

ಬಾಗಲಕೋಟೆ: ಲೋಕಸಭಾ ಚುನಾವಣೆ 2024ರ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಾಗಲಕೋಟೆ ಕ್ಷೇತಕ್ಕೆ 'ಕೈ' ಅಭ್ಯರ್ಥಿಯಾಗಿ ಯಾರು ಹೊರಹೊಮ್ಮಲ್ಲಿದ್ದಾರೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿತ್ತು. ಟಿಕೆಟ್ ಸ್ಪರ್ಧೆಯಲ್ಲಿದ್ದ ಶಾಸಕ ವಿಜಯಾನಂದ ಪತ್ನಿ ವೀಣಾ ಕಾಶಪ್ಪನವರ ಮತ್ತು ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮಧ್ಯೆ ಭಾರೀ ಹಣಾಹಣಿ ಇತ್ತು. ಆದ್ರೆ, ನಿನ್ನೆ ಕಾಂಗ್ರೆಸ್ ತನ್ನ ಮೂರನೇ ಪಟ್ಟಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ಸಂಯುಕ್ತಾಗೆ ಟಿಕೆಟ್ ಅಂತಿಮವಾಯಿತು. ಸದ್ಯ ಈ ವಿಚಾರ ವೀಣಾ ಕಾಶಪ್ಪನವರ ಬೆಂಬಲಿಗರಲ್ಲಿ ಭಾರೀ ಅಸಮಾಧಾನ ತಂದಿದೆ.
ಕಳೆದ ಕೆಲವು ದಿನಗಳಿಂದಲೂ ಲೋಕಸಭಾ ಚುನಾವಣಾ 2024ರ ಟಿಕೆಟ್ಗಾಗಿ ವೀಣಾ ಮತ್ತು ಸಂಯುಕ್ತಾ ಪಾಟೀಲ ಮಧ್ಯೆ ಯಾರಿಗೆ ಟಿಕೆಟ್ ಅಂತಿಮವಾಗಲಿದೆ ಎಂಬ ವಿಷಯ ಭಾರೀ ಕುತೂಹಲ ಕೆರಳಿಸಿತ್ತು. ಆದ್ರೆ, ವೀಣಾ ಟಿಕೆಟ್ನಿಂದ ವಂಚಿತರಾಗಿದ್ದು, ಅವರ ಬೆಂಬಲಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಇದರಿಂದ ಮನನೊಂದ ಬೆಂಬಲಿಗರು, ಸಂಯುಕ್ತಾ ವಿರುದ್ಧ ಪ್ರತಿಭಟಿಸಿದ್ದು, ಇದು ಅನ್ಯಾಯ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುಂತೆ ವೀಣಾ ಕಾಶಪ್ಪನವರ ಬೆಂಬಲಿಗರು ಒತ್ತಾಯಿಸಿದ್ದಾರೆ.
ಬಾಗಲಕೋಟೆಗೆ ಹೊರಗಿನ ಜಿಲ್ಲೆಯ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾಗೆ ಕೈ ಟಿಕೆಟ್ ಘೋಷಣೆಯಾಗಿದೆ. ಬಾಗಲಕೋಟೆಯಲ್ಲಿ ವೀಣಾ ಕಾಶಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆದಿದ್ದು, ತನಗೆ ಉಂಟಾದ ನೋವಿನಿಂದ ಬೆಂಬಲಿಗರು ಸೇರಿದ್ದ ಸಭೆಯಲ್ಲಿ ಕಣ್ಣೀರಾಕಿದ್ದಾರೆ.
ಭಾಷಣದ ವೇಳೆಯೂ ಕಣ್ಣೀರಿಟ್ಟ ವೀಣಾ, ನಮ್ಮ ಜಿಲ್ಲೆಯ ಜನರು ಅನಾಥರಾಗ್ತಾರೆ. ಜಿಲ್ಲೆಯ ಜನರ ಸೇವೆ ಮಾಡೋದಕ್ಕೆ ಕೊನೆ ಅವಕಾಶ ಮಾಡಿಕೊಡಿ. ಇಲ್ಲದಿದ್ರೆ ಜನರ ಅಭಿಪ್ರಾಯದ ಮೇರೆಗೆ ನಿರ್ಧಾರ ಕೈಗೊಳ್ತಿನಿ ಎಂದಿದ್ದಾರೆ.