

ಶ್ರೀ ಶಂಕರಾಚಾರ್ಯರೂ ತಾವು ಬೋಧಿಸಿದ ಜ್ಞಾನಮಾರ್ಗಕ್ಕೆ ಎಲ್ಲರೂ ಏಕಕಾಲಕ್ಕೆ ಅಧಿಕಾರಿಗಳಲ್ಲವೆಂದು ಅನೇಕ ಕಡೆಗಳಲ್ಲಿ ಬರೆದಿರುವುದಲ್ಲದೆ, ಸಾಧಕನ ಯೋಗ್ಯತೆಗನುಸಾರವಾದ ಅನೇಕ ಅನುಷ್ಠಾನ ಪ್ರಕಾರಗಳನ್ನು ವಿವರಿಸಿ, ಯೋಗವೈವಿಧ್ಯವನ್ನು ಎತ್ತಿ ಹಿಡಿದಿರುತ್ತಾರೆ. ಈ ಸಾಂಪ್ರದಾಯಿಕ ಯತಿಗಳು ಇಂದಿಗೂ ಇದನ್ನೇ ಸಾರಿ ಹೇಳುತ್ತಿರುತ್ತಾರೆ. ಇವರ ಆಚರಣೆಯೇ ಸಾಕ್ಷಿ ಇದಕ್ಕೆ.
ಮ್ಯಾಕ್ಬೆತ್ ದಂಪತಿ ಒಳಸಂಚು ಮಾಡಿ ತಮ್ಮ ಅತಿಥಿಯಾಗಿದ್ದ ದೊರೆ ಡಂಕನ್ ಎಂಬುವವನನ್ನು ಕೊಲೆ ಮಾಡಿದ ನಂತರ ಲೇಡಿ ಮ್ಯಾಕ್ಬೆತ್ತಳಿಗೆ ಹುಚ್ಚುಹಿಡಿಯುತ್ತದೆ. ಇದನ್ನು ಗುಣಪಡಿಸಲು ನೇಮಿತನಾದ ವೈದ್ಯನು, ಅವಳನ್ನನುಸರಿಸುತ್ತ, ಅವಳ ಬಾಯಿಂದ ಹೊರಬಿದ್ದ ಶಬ್ದಗಳಲ್ಲಿ ಅವಳು ರಾಜನ ಕೊಲೆಯಲ್ಲಿ ವಹಿಸಿದ್ದ ಪಾತ್ರವನ್ನೂ, ಅದರಿಂದಾದ ಅವಳ ನೈತಿಕ, ಧಾರ್ವಿುಕ ಅಧಃಪಾತ ಪ್ರಮಾಣವನ್ನೂ ಕಂಡು ಬೆದರುತ್ತಾನೆ; ಕಣ್ಣು ತೆರೆದಿದ್ದರೂಒಳಗಣ್ಣು ಮುಚ್ಚಿದ ಅವಳು ಕೈಯಲ್ಲಿ ಬೆಳಕಿಗಾಗಿ ಮೇಣದ ಬತ್ತಿಯನ್ನು ಹಗಲಲ್ಲೂ ಹಿಡಿದು ನಡೆಯುವುದನ್ನು ಕಂಡು; “This disease is beyond my practice” ‘ ಎಂದುಕೊಳ್ಳುತ್ತಾನೆ.
(ಈ ರೋಗವು ನನ್ನ ವೃತ್ತಿಗೆ ಮೀರಿದ್ದು.)
“Unnatural deeds do breed unnatural troubles” ಎನ್ನುತ್ತಾನೆ.
(‘‘ಸ್ವಭಾವವಿರುದ್ಧ ಕೃತ್ಯಗಳು ಸ್ವಭಾವ ವಿರೋಧಕಾರಕಗಳಾದ ಕಷ್ಟಗಳನ್ನೇ ನಿರ್ವಿುಸುತ್ತವೆ.’’)
ಅವಳ ರೋಗವೃದ್ಧಿಯನ್ನು ದಿನೇದಿನೆ ಕಂಡು ಚಿಂತಿಸಿದ ಮ್ಯಾಕ್ಬೆತ್ತನು (ಆ ವೇಳೆಗೆ ಅವನೇ ಅಲ್ಲಿ ದೊರೆ.) ವೈದ್ಯನನ್ನು ಕರೆಸಿ ಕೇಳುತ್ತಾನೆ:
“How goes your patient, doctor?”
(‘‘ವೈದ್ಯರೇ, ನಿಮ್ಮ ರೋಗಿ ಹೇಗಿದ್ದಾಳೆ?’’)
ವೈದ್ಯನು ‘‘ಅಂಥದೇನೂ ಕಾಯಿಲೆ ಇಲ್ಲ; ಆದರೆ ಒಂದರ ಮೇಲೊಂದು ಒತ್ತಿ ಬರುತ್ತಿರುವ ಕೆಲವು ಭಯಾನಕ ನೆನಪುಗಳಿಂದ ಅವಳು ಕ್ಷುಬ್ಧಳಾಗಿ ಅಶಾಂತಮನಸ್ಕಳಾಗಿದ್ದಾಳೆ’’ ಎನ್ನುತ್ತಾನೆ. (ಇದೇ ಅಲ್ಲವೆ ಇಂದಿನ ಪಾಶ್ಚಾತ್ಯರನೇಕರ ಪಾಡು?) ತನ್ನ ದಾರಿಯನ್ನು ತಾನೇ ಕಾಣಬೇಕು.