ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ-ನಿರ್ಮಾಪಕ ಸದಾನಂದ ಸುವರ್ಣ ನಿಧನ

Sadananda Suvarna
Published on

ಮಂಗಳೂರು: ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 93 ವರ್ಷ ವಯಸ್ಸಾಗಿತ್ತು.

ಮಂಗಳೂರಿನ ಮೂಲ್ಕಿ ಮೂಲದವರಾದ ಅವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಗಿರೀಶ್​ ಕಾಸರವಳ್ಳಿ ನಿರ್ದೇಶನದ ಘಟಶ್ರಾದ್ಧ ಇವರು ನಿರ್ಮಿಸಿದ ಮೊದಲ ಚಿತ್ರವಾಗಿದೆ. ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸಿರುವ ನಿರ್ಮಾಪಕ ಸದಾನಂದ ಸುವರ್ಣ ನಿಧನಕ್ಕೆ ನಟ, ನಟಿಯರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

ಚಲನಚಿತ್ರ ಮಾತ್ರವಲ್ಲದೇ ರಂಗಭೂಮಿಯಲ್ಲೂ ಖ್ಯಾತಿ ಪಡೆದಿದ್ದ ಸುವರ್ಣ ಅವರು, ಧರ್ಮಚಕ್ರ, ಸುಳಿ, ಡೊಂಕುಬಾಲದ ನಾಯಕರು, ಕೋರ್ಟ್​ ಮಾರ್ಷಲ್​, ಉರುಳು ಸೇರಿದಂತೆ ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಇದಲ್ಲದೆ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಗುಡ್ಡದಭೂತ ಧಾರವಾಹಿಯನ್ನು ನಿರ್ಮಿಸಿ ನಿರ್ದೇಶಿಸುವ ಮೂಲಕ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು.

ಸಿಎಂ ಸಂತಾಪ

ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದು:ಖವಾಯಿತು. ಸದಾನಂದ ಸುವರ್ಣರು ನಿರ್ಮಿಸಿದ್ದ ‘‘ಘಟಶ್ರಾದ್ಧ’’ ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘’ಕುಬಿ ಮತ್ತು ಇಯಾಲ’’ ಕತೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ. ನೂರಾರು ಕನ್ನಡ ಮತ್ತು ತುಳು ನಾಟಕಗಳನ್ನು ನಿರ್ದೇಶಿಸಿದ್ದ ಸುವರ್ಣರ ರಂಗಗರಡಿಯಿಂದ ಬಂದಿರುವ ಹಲವಾರು ಪ್ರತಿಭಾವಂತ ನಟ-ನಟಿಯರು ಕಲಾಜಗತ್ತಿನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಸದಾನಂದ ಸುವರ್ಣರನ್ನು ಕಳೆದುಕೊಂಡಿರುವ ಅವರ ಶಿಷ್ಯವರ್ಗ ಮತ್ತು ಅಭಿಮಾನಿ ಬಳಗದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net