ಅಂದು ಈ ವ್ಯಕ್ತಿ ಬಗ್ಗೆ ರೋಹಿತ್​, ದ್ರಾವಿಡ್​​ ಆಡಿದ ಮಾತು ಇಂದು ನಿಜವಾಯ್ತು! ಟೀಕಾಕಾರಿಗೆ ಭಾರೀ ಮುಖಭಂಗ

Untitled design - 2024-06-30T173031.861
Published on

ನವದೆಹಲಿ: ನಿನ್ನೆ (ಜೂ.29) ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿ, ರೋಮಾಂಚನಕಾರಿ ಆಟಕ್ಕೆ ಸಾಕ್ಷಿಯಾಯಿತು. 7 ರನ್​ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಬೀಗಿದ ಟೀಮ್ ಇಂಡಿಯಾ, 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. ಗೆಲುವಿನ ಸಂಭ್ರಮದಲ್ಲಿದ್ದ ತಂಡವನ್ನು ನೋಡಿ ಭಾವುಕರಾದ ರೋಹಿತ್, ತಮ್ಮ ಸಹ ಆಟಗಾರರನ್ನು ತಬ್ಬಿ, ಪರಸ್ಪರ ಖುಷಿ ಹಂಚಿಕೊಂಡರು.

ಇನ್ನು ವಿಶ್ವಕಪ್ ಟ್ರೋಫಿ ಗೆಲ್ಲುತ್ತಿದ್ದಂತೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ವಿರಾಟ್​ ಕೊಹ್ಲಿ ಅವರ ಹೃದಯಸ್ಪರ್ಶಿ ಮಾತುಗಳನ್ನು ಕಂಡು ಅಭಿಮಾನಿಗಳು ಕಣ್ಣೀರಿಟ್ಟರು. ಕೊಹ್ಲಿ ಬೆನ್ನಲ್ಲೇ ರೋಹಿತ್ ಕೂಡ ನಿವೃತ್ತಿ ಘೋಷಿಸಿದರು. ಈ ಹಿಂದೆಯೇ ಭಾರತದ ಹೆಡ್ ಕೋಚ್ ಆಗಿ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದ ರಾಹುಲ್ ದ್ರಾವಿಡ್​, ಈ ಟೂರ್ನಿ ಮುಗಿಯುತ್ತಿದ್ದಂತೆ ತಮ್ಮ ಕೋಚ್ ಹುದ್ದೆಯಿಂದ ಹೊರನಡೆಯಲಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿ ತಿಳಿದಿತ್ತು. ಅದರಂತೆಯೇ ಪಂದ್ಯ ಮುಗಿದ ಬಳಿಕ ದ್ರಾವಿಡ್​ ವಿದಾಯ ಹೇಳಿದರು.

ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಟ್ರೋಫಿ ಗೆದ್ದ ಭಾರತ, ಈ ಗೆಲುವನ್ನು ರಾಹುಲ್ ದ್ರಾವಿಡ್​ ಅವರಿಗೆ ಅರ್ಪಿಸಿತು. ಇನ್ನು ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಸತತ ಕಳಪೆ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ, ಫೈನಲ್​ ಮ್ಯಾಚ್​ನಲ್ಲಿ ಸ್ಫೋಟಕ ಬ್ಯಾಟಿಂಗ್​ ಮಾಡಿ, ತಂಡಕ್ಕೆ ಅದ್ಭುತ ಕೊಡುಗೆ​ ನೀಡಿದರು. ಈ ಹಿಂದೆ ವಿರಾಟ್​ ಕಳಪೆ ಫಾರ್ಮ್​ಗೆ ವ್ಯಾಪಕವಾಗಿ ಕಿಡಿಕಾರಿದ್ದ ನೆಟ್ಟಿಗರು, ಎಲ್ಲಿಹೋಯಿತು 'ರನ್​ ಮಷಿನ್'​

ಅಬ್ಬರ? ಆರಂಭಿಕ ಬ್ಯಾಟ್ಸ್​ಮನ್ ಆಗಿ ವಿರಾಟ್​ರನ್ನು ಕಳಿಸಬೇಡಿ ಎಂದೆಲ್ಲಾ ಟೀಕಿಸಿದ್ದರು.

ಈ ಟೀಕೆಗಳನ್ನು ಗಮನಿಸಿದ್ದ ಕ್ಯಾಪ್ಟನ್ ರೋಹಿತ್ ಮತ್ತು ಕೋಚ್ ರಾಹುಲ್ ದ್ರಾವಿಡ್​, ಕೊಹ್ಲಿ ಪರ ನಿಂತು ಟೀಕಾಕಾರಿಗೆ ಉತ್ತರಿಸಿದ್ದರು. ಯಾವ ವಿಷಯಕ್ಕೆ ಇಷ್ಟೊಂದು ಟೀಕೆ ವ್ಯಕ್ತವಾಗುತ್ತಿದೆಯೋ, ಅದು ಫೈನಲ್ ಪಂದ್ಯದಲ್ಲಿ ಬದಲಾಗಲಿದೆ. ವಿರಾಟ್​ರಿಂದ ನೀವು ಬೇರೇನೋ ನೋಡುತ್ತೀರಿ ಎಂದು ಶರ್ಮ ಹೇಳಿದ್ದರು. ಅವರ ಬೆನ್ನಲ್ಲೇ ಮಾತನಾಡಿದ ದ್ರಾವಿಡ್​, ಕೊಹ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಆದರೆ, ಫೈನಲ್​ನಲ್ಲಿ ದೊಡ್ಡದೇನೋ ಒಂದು ನಡೆಯಲಿದೆ. ಅದನ್ನು ನೀವೆಲ್ಲಾ ನೋಡುತ್ತೀರಿ. ವಿರಾಟ್​ ಅದಕ್ಕೆ ಸಾಕ್ಷಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅಂದು ರಾಹುಲ್, ರೋಹಿತ್​ ನುಡಿದ ಭವಿಷ್ಯ ಇಂದು ನಿಜವಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net