ಜಗದೀಪ್ ಧನಕರ್​ ರಾಜೀನಾಮೆ: ಸೆ.9ರಂದು ಉಪರಾಷ್ಟ್ರಪತಿ ಚುನಾವಣೆ, ನಾಮಪತ್ರ ಸಲ್ಲಿಕೆಗೆ ಆ. 21 ಕೊನೇ ದಿನ! Vice Presidential Election

Vice Presidential Election
Published on

Vice Presidential Election : ಜಗದೀಪ್ ಧನಕರ್​ ಅವರ​ ರಾಜೀನಾಮೆ ಬಳಿಕ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನಕ್ಕೆ ಮುಂದಿನ ಸೆಪ್ಟೆಂಬರ್ 9ರಂದು ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಇಂದು (ಆಗಸ್ಟ್​ 01) ಘೋಷಣೆ ಮಾಡಿದೆ.

ಕಳೆದ ತಿಂಗಳು ಜಗದೀಪ್ ಧನಕರ್​ ಅವರು ದಿಢೀರ್ ರಾಜೀನಾಮೆ ನೀಡಿದರು. ಸದ್ಯ ತೆರವಾಗಿರುವ ಉನ್ನತ ಸ್ಥಾನಕ್ಕೆ ಮತ್ತೊಬ್ಬರ ನೇಮಕ ಅಗತ್ಯವಾಗಿದ್ದು, ಸೆ.9ರಂದು ಚುನಾವಣೆ ನಡೆಯಲಿದೆ. ಆಗಸ್ಟ್ 7 ರಂದು ಚುನಾವಣೆ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಮತ್ತು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 21 ಆಗಿರುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.

ಸೆಪ್ಟೆಂಬರ್ 9 ರಂದು ಮತದಾನ ನಡೆಯಲಿದ್ದು, ಅಂದೇ ಫಲಿತಾಂಶಗಳನ್ನು ಸಹ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಅಂದಹಾಗೆ, ಗೃಹ ಸಚಿವಾಲಯ 2025ರ ಜುಲೈ 22ರಂದು ಅಧಿಸೂಚನೆಯನ್ನು ಹೊರಡಿಸಿ, ಖಾಲಿ ಹುದ್ದೆಯನ್ನು ದೃಢಪಡಿಸಿತು. ಕಾನೂನಿನ ಪ್ರಕಾರ, ಅಂತಹ ಖಾಲಿ ಹುದ್ದೆಯನ್ನು ಭರ್ತಿ ಮಾಡಲು ಚುನಾವಣೆಯನ್ನು ಸಾಧ್ಯವಾದಷ್ಟು ಬೇಗ ನಡೆಸಬೇಕು. ಆಯ್ಕೆಯಾಗುವ ವ್ಯಕ್ತಿಯು ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸುತ್ತಾರೆ.

17ನೇ ಉಪರಾಷ್ಟ್ರಪತಿ ಚುನಾವಣೆಯು 1952ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆಯಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ನಡೆಯಲಿದೆ.

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದಾರೆ. 2022 ರಿಂದ ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದ 74 ವರ್ಷದ ಧನಖರ್, ರಾಜ್ಯಸಭಾ ಅಧ್ಯಕ್ಷರಾಗಿ ಮುಂಗಾರು ಅಧಿವೇಶನದ ಮೊದಲ ದಿನದ ಅಧ್ಯಕ್ಷತೆ ವಹಿಸಿದ ಬೆನ್ನಲ್ಲೇ ರಾಜೀನಾಮೆ ಘೋಷಣೆ ಮಾಡಿದರು. ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸಲು, ಸಂವಿಧಾನದ 67(ಎ) ವಿಧಿಗೆ ಅನುಗುಣವಾಗಿ, ನಾನು ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಧನಕರ್​ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ಪತ್ರವನ್ನು ಉಪರಾಷ್ಟ್ರಪತಿಗಳ ಕಚೇರಿ ಬಿಡುಗಡೆ ಮಾಡಿತು.

ಭಾರತೀಯ ಸಂವಿಧಾನದ 66ನೇ ವಿಧಿಯ ಪ್ರಕಾರ, ಉಪರಾಷ್ಟ್ರಪತಿಯನ್ನ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರನ್ನು ಒಳಗೊಂಡಿರುವ ಸಂಸತ್ತಿನ ಎರಡೂ ಸದನಗಳು ಆಯ್ಕೆ ಮಾಡುತ್ತದೆ. ಸದಸ್ಯರು ಏಕ ವರ್ಗಾವಣೆ ಮತ ವ್ಯವಸ್ಥೆಯನ್ನು ಬಳಸಿಕೊಂಡು ರಹಸ್ಯ ಮತದಾನದ ಮೂಲಕ ಮತ ಚಲಾಯಿಸುತ್ತಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net