

VC Janardhan Rao : ಆಸ್ತಿ ವಿಚಾರವಾಗಿ ನಡೆದ ಜಗಳದಲ್ಲಿ ವೆಲ್ಜನ್ ಗ್ರೂಪ್ ಚೇರ್ಮನ್ ಜನಾರ್ಧನ್ ರಾವ್ (86), ತಮ್ಮ ಮೊಮ್ಮಗನಿಂದಲೇ ಭೀಕರವಾಗಿ ಹತ್ಯೆಯಾಗಿರುವ ಸುದ್ದಿ ತೆಲಂಗಾಣದಲ್ಲಿ ಭಾರಿ ಚರ್ಚೆಗೀಡಾಗಿದೆ. ಬಾಲ್ಯದಿಂದಲೂ ಇದ್ದ ದ್ವೇಷ ಹೆಮ್ಮರವಾಗಿ ಬೆಳೆದು ಇಂದು ತಾತನನ್ನೇ ಬಲಿ ಪಡೆದುಕೊಂಡಿದೆ.
ಕಳೆದ ಗುರುವಾರ (ಫೆ. 06) ಆರೋಪಿ ಕೀರ್ತಿ ತೇಜ್ (29) ತನ್ನ ತಾತ ಜನಾರ್ಧನ್ ರಾವ್ಗೆ ಬರೋಬ್ಬರಿ 73 ಬಾರಿ ಚಾಕುವಿನಿಂದ ಇರಿದಿದ್ದ. ಹೈದರಾಬಾದ್‌ನ ಪಂಜಗುಟ್ಟದಲ್ಲಿ ಈ ಘಟನೆ ನಡೆದಿತ್ತು. ತೀವ್ರ ರಕ್ತಸ್ರಾವವಾಗಿ ಜನಾರ್ಧನ್ ರಾವ್ ಅವರು ಸ್ಥಳದಲ್ಲೇ ಪ್ರಾಣ ಬಿಟ್ಟರು.
ಜನಾರ್ಧನ ರಾವ್ ಅವರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಎರಡನೇ ಮಗಳ ಹೆಸರು ಸರೋಜಾ. ಅವರ ಪತಿ ಬೇರೆ ಪ್ರದೇಶದಲ್ಲಿ ವಾಸಿಸುತ್ತಿದ್ದರೆ. ಸರೋಜಾ ಮಾತ್ರ ತಮ್ಮ ತಂದೆಯೊಂದಿಗೆ ಹೈದರಾಬಾದ್‌ನ ಸೋಮಾಜಿಗುಡದಲ್ಲಿ ವಾಸಿಸುತ್ತಿದ್ದರು. ಸರೋಜಾ ಮಗ ಕೀರ್ತಿ ತೇಜ್ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ಪಡೆದು ಏಳು ವರ್ಷಗಳ ಹಿಂದೆ ಹೈದರಾಬಾದ್‌ಗೆ ಹಿಂದಿರುಗಿದರು.
ತನ್ನ ಅಜ್ಜನ ಆಸ್ತಿಯಲ್ಲಿ ತನಗೆ ನ್ಯಾಯಯುತವಾದ ಪಾಲು ಸಿಗುತ್ತಿಲ್ಲ ಎಂದು ಕೀರ್ತಿ ತೇಜ್ ಯಾವಾಗಲೂ ವಾದಿಸುತ್ತಿದ್ದ. ಅಲ್ಲದೆ, ಬಾಲ್ಯದಿಂದಲೂ ನನ್ನನ್ನು ಎಲ್ಲರಂತೆ ಪ್ರೀತಿಯಿಂದ ಬೆಳೆಸಲಿಲ್ಲ ಅಂತ ತಾತನ ಮೇಲೆ ದ್ವೇಷವಿತ್ತು. ತನ್ನ ಅಜ್ಜನೊಂದಿಗೆ ಮಾತ್ರವಲ್ಲದೆ ತನ್ನ ತಾಯಿಯೊಂದಿಗೂ ಕೀರ್ತಿ ತೇಜ್ ಜಗಳವಾಡುತ್ತಿದ್ದ. ಕೆಲವು ದಿನಗಳ ಹಿಂದೆ ಜನಾರ್ದನ ರಾವ್ ಅವರು ಸರೋಜಾಳ ಸಹೋದರಿಯ ಮಗನನ್ನು ತನ್ನ ಒಡೆತನದ ಕಂಪನಿಯ ನಿರ್ದೇಶಕರ ಮಂಡಳಿಗೆ ನೇಮಿಸಿದನು. ಇದು ಕೀರ್ತಿ ತೇಜ್ನನ್ನು ಇನ್ನಷ್ಟು ಕೆರಳಿಸಿತು.
ಕಳೆದ ಗುರುವಾರ ರಾತ್ರಿ ಜನಾರ್ಧನ್ ರಾವ್ ಅವರನ್ನು ಕೊಲ್ಲಲು ಅವರ ಮನೆಗೆ ಹೋದ ಕೀರ್ತಿ ತೇಜ್, ಚಾಕುವಿನಿಂದ ಹಲ್ಲೆ ನಡೆಸಿದನು. ಸುಮಾರು 60 ರಿಂದ 70 ಬಾರಿ ಮನಬಂದಂತೆ ತಾತನಿಗೆ ಇರಿದಿದ್ದಾನೆ. ಆ ಸಮಯದಲ್ಲಿ ಜನಾರ್ಧನ್ ರಾವ್ ಸೋಫಾದ ಮೇಲೆ ಕುಳಿತಿದ್ದರು. ಅವರು ಕೂಗಾಡಲು ಪ್ರಾರಂಭಿಸಿದಾಗ, ಸರೋಜಾ ಮತ್ತೊಂದು ಕೋಣೆಯಿಂದ ಬಂದು ಮಗನನ್ನು ತಡೆಯಲು ಪ್ರಯತ್ನಿಸಿದರು.
ಈ ವೇಳೆ ಕೀರ್ತಿ ತೇಜ್ ತನ್ನ ತಾಯಿಗೂ ಚಾಕುವಿನಿಂದ ಆರು ಬಾರಿ ಇರಿದಿದ್ದಾನೆ. ಭದ್ರತಾ ಸಿಬ್ಬಂದಿ ಮನೆಗೆ ಪ್ರವೇಶಿಸಿದಾಗ, ಅವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿ, ಅಲ್ಲಿಂದ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದರು. ಈ ವೇಳೆ ಜನಾರ್ಧನ್ ರಾವ್ ಮೃತಪಟ್ಟಿದ್ದರು. ಬಳಿಕ ಜನಾರ್ಧನ್ ರಾವ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಹುಟ್ಟೂರಾದ ಏಲ್ಲೂರಿನಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಸರೋಜಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಾರಿಯಾಗಿದ್ದ ಕೀರ್ತಿ ತೇಜ್ನನ್ನು ಸೋಮಾಜಿಗುಡದಲ್ಲಿ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)