

ಬೆಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಸಿಎಂ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿಯವರು ಇಂದು (ಜೂ.30) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ವರದಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಡರಾತ್ರಿ ನಿಧನ ಹೊಂದಿದ್ದಾರೆ.
"ಹಿರಿಯ ಕಾಂಗ್ರೆಸ್ ಧುರೀಣ, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸಾ ಮೊಯ್ಲಿ ಅವರು ಅಕಾಲಿಕವಾಗಿ ವಿಧಿವಶರಾದ ಸುದ್ದಿ ಅತೀವ ದುಃಖವನ್ನು ಉಂಟುಮಾಡಿದೆ. ಸಮಾಜ ಸೇವಕಿ, ಭರತನಾಟ್ಯ ಕಲಾವಿದೆಯಾಗಿದ್ದ ಆಕೆಯ ಅಗಲಿಕೆ, ಹೆತ್ತವರಿಗೆ, ಕುಟುಂಬ ಸದಸ್ಯರಿಗೆ ಅದೆಷ್ಟು ನೋವನ್ನು ತಂದಿದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ದೇವರು ಅಗಲಿದ ಚೇತನಕ್ಕೆ ಸದ್ಗತಿ ನೀಡಲಿ, ಕುಟುಂಬ ಸದಸ್ಯರಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ" ಎಂದು ಮಾಜಿ ಸಿಎಂ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.