

ಪರಮಾತ್ಮನ ಶ್ವಾಸದಿಂದ ಹೊರಟ ವೇದಗಳ ರಾಶಿಯನ್ನು ವಿಭಾಗಿಸಿ ಮನುಕುಲದ ಉದ್ಧಾರಕ್ಕಾಗಿ ಸಮರ್ಥ ಸದ್ಗುರುವಿನ ಅವಶ್ಯಕತೆಯನ್ನು ಕಂಡ ಆ ಪರಮಾತ್ಮನೇ ‘ವೇದವ್ಯಾಸ’ರೆಂಬ ಹೆಸರಿನಿಂದ ಅವತರಿಸಿದನೇನೋ ಎಂಬಂತಿದೆ. ಪರಾಶರ- ಸತ್ಯವತಿಯರ ಮಗ ವ್ಯಾಸರು. ನದಿಯಲ್ಲಿ ‘ನಾವು’(ಹಡಗು) ನಡೆಸುತ್ತಿದ್ದ ಸತ್ಯವತಿಯು ಕನ್ಯೆಯಾಗಿದ್ದಳು. ಋಷಿಗಳಾದ ಪರಾಶರರು ನದಿದಾಟಲು ನಾವಿನಲ್ಲಿ ಕುಳಿತರು. ಸತ್ಯವತಿಯ ಪರಿಚಯ ವಾಯ್ತು. ಮೋಹಗೊಂಡು ವಿವಾಹದ ಪ್ರಸ್ತಾಪನೆ ಮಾಡಿದಾಗ, ಸತ್ಯವತಿಯು ‘ಸ್ವಾಮಿ! ನೀವು ದೊಡ್ಡವರು, ನಾನು ಬೆಸ್ತರ ಜಾತಿಯವಳು, ನನ್ನನ್ನು ಮದುವೆಯಾಗುತ್ತೀರಾ?’ ಎಂದಾಗ ‘ನೀನು ಒಪ್ಪಿದರೆ ಮಾತ್ರ’ ಎಂದರಂತೆ. ಸತ್ಯವತಿ ಒಪ್ಪಿಕೊಂಡಳು, ಋಷಿಗಳ ತಪೋಶಕ್ತಿಯಿಂದ ಆ ಮತ್ಸ್ಯ ಕನ್ಯೆ ಯೋಜನಗಂಧಿಯಾದಳು.
ಅಂದರೆ ಆಕೆಯ ಶರೀರವು ದುರ್ವಾಸನೆಯ ಬದಲು ಸುವಾಸನೆ ಬೀರತೊಡಗಿತು. ಗಂಧರ್ವ ವಿವಾಹ ವಾದರು. ಅವರಿಗೆ ಮಗ ಜನಿಸಿದ, ಅವನೇ ವೇದವ್ಯಾಸ. ದ್ವೀಪದಲ್ಲಿ ಜನಿಸಿದ್ದರಿಂದ ‘ದ್ವೈಪಾಯನ’ ಎಂಬ ಹೆಸರೂ ಅನ್ವರ್ಥಕವಿದೆ. ಮುಂದೆ ಪರಾಶರರು ದಡಕ್ಕೆ ಬಂದು ಇಳಿದು ಹೊರಟರು, ಆಗ ಸತ್ಯವತಿಯು ‘ಇದೇನು, ನನ್ನನ್ನು ಲಗ್ನವಾಗಿ ಮಗುವಿಗೆ ಜನ್ಮಕೊಟ್ಟು ಹೀಗೆ ಹೊರಟು ಹೋಗುವುದೆ?’ ಎಂದಳು. ಆಗ ಪರಾಶರರು, ‘ಅಂಜದಿರು ಈ ಮಗ ಸಾಮಾನ್ಯನಲ್ಲ! ಲೋಕಕ್ಕೆ ಜ್ಞಾನವನ್ನು ನೀಡಲು ಬಂದವನು. ಪರಮಾತ್ಮನ ಮುಖದಿಂದ ಹೊರಟ ವೇದಗಳ ಜ್ಞಾನ ಸಂಪದವನ್ನು ಹರಡಲು ಬಂದವನು. ಇವನು ‘ವೇದವ್ಯಾಸ’ ನೆಂಬ ನಾಮದಿಂದ ಜಗತ್ಪ್ರಸಿದ್ಧಿಗೆ ಬರುತ್ತಾನೆ’ ಎಂದರು. ‘ಹೌದು ಸ್ವಾಮಿ! ನನ್ನ ಗತಿ?’ ಎಂದಳು ಸತ್ಯವತಿ. ‘ನೀನೂ ಕನ್ಯೆಯಾಗಿಯೇ ಉಳಿದಿರುತ್ತಿ. ನಿನ್ನನ್ನು ಮಹಾರಾಜನೊಬ್ಬ ಮದುವೆಯಾಗುತ್ತಾನೆ’ ಎಂದರು. ಅವನೇ ಶಂತುನು. ಮಹಾಭಾರತದ ಕೇಂದ್ರಬಿಂದು. ವೇದವ್ಯಾಸರು ಜನ್ಮಿಸಿದ ದಿನವೇ ಹುಣ್ಣಿಮೆ ಇತ್ತು. ಆ ಹುಣ್ಣಿಮೆಗೆ ‘ವ್ಯಾಸ ಪೂರ್ಣಿಮಾ’, ‘ಗುರು ಪೂರ್ಣಿಮಾ’ ಎನ್ನುತ್ತಾರೆ. ಹುಣ್ಣಿಮೆಯ ಚಂದ್ರನಂತೆ ವೇದವ್ಯಾಸರು ವೇದಗಳೆಂಬ ಕಮಲ ಅರಳಿಸಿ, ಜ್ಞಾನವೆಂಬ ಪರಿಮಳವನ್ನು ಜಗತ್ತಿಗೆ ಹಂಚಿದರು.