

ಹುಣಸೂರು: ತಾಲೂಕಿನ ಹನಗೋಡು ಹೋಬಳಿ ಶೆಟ್ಟಹಳ್ಳಿಯಲ್ಲಿ ಇತ್ತೀಚೆಗೆ ಹಲ್ಲೆಗೊಳಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಿಶಿಷ್ಟ ಜಾತಿಯ ವೆಂಕಟೇಶ ಅವರನ್ನು ಶಾಸಕ ಜಿ.ಡಿ.ಹರೀಶ್‌ಗೌಡ ಭೇಟಿಯಾಗಿ ಸಾಂತ್ವನ ಹೇಳಿದರು.
ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ವೆಂಕಟೇಶ್ ಅವರ ಪತ್ನಿ ಪಲ್ಲವಿಯೊಂದಿಗೆ ಮಾತನಾಡಿ ಧೈರ್ಯ ತುಂಬಿದರು. ಗಾಯಾಳು ವೆಂಕಟೇಶ್ ತಲೆಗೆ ಗಂಭೀರ ಗಾಯವಾಗಿದ್ದು, 8 ಹೊಲಿಗೆ ಹಾಕಲಾಗಿದೆ. ಚಿಕಿತ್ಸೆಗೆ ಸಂಬಂಧಿಸಿದಂತೆ ನಿಗಾ ವಹಿಸುವಂತೆ ವೈದ್ಯರೊಂದಿಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಹರೀಶ್‌ಗೌಡ, ದನ ಮೇಯಿಸುವ ವಿಚಾರಕ್ಕೆ ಇಂತಹ ಘಟನೆ ನಡೆದಿರುವುದು ವಿಷಾದನೀಯ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದರು. ಡಿವೈಎಸ್ಪಿ ಗೋಪಾಲಕೃಷ್ಣ ಗೆ ಕರೆ ಮಾಡಿ ಪ್ರಕರಣ ನಡೆದು 15 ದಿನ ಕಳೆದರೂ ಆರೋಪಿಗಳ ಬಂಧಿಸದಿರುವುದಕ್ಕೆ ಪ್ರಶ್ನಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಹದೇವಸ್ವಾಮಿ, ಡಾ.ಸತೀಶ್, ಡಾ.ವೆಂಕಟರಾಮ್, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಲಿಂಗಯ್ಯ, ದಲಿತ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು, ಸ್ವಾಮಿ, ಸಮತಾ, ಸೈನಿಕ ದಳದ ಡಿ. ಶಿವಮಾದು, ಬಸವರಾಜು, ದೇವರಾಜು ಇತರರು ಇದ್ದರು.