

ಭದ್ರಾವತಿ: ಕಾಂಗ್ರೆಸ್ ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ನಗರ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ. ಪಕ್ಷ ಸಂಘಟಿಸಿ ಕ್ಷೇತ್ರದಲ್ಲಿ ಹೊಸ ಶಕೆ ಹುಟ್ಟುಹಾಕುತ್ತೇನೆ ಎಂದು ಕಾಂಗ್ರೆಸ್ ನಗರ ಘಟಕಾಧ್ಯಕ್ಷ ಎಸ್.ಕುಮಾರ್ ಹೇಳಿದರು.
ಶಾಸಕ ಸಂಗಮೇಶ್ವರ್ ಸೇರಿ ರಾಜ್ಯದ ನಾಯಕರ ಕೃಪೆಯಿಂದ ನಗರ ಘಟಕದ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರ ಸಲಹೆ ಸಹಕಾರ ಪಡೆದು ಮುಂಬರುವ ತಾಪಂ, ಜಿಪಂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೇವೆ. ನಮ್ಮ ಸರ್ಕಾರ ಮಾತು ಕೊಟ್ಟಂತೆ 5 ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದ್ದು ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಂಪಿಎಂ ಕಾರ್ಖಾನೆಯನ್ನು ಮರು ಆರಂಭಿಸುವ ಭರವಸೆ ನೀಡಿದ್ದ ಮುಖ್ಯಮಂತ್ರಿಗಳು ಮಾತಿನಂತೆ ನಡೆದುಕೊಳ್ಳುತ್ತಾರೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಒಡೆತನದ ವಿಐಎಸ್‌ಎಲ್ ಕಾರ್ಖಾನೆಗೆ ಬಂಡವಾಳ ತೊಡಗಿಸುವಂತೆ ಕ್ಷೇತ್ರದ ಸಂಸದರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಲಾಗಿದೆ. ಈ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ಸಾಗಲು ಸ್ಥಳೀಯವಾಗಿ ಕಾರ್ಯಕರ್ತರ ಸಹಕಾರ ಪಡೆದು ಸರ್ಕಾರಗಳನ್ನು ಒತ್ತಾಯಿಸಲಾಗುವುದು ಎಂದರು.
ನಗರಸಭೆ ವ್ಯಾಪ್ತಿಯ ಎಲ್ಲ 35 ವಾರ್ಡ್‌ಗಳಲ್ಲೂ ಕಾರ್ಯಕರ್ತರ ಬೂತ್‌ಗಳನ್ನು ತೆರೆಯಲಾಗುವುದು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಬಲ ಹೆಚ್ಚಿಸಲಾಗುವುದು. ಕಾರ್ಯಕರ್ತರೇ ನಮಗೆ ಶಕ್ತಿ ಎಂದರು.
ನಗರ ಘಟಕದ ಅಧ್ಯಕ್ಷ ಎಚ್.ಎಲ್.ಷಡಕ್ಷರಿ ಮಾತನಾಡಿ, ಪಕ್ಷ ಸಂಘಟನೆ ಮತ್ತಷ್ಟು ವೃದ್ಧಿಸಲಿ ಎಂಬ ಕಾರಣದಿಂದ ಕಾಂಗ್ರೆಸ್ ಪಕ್ಷ ಎಸ್.ಕುಮಾರ್ ಅವರನ್ನು ನಗರ ಘಟಕದ ಅಧ್ಯಕ್ಷರನ್ನಾಗಿ ಮಾಡಿದೆ. ಎಲ್ಲರ ವಿಶ್ವಾಸ ಪಡೆದು ಪಕ್ಷದ ಕಾರ್ಯಚಟುವಟಿಕೆ ನಡೆಸಲಿ. ನನ್ನನ್ನು ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್‌ನ ಪ್ರಭಾರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶ್ರುತಿ ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳಾ ಭೈರಪ್ಪ, ಪ್ರಮುಖರಾದ ಬಲ್ಕಿಷ್ ಬಾನು, ಸಿ.ಎಂ.ಖಾದರ್, ಚನ್ನಪ್ಪ, ಅಮೀರ್‌ಜಾನ್, ಗೋವಿಂದಸ್ವಾಮಿ, ಪೀರ್ ಷರ್ೀ, ಗಂಗಾಧರ, ವಿಲ್ಸನ್ ಬಾಬು, ನರಸಿಂಹಮೂರ್ತಿ ಇತರರಿದ್ದರು.