ವೈಭವದ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆ

TKE KENDARCANE
ಹಿರೇಕಾತೂರು ಗ್ರಾಮದಲ್ಲಿ ಏರ್ಪಡಿಸಿದ್ದ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಕೆಂಡ ಹಾಯ್ದರು.
Published on

ತರೀಕೆರೆ: ತಾಲೂಕಿನ ಹಿರೇಕಾತೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆ ಮಂಗಳವಾರ ನೆರವೇರಿತು. ಮಾ.30ರಂದು ನಡೆಯಲಿರುವ ಶ್ರೀ ಏಕನಾಥ ಯಲ್ಲಮ್ಮ ದೇವಿ ರಥೋತ್ಸವದ ನಿಮಿತ್ತ ಏರ್ಪಡಿಸಿದ್ದ ಗ್ರಾಮದ ಶ್ರೀ ವೀರಭದ್ರಸ್ವಾಮಿ ಕೆಂಡಾರ್ಚನೆ ಪೂಜಾ ವಿಧಿವಿಧಾನಗಳೊಂದಿಗೆ ಬೆಳಗ್ಗೆ 7ರಿಂದ ಆರಂಭವಾಯಿತು. ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಿ ವಿವಿಧ ಹೂವುಗಳಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಮುತ್ತೈದೆಯರು ತೆರೆದ ಬಾವಿಯಿಂದ ಗಂಗೆ ಹೊತ್ತು ಬಂದ ಬಳಿಕ ಬೇಲೇನಹಳ್ಳಿ ಗ್ರಾಮದ ಶ್ರೀ ಬೂದಿ ಬಸವೇಶ್ವರಸ್ವಾಮಿ, ಹಿರೇಕಾತೂರು ಗ್ರಾಮದ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಏಕನಾಥ ಯಲ್ಲಮ್ಮ ದೇವಿ ಅಪ್ಪಣೆ ಮೇರೆಗೆ ಕೆಂಡಾರ್ಚನೆಗೆ ಚಾಲನೆ ನೀಡಲಾಯಿತು.
ಜೋಡಿ ಕೋಡಿಹಳ್ಳಿ, ಹೊಸೂರು, ಹುರುಳಿಹಳ್ಳಿ, ತಿಮ್ಮಾಪುರ, ಬೇಲೇನಹಳ್ಳಿ, ಕಟ್ಟೇಹೊಳೆ, ಪಿರಮೇನಹಳ್ಳಿ ಮತ್ತಿತರ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು. ಗ್ರಾಮದಲ್ಲಿ ಕೆಂಡಾರ್ಚನೆ ಹಿನ್ನೆಲೆಯಲ್ಲಿ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಎಪಿಎಂಸಿ ಅಧ್ಯಕ್ಷ ಬೇಲೇನಹಳ್ಳಿ ಸೋಮಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎನ್.ಚಿದಾನಂದ್, ಮಾಜಿ ಉಪಾಧ್ಯಕ್ಷ ಬಿ.ಸುರೇಶ್, ಸದಸ್ಯ ಎಚ್.ಆರ್.ಉಮೇಶ್, ಗ್ರಾಮಸ್ಥರಾದ ಮಲ್ಲಪ್ಪ, ರಾಜು, ದೀಪಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net