

ಬೆಂಗಳೂರು: ಆರ್. ಚಂದ್ರು ನಿರ್ದೇಶನದ ಕಬ್ಜ ಚಿತ್ರದ ತಾರಾಗಣದ ಮತ್ತಷ್ಟು ಹಿಗ್ಗಿದೆ. ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಸರಣ್, ಕಬೀರ್ ದುಹಾನ್ ಸಿಂಗ್, ನವಾಬ್ ಶಾ, ಜಗಪತಿ ಬಾಬು, ಡಾನಿಶ್ ಅಖ್ತರ್ ಸೈಫಿ, ಅನೂಪ್ ರೇವಣ್ಣ, ಪ್ರಮೋದ್ ಶೆಟ್ಟಿ ಪ್ರಮುಖ ತಾರಾಗಣದಲ್ಲಿದ್ದು, ಇದೀಗ ನಟಿ ತಾನ್ಯಾ ಹೋಪ್ ಕೂಡ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಒಂದು ವಿಶೇಷ ಹಾಡಿನಲ್ಲಿ ನಾಯಕ ಉಪೇಂದ್ರ ಜತೆ ತಾನ್ಯಾ ಕಾಣಿಸಿಕೊಳ್ಳಲಿದ್ದಾರೆ.
ಆದರೆ ಈ ವಿಷಯದ ಬಗ್ಗೆ ಗೌಪ್ಯತೆ ಕಾಪಾಡುವ ನಿರ್ದೇಶಕ ಆರ್. ಚಂದ್ರು, ಒಂದು ಹಾಡಿನ ಚಿತ್ರೀಕರಣ ಬಾಕಿಯಿರುವುದು ನಿಜ. ಆದರೆ ಆ ಹಾಡಿನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡುತ್ತೇವೆ, ಎಂದು ಹೇಳಿಕೊಳ್ಳುತ್ತಾರೆ. ಮುಂದಿನ ವಾರ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಆ ಬಳಿಕ ಚಿತ್ರತಂಡ ಸೆನ್ಸಾರ್ಗೆ ಹೋಗಲಿದೆ. ಈಗಾಗಲೇ ಮಾ. 17ರಂದು ಬಿಡುಗಡೆ ಮಾಡುವ ಕುರಿತು ಚಿತ್ರತಂಡ ಅನೌನ್ಸ್ ಮಾಡಿಕೊಂಡಿದ್ದು, ಸದ್ಯ ಪ್ರಚಾರದಲ್ಲಿ ತೊಡಗಿದೆ. ಇತ್ತೀಚೆಗಷ್ಟೆ ಕಬ್ಜ ಶೀರ್ಷಿಕೆ ಗೀತೆಯನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾದ ರವಿ ಬಸ್ರೂರ್ ಸಂಗೀತ ನೀಡಿರುವ ಕಬ್ಜ ಟೈಟಲ್ ಸಾಂಗ್ಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಕಳೆದ ವರ್ಷ ಬಿಡುಗಡೆಯಾದ ಹೋಮ್ ಮಿನಿಸ್ಟರ್ ಚಿತ್ರದಲ್ಲಿ ತಾನ್ಯಾ ಹೋಪ್, ಉಪೇಂದ್ರ ಜತೆ ಕಾಣಿಸಿಕೊಂಡಿದ್ದರು. ಇದೀಗ ಕಬ್ಜ ಚಿತ್ರದ ಹಾಡಿನಲ್ಲಿ ಅವರ ಜತೆ ಮತ್ತೆ ಮಿಂಚಲಿದ್ದು, ಅದರ ಜತೆಗೆ ತಮಿಳಿನ ವಿಲನ್, ಗೋಲ್ವಾಲ್, ಕಿಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಆಯುಷ್ ಶರ್ವಗೆ ನಾಯಕಿಯಾಗಿ ಬಾಲಿವುಡ್ಗೆ ಡೆಬ್ಯೂ ಮಾಡುತ್ತಿರುವ ತಾನ್ಯಾ, ಮತ್ತೊಂದು ವೆಬ್ ಸರಣಿಯಲ್ಲು ಬಿಜಿಯಾಗಿದ್ದಾರೆ.