ದೋಡಾ ಭಯೊತ್ಪಾದಕ ದಾಳಿ; ಬಿಜೆಪಿಯ ನೀತಿಗಳಿಂದಲೇ ನಮ್ಮ ಯೋಧರು ಹುತಾತ್ಮರಾಗಿದ್ದಾರೆ: ಕಾಂಗ್ರೆಸ್​ ಕಿಡಿ

Rahul Kharge
Published on

ನವದೆಹಲಿ: ಜಮ್ಮು-ಕಾಶ್ಮೀರದ ದೋಡಾದಲ್ಲಿ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದು, ಕಾಂಗ್ರೆಸ್​ ನಾಯಕರು ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ, ನಮ್ಮ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿ ಸರ್ಕಾರದ ತಪ್ಪು ನೀತಿಗಳ ಭಾರವನ್ನು ಹೊತ್ತಿದ್ದಾರೆ. ಇಂದು ನಮ್ಮ ಸೈನಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮತ್ತೊಂದು ಭಯೋತ್ಪಾದಕ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ನಾನು ಅವರಿಗೆ ನನ್ನ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಇಂತಹ ಭಯಾನಕ ಒಂದರ ಹಿಂದೆ ಒಂದರಂತೆ ನಡೆಯುತ್ತಿರುವ ಘಟನೆಗಳು ಅತ್ಯಂತ ದುಃಖಕರ ಮತ್ತು ಆತಂಕಕಾರಿಯಾಗಿದೆ.

ನಿರಂತರ ಭಯೋತ್ಪಾದಕ ದಾಳಿಗಳು ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯನ್ನು ಬಹಿರಂಗಪಡಿಸುತ್ತಿವೆ. ಪುನರಾವರ್ತಿತ ಭದ್ರತಾ ಲೋಪದ ಬಗ್ಗೆ ಕೇಂದ್ರ ಸರ್ಕಾರವು ಸಂಪೂರ್ಣ ಹೊಣೆ ಹೊರಬೇಕಿದೆ. ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಬೇಡಿಕೆಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್​ ಗಾಂಧಿ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಶ್ಮೀರದ ದೋಡಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೇಜರ್ ಶ್ರೇಣಿಯ ಅಧಿಕಾರಿ ಸೇರಿದಂತೆ 4 ವೀರ ಸೇನಾ ಯೋಧರು ಹುತಾತ್ಮರಾಗಿರುವುದು ತೀವ್ರ ದುಃಖ ತಂದಿದೆ. ಭಾರತ ಮಾತೆಯ ಸೇವೆಯಲ್ಲಿ ಪ್ರಾಣ ತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ನಮ್ಮ ಹೃದಯ ಮಿಡಿಯುತ್ತದೆ. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಿದೆ. ಕಾಂಗ್ರೆಸ್‌ ಪಕ್ಷವು ಭದ್ರತಾ ಪಡೆಗಳೊಂದಿಗೆ ಬಲವಾಗಿ ನಿಲ್ಲುತ್ತದೆ.

ಹೇಡಿ ಭಯೋತ್ಪಾದಕರು ನಡೆಸುತ್ತಿರುವ ಈ ಹಿಂಸಾತ್ಮಕ ಕೃತ್ಯಗಳಿಗೆ ಯಾವುದೇ ಬಲವಾದ ಮತ್ತು ನಿಸ್ಸಂದಿಗ್ಧ ಖಂಡನೆಯ ಮಾತುಗಳು ಸಾಕಾಗುವುದಿಲ್ಲ. ಕಳೆದ 36 ದಿನಗಳಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದಕ ದಾಳಿಗಳ ಸರಣಿಯು ನಮ್ಮ ಭದ್ರತಾ ಕಾರ್ಯತಂತ್ರವನ್ನು ಮರು ಪರಿಶೀಲಿಸುವ ಅಗತ್ಯತೆ ಬಗ್ಗೆ ಎಚ್ಚರಿಸುತ್ತಿದೆ. ಭಯೋತ್ಪಾದಕ ದಾಳಿಯ ಬಗ್ಗೆ ಮೋದಿ ಸರ್ಕಾರವು ಎಂದಿನ ವ್ಯವಹಾರ ಎಂಬಂತೆ ವರ್ತಿಸುತ್ತಿದೆ. ಕಾಶ್ಮೀರದಲ್ಲಿ ಏನೂ ಬದಲಾಗಿಲ್ಲ. ಇಂತಹ ಸುಳ್ಳು ನಿರೂಪಣೆ ಮೂಲಕ ದೇಶದ ಭದ್ರತೆಯನ್ನು ಅಪಾಯಕ್ಕೆ ತಳ್ಳಬಾರದು. ಈ ಪ್ರದೇಶವು ದಾಳಿಗಳ ಭಾರವನ್ನು ಹೊತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net