ್ರದ ಮೇಕಿಂಗ್ ಇಷ್ಟವಾಗಲಿದೆ, ಹಾಲಿವುಡ್ ಮಟ್ಟದಲ್ಲಿ ಆಕ್ಷನ್ ಸನ್ನಿವೇಶಗಳು ಮೂಡಿಬಂದಿವೆ, ಎಂದು ಮಾಹಿತಿ ನೀಡುತ್ತಾರೆ ವಿರಾಟ್. ಅಂದಹಾಗೆ ಜೂಲಿಯೆಟ್ 2 ಇದೇ 17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net