VIDEO| ಇಡೀ ಜಿಂಕೆಯ ದೇಹವನ್ನೇ ಗುಳುಂ ಸ್ವಾಹ ಮಾಡಿದ ದೈತ್ಯ ಹೆಬ್ಬಾವು: ರೋಚಕ ವಿಡಿಯೋ ವೈರಲ್​!

Python
Published on

ನವದೆಹಲಿ: ಹಾವೊಂದು ಇಡೀ ಜಿಂಕೆಯನ್ನು ಗುಳುಂ ಸ್ವಾಹ ಮಾಡಿದ ವಿಡಿಯೋವನ್ನು ಎಂದಾದರೂ ನೀವು ನೋಡಿದ್ದೀರಾ? ನೋಡಿಲ್ಲವಾದರೆ, ಇತ್ತೀಚೆಗಷ್ಟೇ ವೈರಲ್ ಆದ ವಿಡಿಯೋವೊಂದು ನಿಮಗೆ ಆ ಥ್ರಿಲ್​ ನೀಡಲಿದೆ.

ಭಾರತೀಯ ಅರಣ್ಯಾಧಿಕಾರಿ ಪರ್ವೀನ್​ ಕಾಸ್ವಾನ್​ ಅವರು ತಮ್ಮ ಟ್ವಿಟರ್​ನಲ್ಲಿ ವಿಡಿಯೋ ಶೇರ್​ ಮಾಡಿಕೊಂಡಿದ್ದು, ತುಂಬಾ ಹಸಿದಿದ್ದ ಬರ್ಮೀಸ್​​ ಹೆಬ್ಬಾವು ಇಡೀ ಜಿಂಕೆಯನ್ನೇ ನುಂಗಿದೆ. ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿದ ವಿಡಿಯೋವನ್ನು ಭಾರತದ ವೈಲ್ಡ್​ಲೆನ್ಸ್ ಕಳುಹಿಸಿದೆ ಎಂದು ಕಸ್ವಾನ್​ ಅವರು ವಿಡಿಯೋ ಕುರಿತು ಬರೆದುಕೊಂಡಿದ್ದಾರೆ.​

ಎರಡು ನಿಮಿಷದ ವಿಡಿಯೋದಲ್ಲಿ ಹಸಿವಿನಿಂದ ಬಳಲಿರುವ ಹೆಬ್ಬಾವು ಬೇಟೆಯಾಡಿದ್ದ ಜಿಂಕೆಯನ್ನು ತಲೆಯಿಂದ ಪ್ರಾರಂಭಿಸಿ ಇಡೀ ದೇಹವನ್ನು ನಿಧಾನವಾಗಿ ನುಂಗುತ್ತದೆ. ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ಹೆಬ್ಬಾವಿನ ದೊಡ್ಡ ಬಾಯಿಯನ್ನು ನೋಡಬಹುದಾಗಿದೆ. ವಿಡಿಯೋ ವೈರಲ್​ ಆಗಿದ್ದು, ಈವರೆಗೆ 21 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದಾರೆ.

ಮೊಲ, ಇಲಿಯಂತಹ ಸಣ್ಣ ಪ್ರಾಣಿಗಳನ್ನು ಹಾವುಗಳು ಗುಳುಂ ಸ್ವಾಹ ಮಾಡುವುದು ಸಾಮಾನ್ಯ. ಆದರೆ, ದೊಡ್ಡ ಪ್ರಾಣಿಗಳನ್ನು ಬೇಟೆಯಾಡಿ ನುಂಗುವ ವಿಡಿಯೋಗಳು ಕಾಣಸಿಗುವುದು ತುಂಬಾ ಅಪರೂಪ. ಇದೀಗ ವೈರಲ್​ ಆಗಿರುವ ವಿಡಿಯೋ ನೋಡಿಗರಿಗೆ ರೋಚಕತೆ ಕಟ್ಟಿಕೊಡುವುದಂತೂ ಸತ್ಯವಾಗಿದೆ. ನೆಟ್ಟಿಗರು ಸಹ ವಿಡಿಯೋ ನೋಡಿ ಹುಬ್ಬೇರಿಸಿ ತಮ್ಮದೇ ರೀತಿಯಲ್ಲಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಅದರಲ್ಲೋರ್ವ ಅಬ್ಬಾ... ಹೆಬ್ಬಾವಿನ ಅರಗಿಸಿಕೊಳ್ಳುವ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net