

| ಪಂಕಜ ಕೆ.ಎಂ. ಬೆಂಗಳೂರು
ಕರೊನಾ ಮೂರನೇ ಅಲೆ ಸಾಧ್ಯತೆ ದಟ್ಟವಾಗಿದ್ದರೂ ಕರ್ನಾಟಕ ಮಾತ್ರ ಕರೊನಾ ಮಹಾಮಾರಿಯನ್ನು ಎದುರಿಸಲು ಇನ್ನೂ ಸಜ್ಜಾಗದಿರುವ ಸಂಗತಿ ಬಯಲಾಗಿದೆ. ರಾಜ್ಯದಲ್ಲಿ ಸದ್ಯ ಡೆಂಘ, ನ್ಯುಮೋನಿಯಾ ಹಾಗೂ ಬ್ರಾಂಕೈಟಿಸ್ ಪ್ರಕರಣಗಳು ತೀವ್ರವಾಗಿರುವುದರಿಂದ ಬಹುತೇಕ ಆಸ್ಪತ್ರೆಗಳು ಹಾಗೂ ಮಕ್ಕಳ ಚಿಕಿತ್ಸಾ ವಿಭಾಗದ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ. ಹೀಗಾಗಿ ಕರೊನಾ ಮೂರನೇ ಅಲೆ ಎದುರಿಸಲು ಇನ್ನೂ ಸಿದ್ಧತೆ ಆಗಿಲ್ಲದಿರುವುದು ವಿಜಯವಾಣಿ ರಿಯಾಲಿಟಿ ಚೆಕ್ನಲ್ಲಿ ಬೆಳಕಿಗೆ ಬಂದಿದೆ.
ಕೆಲವೆಡೆ ಒಂದೇ ಹಾಸಿಗೆಯಲ್ಲಿ ಎರಡೆರಡು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಇಂಥದೇ ಸಮಸ್ಯೆಗಳಿವೆ. ಈ ನಡುವೆ, ಹೈಕೋರ್ಟ್ ಕೂಡ 3ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಬೇಕಾದ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳಲು ಸರ್ಕಾರಕ್ಕೆ ಆದೇಶಿಸಿದೆ. ಸೆಪ್ಟೆಂಬರ್ನಲ್ಲಿ ಕೋವಿಡ್ 3ನೇ ಅಲೆ ಬರಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ನೆರೆಯ ಕೇರಳದಲ್ಲಿ ಸೋಂಕು ಪ್ರಕರಣಗಳು ಏಕಾಏಕಿ ಏರಿಕೆಯಾಗಿದೆ. ರಾಜ್ಯದಲ್ಲಿ ಎರಡನೇ ಅಲೆ ತೀವ್ರತೆ ತಗ್ಗಿದರೂ ಸೋಂಕು ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಕಡಿಮೆಯಾಗಿಲ್ಲ. ಹೀಗಿರುವಾಗ ಕೋವಿಡ್ 3ನೇ ಅಲೆ ಎದುರಾದರೆ ಬೆಡ್ ಸಿಗದೆ ಚಿಕಿತ್ಸೆ ಹೇಗೆ? ಎಂಬ ಆತಂಕ ಎದುರಾಗಿದೆ.
ಇಬ್ಬರಿಗೆ ಹಾಸಿಗೆ ಹಂಚಿಕೆ: ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕೋವಿಡ್ಗಾಗಿ ಮೀಸಲಿಟ್ಟಿರುವ 10 ಹಾಸಿಗೆಗಳು ಹಾಗೂ ಕೆಲ ಗಂಭೀರ ಪ್ರಕರಣಗಳಿಗೆ ಮೀಸಲಿರುವ ಹಾಸಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಹಾಸಿಗೆಗಳು ಭರ್ತಿಯಾಗಿವೆ. ಇದರಿಂದಾಗಿ ಹಾಸಿಗೆ ಕೊರತೆಯಾಗಿದ್ದು ಒಂದು ಹಾಸಿಗೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಾಣಿವಿಲಾಸ ಆಸ್ಪತ್ರೆಯಲ್ಲೂ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಬೌರಿಂಗ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳಲ್ಲಿ 10 ಹಾಸಿಗೆ ಭರ್ತಿಯಾಗಿದೆ. ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯಲ್ಲಿ 10 ಐಸಿಯು ಸೇರಿದಂತೆ ಮಕ್ಕಳ ವಾರ್ಡ್ನ ಎಲ್ಲ 40 ಹಾಸಿಗೆಗಳೂ ಭರ್ತಿಯಾಗಿವೆ.
ಖಾಸಗಿಯಲ್ಲೂ ಭರ್ತಿ: ಸರ್ಕಾರಿ ಆಸ್ಪತ್ರೆ ಮಾತ್ರವಲ್ಲ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲೂ ಮಕ್ಕಳ ಹಾಸಿಗೆಗಳು ಸಂಪೂರ್ಣ ಭರ್ತಿಯಾಗಿವೆ. ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆಯಿಂದಾಗಿ ಆ ಭಾಗದ ದೊಡ್ಡ ಖಾಸಗಿ ಆಸ್ಪತ್ರೆಯಾಗಿರುವ ನ್ಯೂ ಅಮೃತ್ ಮಕ್ಕಳ ಆಸ್ಪತ್ರೆಯಲ್ಲಿನ ಎಲ್ಲ ನೂರು ಹಾಸಿಗೆಗಳೂ ಭರ್ತಿಯಾಗಿವೆ. ‘ನಿತ್ಯ ಜಿಲ್ಲಾ ಆಸ್ಪತ್ರೆಗಳಿಂದ ರೆಫರ್ ಪ್ರಕರಣಗಳು ಬರುತ್ತಿವೆ. ಆದರೆ ದಾಖಲಿಸಿಕೊಳ್ಳಲು ನಮ್ಮ ಬಳಿ ಹಾಸಿಗೆ ಇಲ್ಲ’ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯ ವೈದ್ಯರು.
ಅವಾಂತರ ಮರುಕಳಿಸುವುದೇ?: ರಾಜ್ಯದಲ್ಲಿ ಸದ್ಯ ಮಕ್ಕಳಲ್ಲಿ ಡೆಂಘ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದೆ. ಹಾಸಿಗೆಯ ಕೊರತೆ ಜತೆಗೆ ಸಿಬ್ಬಂದಿ ಕೊರತೆಯೂ ಇದೆ. ಸಾಮಾನ್ಯ ಸೋಂಕು ಹರಡಿದರೆ ಅಷ್ಟು ಸಮಸ್ಯೆ ಇಲ್ಲ. ಆದರೆ ರೂಪಾಂತರಿ ವೈರಸ್ ಇಲ್ಲವೆ ಡೆಲ್ಟಾ ವೈರಸ್ ವ್ಯಾಪಕವಾದರೆ ಪರಿಸ್ಥಿತಿ ಗಂಭೀರವಾಗಲಿದೆ. ಹಾಗಾಗಿ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಕೇವಲ ಬಾಯಿಮಾತಿನ ಹೇಳಿಕೆ, ಪೇಪರ್ ದಾಖಲೆ ತೋರಿಸುವುದನ್ನು ಬಿಟ್ಟು ವಾಸ್ತವವಾಗಿ ಆಗಬೇಕಾಗಿರುವ ಸಿದ್ಧತೆಗಳ ಬಗ್ಗೆ ಗಮನಹರಿಸಿ ಕ್ರಮ ವಹಿಸಬೇಕು. ಇಲ್ಲವಾದರೆ 2ನೇ ಅಲೆಯಲ್ಲಿ ಆದ ಅವಾಂತರ ಮರುಕಳಿಸಲಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲೂ ಕೊರತೆ: ಬೆಂಗಳೂರಿನಲ್ಲಿ 29 ಲಕ್ಷ ಮಕ್ಕಳಿದ್ದು, ಕನಿಷ್ಠ 2 ಲಕ್ಷ ಮಕ್ಕಳು ಅಗತ್ಯ ರೋಗ ನಿರೋಧಕ ಶಕ್ತಿ ಕೊರತೆ ಅನುಭವಿಸುತ್ತಿದ್ದಾರೆ. ಪ್ರತಿನಿತ್ಯ ವರದಿಯಾಗುವ ಸೋಂಕು ಪ್ರಕರಣಗಳ ಪೈಕಿ ಶೇ.10 ರಿಂದ ಶೇ.14 ಮಕ್ಕಳಿಗೆ ಸೋಂಕು ದೃಢವಾಗುತ್ತಿದೆ. ಸೋಂಕಿತರ ಪೈಕಿ ಶೇ.3ಕ್ಕಿಂತ ಕಡಿಮೆ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಿರುವಾಗ ಬಿಬಿಎಂಪಿ ವತಿಯಿಂದ ಪದ್ಮನಾಭನಗರ ಮತ್ತು ಜಗಜೀವನರಾಮನಗರದಲ್ಲಿ ತಲಾ ಕೇವಲ 30 ಹಾಸಿಗೆ ಸಾಮರ್ಥ್ಯದ ಎರಡು ಮಕ್ಕಳ ಕೋವಿಡ್ ಆಸ್ಪತ್ರೆ ಆರಂಭಿಸಲಾಗಿದೆ. ಹೊಸದಾಗಿ ಗೋವಿಂದರಾಜನಗರದಲ್ಲಿ 50 ಹಾಸಿಗೆ ಸಾಮರ್ಥ್ಯದ ಮಕ್ಕಳ ಆಸ್ಪತ್ರೆ ಸಿದ್ಧತಾ ಕಾರ್ಯ ನಡೆಯುತ್ತಿದೆ. ಒಂದು ವೇಳೆ 3ನೇ ಅಲೆ ಕಾಣಿಸಿಕೊಂಡಲ್ಲಿ ಮಕ್ಕಳ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯತೆ ಕೊರತೆಯಾಗಲಿದೆ.
ಕೆಲ ತಿಂಗಳಿಂದ ಮೆಸ್ಸಿ ಕಾಯಿಲೆ ಮಕ್ಕಳನ್ನು ತುಂಬಾ ಬಾಧಿಸಿತ್ತು. ಇದೀಗ ಡೆಂಘ, ನ್ಯುಮೋನಿಯಾ, ಬ್ರಾಂಕೈಟಿಸ್ ಸೇರಿದಂತೆ ನಾನಾ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳೇ ಅಲ್ಲದೆ ಬಹುತೇಕ ಖಾಸಗಿ ಆಸ್ಪತ್ರೆಗಳ ಹಾಸಿಗೆಗಳೂ ಭರ್ತಿಯಾಗಿವೆ. ಹೀಗಾಗಿ ಸರ್ಕಾರ ಕೂಡಲೇ ಕ್ರಮ ವಹಿಸಬೇಕು. ಹಾಸಿಗೆ ವ್ಯವಸ್ಥೆಯ ಜತೆಗೆ ಸಿಬ್ಬಂದಿ ನೇಮಕದ ಬಗ್ಗೆಯೂ ಕ್ರಮ ಕೈಗೊಳ್ಳಬೇಕು. | ಡಾ.ಮಲ್ಲೇಶ್ ಗೌಡ ಕಾರ್ಯಕಾರಿ ಸದಸ್ಯ, ಭಾರತೀಯ ಮಕ್ಕಳ ವೈದ್ಯಕೀಯ ಸಂಘ ತೀವ್ರ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಆದರೆ ಹಾಸಿಗೆ ಇಲ್ಲ ಎಂದರು. ನೋಡೋಣ ಎಂದು ವಾರ್ಡ್ಗೆ ಹೋದರೆ ಒಂದು ಹಾಸಿಗೆಯಲ್ಲಿ 2-3 ಮಕ್ಕಳನ್ನು ಹಾಕಿದ್ದಾರೆ. ಕೋವಿಡ್ ಭೀತಿ ಬೇರೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದೇವೆ. | ಮಂಗಳಾ ಬೆಂಗಳೂರು ನಿವಾಸಿ
ರಾಜ್ಯದಲ್ಲಿ ಸಂಭಾವ್ಯ ಕೋವಿಡ್ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಿರುವ ಆಮ್ಲಜನಕ ಪ್ರಮಾಣವನ್ನು ಅಂದಾಜಿಸಿ, ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ. ಕೋವಿಡ್ 2ನೇ ಅಲೆಯ ಸಂದರ್ಭದಲ್ಲಿ ರಾಜ್ಯದ ಆಮ್ಲಜನಕ ಬೇಡಿಕೆಯನ್ನು ಪರಿಗಣಿಸಿ, ಮೂರನೇ ಅಲೆ ಎದುರಿಸಲು ಎಷ್ಟು ಆಕ್ಸಿಜನ್ ಅಗತ್ಯವಿದೆ, ಸದ್ಯ ರಾಜ್ಯದ ಘಟಕಗಳಲ್ಲಿ ಎಷ್ಟು ಆಮ್ಲಜನಕ ಉತ್ಪಾದನೆಯಾಗುತ್ತಿದೆ, ಎಷ್ಟು ಕೊರತೆ ಉಂಟಾಗಬಹುದು ಎಂಬುದನ್ನು ಅಂದಾಜು ಮಾಡಿ, ಅಗತ್ಯತೆಗೆ ತಕ್ಕಂತೆ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿತು.
ಪ್ರಕರಣದ ಅಮಿಕಸ್ ಕ್ಯೂರಿ ವಿಕ್ರಂ ಹುಯಿಲಗೋಳ ನೀಡಿರುವ ಮಾಹಿತಿಯಂತೆ, ರಾಜ್ಯದಲ್ಲಿ ಹೊಸದಾಗಿ 245 ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಅದರಲ್ಲಿ 121 ಘಟಕಗಳು ಈಗಾಗಲೇ ಸ್ಥಾಪನೆಯಾಗಿದ್ದು, 96 ಕಾರ್ಯಾರಂಭ ಮಾಡಿವೆ. ಪಿಎಂ-ಕೇರ್ಸ್ ನಿಧಿಯಿಂದ ಸ್ಥಾಪಿಸಲಾಗುತ್ತಿರುವ 50 ಘಟಕಗಳಲ್ಲಿ 29 ಸ್ಥಾಪನೆಯಾಗಿ 17 ಕಾರ್ಯಾರಂಭ ಮಾಡಿವೆ. ಉಳಿದ ಘಟಕಗಳೂ ಶೀಘ್ರದಲ್ಲೇ ಕಾರ್ಯಾರಂಭಿಸುವಂತೆ ಮಾಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ಪೀಠ, ವಿಚಾರಣೆಯನ್ನು ಸೆ.8ಕ್ಕೆ ಮುಂದೂಡಿತು.