

ಗಾಂಧಿನಗರ: ಗುಜರಾತ್ನಲ್ಲಿ ಬುಧವಾರದಿಂದ ವೈಬ್ರಂಟ್ ಗುಜರಾತ್ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿರು ವುದ ರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಗಾಂಧಿನಗರದಲ್ಲಿ ವಿವಿಧ ಜಾಗತಿಕ ಕಂಪನಿಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ, ದೇಶದ ಆರ್ಥಿಕತೆ ಹೆಚ್ಚಿಸಲು ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿಸಲು ವಿವಿಧ ಕ್ಷೇತ್ರಗಳಾದ್ಯಂತ ಹೂಡಿಕೆ ಕುರಿತು ರ್ಚಚಿಸಿದ್ದಾರೆ.
ಬುಧವಾರದ ಸಮಾವೇಶವನ್ನು ಪ್ರಧಾನಿ ಉದ್ಘಾಟಿಸಲಿದ್ದು, ಅದಕ್ಕೂ ಮುನ್ನ ಸುಜುಕಿ ಮೋಟಾರ್ ಕಾರ್ಪ್, ಮೈಕ್ರೋನ್ ಟೆಕ್ನಾಲಜಿ ಮತ್ತು ಎ.ಪಿ.ಮೊಲ್ಲರ್ ಸಂಸ್ಥೆಗಳ ಉನ್ನತಾಧಿಕಾರಿಗಳನ್ನು ಭೇಟಿಯಾಗಿ, ಉದ್ಯಮದ ಸಮಸ್ಯೆಗಳು, ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಪಿಎಂ ಮೋದಿ ಮತ್ತು ಸುಜುಕಿ ಮೋಟಾರ್ ಕಾರ್ಪೆರೇಷನ್ನ ಅಧ್ಯಕ್ಷ ತೊಶಿಹಿರೊ ಸುಜುಕಿ ನಡುವಿನ ಮಾತುಕತೆ ವೇಳೆ ಭಾರತದಲ್ಲಿ ತಯಾರಿಸಿದ ವಾಹನಗಳನ್ನು ರಫ್ತು ಮಾಡುವ ಮೂಲಕ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಬಲ ಸ್ಪರ್ಧಿಯನ್ನಾಗಿಸುವ ಮಾರುತಿ ಸುಜುಕಿಯ ಯೋಜನೆಗಳ ಬಗ್ಗೆ ಚರ್ಚೆ ನಡೆದಿದೆ. ವಾಹನ ಸ್ಕ್ರಾ್ಯಪಿಂಗ್ ಮತ್ತು ವಾಹನ ಮರುಬಳಕೆಗೆ ಸಂಬಂಧಿಸಿದ ಜಾಗತಿಕ ಕ್ರಮಗಳನ್ನು ಭಾರತದಲ್ಲಿ ಅಳವಡಿಸುವ ಬಗ್ಗೆಯೂ ಮಾತುಕತೆಯಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ಹಂಚಿಕೊಂಡಿದೆ. ಮಾರುತಿ ಸುಜುಕಿ ಗುಜರಾತ್ನಲ್ಲಿ ಎರಡನೇ ಕಾರು ಉತ್ಪಾದನಾ ಘಟಕ ಸ್ಥಾಪಿಸಲಿದ್ದು, ಇದು ದೇಶದಲ್ಲೇ ಸಂಸ್ಥೆಯ ಐದನೇ ಘಟಕವಾಗಲಿದೆ.
ಮೈಕ್ರಾನ್ ಟೆಕ್ನಾಲಜಿ ಅಧ್ಯಕ್ಷ ಸಂಜಯ್ ಮೆಹ್ರೋತ್ರಾ ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆ ಹೆಚ್ಚಿಸಲು ಮೈಕ್ರಾನ್ನ ಪ್ರಯತ್ನಗಳ ಕುರಿತು ಪಿಎಂ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ಚಿಪ್ ತಯಾರಿಕೆ ಬೃಹತ್ ಕಂಪನಿಯಾಗಿರುವ ಮೈಕ್ರಾನ್ ಅಹ್ಮದಾಬಾದ್ನಿಂದ 40 ಕಿ.ಮೀ. ದೂರದಲ್ಲಿರುವ ಸಾನಂದ್ನಲ್ಲಿ ಅಮೆರಿಕನ್ ಡಾಲರ್ 2.75 ಬಿಲಿಯನ್ ವೆಚ್ಚದಲ್ಲಿ ಸೆಮಿಕಂಡಕ್ಟರ್ ಕಾರ್ಖಾನೆ ನಿರ್ವಿುಸಲಾರಂಭಿಸಿದೆ. ಡಿಪಿ ವರ್ಲ್ಡ್ನ ಗ್ರೂಪ್ ಅಧ್ಯಕ್ಷ, ಸಿಇಒ ಅಹ್ಮದ್ ಬಿನ್ ಸುಲಾಯೆಮ್ ಅವರನ್ನೂ ಪ್ರಧಾನಿ ಭೇಟಿ ಮಾಡಿ, ಸುಸ್ಥಿರ, ಹಸಿರು ಮತ್ತು ಇಂಧನ ಸಾಮರ್ಥ್ಯದ ಬಂದರುಗಳು, ವಿಶ್ವದರ್ಜೆಯ ಸುಸ್ಥಿರ ಲಾಜಿಸ್ಟಿಕ್ ಮೂಲಸೌಕರ್ಯಗಳನ್ನು ನಿರ್ವಿುಸುವ ಕುರಿತು ಮಾತುಕತೆ ನಡೆಸಿದ್ದಾರೆ. ಗುಜರಾತ್ನ ಕಾಂಡ್ಲಾದಲ್ಲಿ ಮೆಗಾ ಕಂಟೇನರ್ ಟರ್ವಿುನಲ್ ಅಭಿವೃದ್ಧಿ ಪಡಿಸಲು, ನಿರ್ವಹಿಸಲು ದೀನದಯಾಳ್ ಬಂದರು ಪ್ರಾಧಿಕಾರದೊಂದಿಗೆ ಡಿಪಿ ವರ್ಲ್ಡ್ ಕಳೆದ ವರ್ಷ ಒಪ್ಪಂದಕ್ಕೆ ಸಹಿ ಹಾಕಿತ್ತು. ದುಬೈ ಮೂಲದ ಈ ಲಾಜಿಸ್ಟಿಕ್ಸ್ ಕಂಪನಿಯು ಪ್ರಸ್ತುತ ಭಾರತದಲ್ಲಿ ಐದು ಕಂಟೇನರ್ ಟರ್ವಿುನಲ್ಗಳನ್ನು ನಿರ್ವಹಿಸುತ್ತಿದೆ.
ಟ್ರೇಡ್ ಶೋ ಉದ್ಘಾಟನೆ: ವೈಬ್ರೆಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ 2024ನ್ನು ಪ್ರಧಾನಿ ಮೋದಿ ಮಂಗಳವಾರ ಉದ್ಘಾಟಿಸಿದರು. ಇಲ್ಲಿನ ಹೆಲಿಪ್ಯಾಡ್ ಗ್ರೌಂಡ್ ಎಕ್ಸಿಬಿಷನ್ ಸೆಂಟರ್ನ ವಿವಿಧ ಸಭಾಂಗಣಗಳಲ್ಲಿ 2 ಲಕ್ಷ ಚ.ಮೀ. ಪ್ರದೇಶದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. 3 ದಿನ ಮೋದಿ ಗುಜರಾತ್ನಲ್ಲಿರಲಿದ್ದಾರೆ.
ಲಕ್ಷ ಮಂದಿ ಭಾಗಿ ನಿರೀಕ್ಷೆ: ಈ ವರ್ಷದ ವೈಬ್ರಂಟ್ ಗುಜರಾತ್ ಜಾಗತಿಕ ಸಮಾವೇಶ ಈವರೆಗಿನ ಅತಿದೊಡ್ಡ ಸಭೆ ಎಂದು ಹೇಳಲಾಗುತ್ತಿದೆ. ಸುಮಾರು 133 ದೇಶಗಳ ಸಿಇಒಗಳು, ವ್ಯಾಪಾರ ಮುಖಂಡರು, ಮಂತ್ರಿ ಮತ್ತು ರಾಜತಾಂತ್ರಿಕರು ಸೇರಿದಂತೆ ಲಕ್ಷದಷ್ಟು ಮಂದಿ 2 ದಿನಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.