

ನವದೆಹಲಿ: 18ನೇ ಆವೃತ್ತಿಯ ಐಪಿಎಲ್ಗೆ ಶುರುವಾಗುವುದಕ್ಕೆ ಸಾಕಷ್ಟು ಸಮಯ ಉಳಿದಿದ್ದು, ಅದಕ್ಕೂ ಮುನ್ನವೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾದಂತೆ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಕೋಚ್ ಸ್ಥಾನದಿಂದ ರಿಕಿ ಪಾಂಟಿಂಗ್ರನ್ನು ವಜಾ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆಯ ಮುನ್ಸೂಚನೆ ನೀಡಿದೆ.
2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಪಾಂಟಿಂಗ್ ಪ್ರತಿ ಆವೃತ್ತಿಗೆ 3.5 ಕೋಟಿ ರೂ. ವೇತನ ಪಡೆಯುತ್ತಿದ್ದರು. ಆದ5ರೆ, ಪಾಂಟಿಂಗ್ ಅವರ ಕೋಚಿಂಗ್ನಲ್ಲಿ ತಂಡವು 2019 (ಪ್ಲೇಆಫ್), 2020 (ಫೈನಲ್), 2021 (ಪ್ಲೇಆಫ್) ಪ್ರವೇಶಿಸಿತ್ತು. ಆದರೆ, ಕಳೆದ ಆವೃತ್ತಿ ತಂಡವು ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿದ್ದು, ಪಾಂಟಿಂಗ್ ತಲೆದಂಡಕ್ಕೆ ಕಾರಣ ಎಂದು ಹೇಳಲಾಗಿದೆ. ಇತ್ತ ಸೌರವ್ ಗಂಗೂಲಿ ತಾವೇ ಮುಂದಿನ ಕೋಚ್ ಎಂದು ಸುಳಿವು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ಮೆಂಟರ್ ಸೌರವ್ ಗಂಗೂಲಿ, ತಂಡದ ಕಳಪೆ ಪ್ರದರ್ಶನವನ್ನು ಗಮದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ನಾವು ಮುಂದಿನ ವರ್ಷದ ಐಪಿಎಲ್ಗೆ ಯೋಜಿಸಬೇಕಿದೆ. ನಾನು ಡೆಲ್ಲಿ ಕ್ಯಾಪಿಟಲ್ಸ್ಗೆ ಒಮ್ಮೆ ಕಪ್ ಗೆಲ್ಲಿಸಿಕೊಡಬೇಕೆಂದು ಬಯಸುತ್ತೇನೆ. ಮುಂದಿನ ವರ್ಷ ನಡೆಯಲಿರುವ ಮೆಗಾ ಹರಾಜಿಗೆ ನಾವು ಈಗಿನಿಂದಲೇ ತಯಾರಿ ಆರಂಭಿಸಬೇಕಿದೆ.
ತಂಡ ಮುಂದುವರೆಯಬೇಕೆಂದರೆ ನಾವು ಭಾರತೀಯರನ್ನು ಕೋಚ್ ಆಗಿ ನೇಮಿಸಬೇಕಿದೆ. ಈ ನಿಟ್ಟಿನಲ್ಲಿ ನಾವು ತಂಡದ ಮ್ಯಾನೇಜ್ಮೆಂಟ್ನೊಂದಿಗೆ ಮಾತನಾಡಬೇಕಿದೆ. ತಂಡಕ್ಕೆ ಹೊಸ ಆಟಗಾರರನ್ನು ಕರೆತರಬೇಕಾಗಿದ್ದು, ಮುಖ್ಯ ಕೋಚ್ ಆಗಿ ನನ್ನ ಕೆಲಸ ಹೇಗಿರಲಿದೆ ಎಂದು ನೋಡಬೇಕಿದೆ. ಒಟ್ಟಿನಲ್ಲಿ ತಂಡಕ್ಕೆ ಕಪ್ ಗೆಲ್ಲಿಸಿಕೊಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೆಲಸ ಮಾಡಲಿದ್ದೇವೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ರಿಕಿ ಪಾಂಟಿಂಗ್ ಅವರಿಂದ ತೆರವಾಗಿರುವ ಈ ಸ್ಥಾನವನ್ನು ಅಂದರೆ ಮುಖ್ಯ ಕೋಚ್ ಹುದ್ದೆಯನ್ನು ಸ್ವತಃ ಗಂಗೂಲಿ ಅವರೇ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್ಮೆಂಟ್ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ.