ಪುಟಾಣಿಗಳೇ ಮೊಬೈಲ್ ಗೀಳು ಒಳ್ಳೆಯದಲ್ಲ; ಹಾರುವ ಹಂಸಗಳ ಸಂದೇಶವಿದು...

Ulalas-3
Published on

ಬೆಂಗಳೂರು: ಇಂದಿನ ವಿದ್ಯಮಾನಗಳಲ್ಲಿ ಮೊಬೈಲ್ ಬಳಸದ ವ್ಯಕ್ತಿಯೇ ಇಲ್ಲವೇನೋ? ಆಂಡ್ರಾಯ್್ಡ ಮೊಬೈಲ್​ನಲ್ಲಿ ಏನೆಲ್ಲ ಆಪ್​ಗಳಿವೆ ಎಂದರೆ ಮನೆಯಲ್ಲಿನ ಮಕ್ಕಳೇ ಅವುಗಳನ್ನು ಬಳಸುತ್ತ ಹೋದಂತೆ ವಿಕ್ಷಿಪ್ತರಾಗುತ್ತಿದ್ದಾರೆ. ಈಗಾಗಲೇ ಬ್ಯಾನ್ ಆಗಿರುವ ಬ್ಲೂ ವೇಲ್, ಪಬ್ಜಿ ಸೇರಿ ಕೆಲ ಆಟಗಳು ಎಳೆಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಈ ಆಟಗಳಲ್ಲಿ ವ್ಯಕ್ತಿಗಳನ್ನು ಕೊಲ್ಲುವುದೇ ಪ್ರಮುಖ ವಿಷಯ. ಇಂದಿನ ಚಿಣ್ಣರು ಇಂಥ ಆಟಗಳಲ್ಲಿಯೇ ಮಗ್ನರಾಗಿರುವುದು ಆತಂಕಕಾರಿ. ಇದೆಲ್ಲವನ್ನು ಗಮನಿಸಿಯೇ ನಾನು ‘ಹಾರುವ ಹಂಸಗಳು’ ಸಿನಿಮಾ ನಿರ್ದೇಶಿಸಿದ್ದೇನೆ..’

ಹೀಗೆ ತಾವು ಚೊಚ್ಚಲ ಸಿನಿಮಾ ನಿರ್ದೇಶನ ಮಾಡಿರುವ ಹಿಂದಿನ ಉದ್ದೇಶವನ್ನು ಬಿಚ್ಚಿಟ್ಟರು ಖ್ಯಾತ ಹಿರಿಯ ಸಾಹಿತಿ, ಮತ್ತು ಪದ್ಮಶ್ರಿ ಪುರಸ್ಕ್ರತ ಡಾ. ದೊಡ್ಡರಂಗೇಗೌಡ. ಮಕ್ಕಳ ಬೆಳವಣಿಗೆಗೆ ಮೊಬೈಲ್ ಹೇಗೆ ಮಾರಕವಾಗುತ್ತಿದೆ ಎಂಬ ವಿಷಯವನ್ನು ಆಯ್ದುಕೊಂಡಿರುವ ಅವರು, ಹಳ್ಳಿಗಾಡಿನ ಮತ್ತು ನಗರ ಪ್ರದೇಶದ ಮಕ್ಕಳ ನಡುವಿನ ವ್ಯತ್ಯಾಸ ಮತ್ತು ಈ ಎರಡೂ ಭಿನ್ನ ಪ್ರಾದೇಶಿಕತೆಯ ಮಕ್ಕಳ ಮನಸ್ಥಿತಿಯನ್ನು ‘ಹಾರುವ ಹಂಸಗಳು’ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಸಿನಿಮಾ ಸೃಷ್ಟಿ ಮತ್ತು ಇದರ ಹಿಂದಿನ ಉದ್ದೇಶವನ್ನು ವಿಜಯವಾಣಿಯೊಂದಿಗೆ ಹಂಚಿಕೊಂಡಿದ್ದಾರೆ. ‘ಮೊಬೈಲ್ ಬಂದಿದ್ದೇ ಬಂದಿದ್ದು, ಮಕ್ಕಳು ಬಾವಿಯೊಳಗಿನ ಕಪ್ಪೆಗಳಾಗುತ್ತಿದ್ದಾರೆ. ಲೋಕಜ್ಞಾನ ದೂರದ ವಿಚಾರವಾಯ್ತು, ಪಕ್ಕದಲ್ಲಿ ನಡೆಯುತ್ತಿರುವುದೇ ಗೊತ್ತಾಗುವುದಿಲ್ಲ. ನಮ್ಮ ಕಾಲದ ಬಾಲ್ಯ ಹೀಗಿರಲಿಲ್ಲ. ಇದೆಲ್ಲವನ್ನು ನೋಡಿಯೇ ‘ಆತಂಕ’ ಎಂಬ ನಾಟಕದ ಸ್ಕ್ರಿಪ್ಟ್ ಸಹ ಬರೆದು ಮುಗಿಸಿದ್ದೇನೆ. ಹೀಗೆ ಎಲ್ಲವೂ ನಡೆಯುತ್ತಿದ್ದಾಗಲೇ ವಾಸುಪ್ರಸಾದ್ ಎಂಬುವವರು ಬಂದು, ಮಕ್ಕಳ ಕುರಿತಾಗಿ ಸಿನಿಮಾ ಮಾಡುವ ಬಗ್ಗೆ ಹೇಳಿಕೊಂಡರು. ಕಥೆಯೂ ಸಿದ್ಧವಿತ್ತು, ಹರಕೆ ಹನುಪ್ಪನ ದೇವಸ್ಥಾನದಲ್ಲಿ ಪೂಜೆಯೂ ಆಯಿತು. ಚಿತ್ರೀಕರಣವೂ ಶುರುವಾಗಿ, ಕೇವಲ 15 ದಿನದಲ್ಲಿ ಮದ್ದೂರು ಹತ್ತಿರದ ದೊಡ್ಡ ಅಬ್ಬಲೂರಿನಲ್ಲಿ ಮಾಡಿ ಮುಗಿಸಿದೆವು’ ಎನ್ನುವ ಗೌಡ್ರು, ‘ಹಾರುವ ಹಂಸಗಳು’ ಚಿತ್ರದೊಳಗೇನಿದೆ ಎಂಬುದನ್ನೂ ವಿವರಿಸಿದ್ದಾರೆ.

ಗ್ರಾಮ್ಯ ಸೊಗಡಿನ ಅನಾವರಣ

‘ನಮ್ಮ ಚಿತ್ರದ ಕಥಾ ವಸ್ತುವೇ ಮೊಬೈಲ್ ಗೀಳು. ಮನೆಯಲ್ಲಿನ ಹಿರಿಯರು, ಮಕ್ಕಳು ಹಠ ಮಾಡದಿರಲಿ ಎಂಬ ಕಾರಣಕ್ಕೆ ಮೊಬೈಲ್ ಅವರ ಕೈಯಲ್ಲಿ ಕೊಟ್ಟು ಪಾರಾಗುತ್ತಾರೆ. ಅದೇ ದೊಡ್ಡ ತಪು್ಪ. ಆ ಮಕ್ಕಳು ಮೊಬೈಲ್​ನಲ್ಲಿ ನೋಡುವುದಾದರೂ ಏನು? ಮೊಬೈಲ್​ನಲ್ಲಿ ಚಿಂತನೆಯ ವಿಷಯಗಳಿವೆ, ಮಾಹಿತಿ ತಿಳಿದುಕೊಳ್ಳುವ ಸೌಲಭ್ಯವಿದೆ. ಅದೆಲ್ಲವನ್ನು ಬಿಟ್ಟು ಮನರಂಜನೆ ಉದ್ದೇಶಕ್ಕಷ್ಟೇ ಮೊಬೈಲ್ ಬಳಸುತ್ತಿದ್ದಾರೆ. ನೋಡಬಾರದ್ದನ್ನು ನೋಡುತ್ತಿದ್ದಾರೆ. ಇತ್ತ ಹಳ್ಳಿ ಮಕ್ಕಳೂ ಮೊಬೈಲ್ ಗೀಳಿಗೆ ಅಂಟಿಕೊಂಡಿದ್ದಾರೆ. ಪಟ್ಟಣದ ಮಕ್ಕಳಿಗೆ ಹಳ್ಳಿಯೇ ಕೌತುಕ. ಇವೆರಡನ್ನೂ ಮಿಶ್ರಣ ಮಾಡಿ, ಹಳ್ಳಿಯ ಸೊಗಡು, ಹಳ್ಳಿಯ ಜೀವನವನ್ನು ತೆರೆದಿಡುವ ಪ್ರಯತ್ನ ಚಿತ್ರದಲ್ಲಾಗಿದೆ. ನಮ್ಮ ಕಾಲದ ಬಾಲ್ಯದ ಆಟಗಳನ್ನು ಸಿನಿಮಾದಲ್ಲಿ ತೋರಿಸಿದ್ದೇವೆ. ನಿರ್ವಪಕರ ಪುತ್ರ ಮಾಸ್ಟರ್ ಓಜಸ್ ಈ ಚಿತ್ರದಲ್ಲಿ ಬಾಲನಟನಾಗಿ ಮುಖ್ಯಭೂಮಿಕೆ ನಿಭಾಯಿಸಿದ್ದಾನೆ. ಇನ್ನೂ ಹಲವು ಮಕ್ಕಳು ಚಿತ್ರದ ಭಾಗವಾಗಿದ್ದಾರೆ’ ಎನ್ನುತ್ತಾರೆ.

ಸಿನಿಮೋತ್ಸವದಲ್ಲೂ ಭಾಗಿ

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸಿನಿಮಾ ಬಿಡುಗಡೆಗೆ ಸರ್ಕಾರ ಅವಕಾಶ ನೀಡಿಲ್ಲ. ಇತ್ತ ಒಂದಷ್ಟು ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆ ಆಗುತ್ತಿವೆ. ಇನ್ನು ಕೆಲವು ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ಆನ್​ಲೈನ್ ಸಿನಿಮೋತ್ಸವದಲ್ಲೂ ಭಾಗವಹಿಸುತ್ತಿವೆ. ಅದೇ ರೀತಿ ‘ಹಾರುವ ಹಂಸಗಳು’ ಚಿತ್ರ ಮುಂಬರುವ ಗೋವಾ ಮತ್ತು ಕೊಲ್ಕತ್ತ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲಿದೆಯಂತೆ. ರಾಜ್ಯದ 370ಕ್ಕೂ ಅಧಿಕ ಶಾಲೆಗಳಲ್ಲಿ ಈ ಚಿತ್ರವನ್ನು ತೋರಿಸುವ ವಿಚಾರವೂ ನಿರ್ದೇಶಕ ದೊಡ್ಡರಂಗೇಗೌಡರದ್ದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net