ಲಾಕ್​ಡೌನ್ ಟೈಮಲ್ಲಿ ಖರ್ಚಿಲ್ಲದೇ ಹೆಣ್ಣುಮಕ್ಕಳ ಮದುವೆ ಮಾಡೋಕೆ ಹೊರಟ ತಂದೆಗೆ ಅಡ್ಡಿಯಾಗಿದ್ದೇನು...?

Marriage
Published on

ನೊಯ್ಡಾ: ಲಾಕ್​ಡೌನ್​ ಅವಧಿ ಕೆಲ ಬಡ ಕುಟುಂಬಗಳ ಪಾಲಿಗೆ ನಿಜಕ್ಕೂ ವರದಾನವೆನಿಸಿದೆ ಎಂದರೆ ತಪ್ಪೇನಿಲ್ಲ. ಜೀವನವಿಡೀ ಗಳಿಸಿದ್ದನ್ನ ಮಕ್ಕಳ ಮದುವೆಗಾಗಿ ಖರ್ಚು ಮಾಡಬೇಕಾಗುತ್ತೆ. ಆದರೆ, ಲಾಕ್​ಡೌನ್​ನಲ್ಲಿ 50ಕ್ಕಿಂತ ಹೆಚ್ಚು ಜನರನ್ನು ಕರೆಯುವಂತಿಲ್ಲ. ಹೀಗಾಗಿ ಹೆಚ್ಚಿನ ಖರ್ಚಿಲ್ಲದೇ ಮದುವೆ ಮುಗಿಸಿ ಬಿಡಬಹುದು.

ಇಂಥದ್ದೇ ಯೋಚನೆ ಬಂದಿದ್ದು, ಉತ್ತರಪ್ರದೇಶದ ಗ್ರೇಟರ್​ ನೋಯ್ಡಾದ 42 ವರ್ಷದ ವ್ಯಕ್ತಿಗೆ. ಲಾಕ್​ಡೌನ್​ ಕಾರಣದಿಂದಾಗಿ ಉದ್ಯೋಗವನ್ನು ಕಳೆದುಕೊಂಡಿದ್ದ. ಸಾಲ ಬೇರೆ ಹೆಚ್ಚಾಗಿತ್ತು. ಕುಡಿತದ ಕಾರಣ ಅನಾರೋಗ್ಯ ಕಾಡುತ್ತಿತ್ತು. ಈ ಎಲ್ಲ ಕಾರಣದಿಂದಾಗಿ ತನ್ನಿಬ್ಬರು ಹೆಣ್ಣುಮಕ್ಕಳ ಮದುವೆಯನ್ನು ಮಾಡಲು ಮುಂದಾಗಿದ್ದಾನೆ. ಇಷ್ಟಾದರೆ ನನ್ನ ಜವಾಬ್ದಾರಿ ಮುಗಿಯುತ್ತೆ ಎನ್ನುವುದು ಅವನ ಯೋಚನೆಯಾಗಿತ್ತು.

ಇದಕ್ಕಾಗಿ ಇಬ್ಬರು ಯುವಕರನ್ನು ಗುರುತಿಸಿದ್ದ. ಅವರ ಕುಟುಂಬದವರೊಡನೆ ಮಾತುಕತೆ ಮುಗಿಸಿದ್ದ. ವರದಕ್ಷಿಣೆ ಏನೂ ಬೇಡ ಸರಳವಾಗಿ ಮದುವೆ ಮಾಡಿ ಕೊಡಿ ಎಂದೇ ಆ ಕುಟುಂಬದವರು ಹೇಳಿದ್ದರು.

ಮದುವೆ ದಿನ ಸ್ಥಳಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಬಂದಾಗಲೇ ವಿಷಯ ಗೊತ್ತಾಗಿದ್ದು, ಇಬ್ಬರು ಹೆಣ್ಣುಮಕ್ಕಳು ಅಪ್ರಾಪ್ತರು ಎಂಬುದು. ಒಬ್ಬಾಕೆ ಆರನೇ ತರಗತಿಯಲ್ಲಿ ಓದುತ್ತಿದ್ದರೆ, ಮತ್ತೊಬ್ಬಾಕೆ 9ನೇ ತರಗತಿ ವಿದ್ಯಾರ್ಥಿನಿ.

ನನ್ನ ಮಕ್ಕಳಿಗೆ ಇನ್ನೂ ಓದಬೇಕೆಂಬ ಆಸೆಯಿದೆ. ಆದರೆ, ಆರ್ಥಿಕ ಸಂಕಷ್ಟದ ಕಾರಣ ಅವರ ಮದುವೆ ಮಾಡಿಕೊಡಲು ನಿರ್ಧರಿಸಿದ್ದೆವು ಎಂದು ತಾಯಿ ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.

ಪಾಲಕರಿಗೆ ಎಚ್ಚರಿಕೆ ನೀಡಿ ಮಕ್ಕಳಿಗೆ 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net