ಯಮನಿಂದ ಜಿಜ್ಞಾಸುಗಳ ಪ್ರಶಂಸೆ

Sudina 3 Veda Darshana 1
Published on
ಕೇನೋಪನಿಷತ್ತು ಮತ್ತು ಶ್ವೇತಾಶ್ವತರಗಳು ವೇದಾಂತದ ಮೂಲಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಅವತರಿಸಿವೆ: ‘‘ಮನಸ್ಸು ಯಾವ ದೇವನಿಂದ ಪ್ರೇರಿತವಾಗಿ, ಇಷ್ಟ ವಸ್ತುಗಳಲ್ಲಿ ಆಸಕ್ತವಾಗುತ್ತದೆ? ಮುಖ್ಯಪ್ರಾಣವು ಯಾವ ದೇವನಿಂದ ಪ್ರೇರಣೆ ಹೊಂದಿ ಸರ್ವತ್ರ ಸಂಚರಿಸುತ್ತದೆ? (ಹಾಗೆಯೇ) ಯಾವನಿಂದ ಪ್ರೇರಿತವಾದ ವಾಕ್ಕನ್ನು ಅವಲಂಬಿಸಿ ಲೋಕಗಳು ವ್ಯವಹರಿಸುತ್ತವೆ? ಕಣ್ಣು ಕಿವಿಗಳನ್ನು ಅವುಗಳ ವ್ಯಾಪಾರದಲ್ಲಿ ತೊಡಗಿಸುವ ದೇವನಾರು?’’ (ಕೇನೇಷಿತಂ ಪತತಿ ಪ್ರೇಷಿತಂ ಮನಃ ಕೇನ ಪ್ರಾಣಃ ಪ್ರಥಮಃ ಪ್ರೈತಿ ಯುಕ್ತಃ | ಕೇನೇಷಿತಾಂ ವಾಚಮಿಮಾಂ ವದಂತಿ ಚಕ್ಷುಶ್ಶ್ರೊತ್ರಂ ಕ ಉ ದೇವೋ ಯುನಕ್ತಿ || ಕೇನೋಪನಿಷತ್ತು 1-1).

‘‘ಎಲೈ ಬ್ರಹ್ಮವಿದರೇ! ಜಗತ್ತಿಗೆ ಕಾರಣವಾದ ಬ್ರಹ್ಮವಸ್ತುವು ಯಾವ ದೇವತಾ ಸ್ವರೂಪವುಳ್ಳದ್ದು? ನಮ್ಮ ಜನ್ಮ, ಜೀವನ, ಸಂಸ್ಥೆಗಳು ಯಾವ ಜನ್ಮಗಳಲ್ಲಿ (ಚೇತನರು) ಸುತ್ತಾಡುವಂತೆ ಏರ್ಪಟ್ಟಿರುವ ವ್ಯವಸ್ಥೆಗೆ ಆಶ್ರಯನೂ, ಅಧಿಷ್ಠಾನನೂ ಆಗಿರುವವನು (ದೇವರು) ಯಾರು? (ಎಂಥವನು?)’’

(ಕಿಂ ಕಾರಣಂ ಬ್ರಹ್ಮ ಕುತಃ ಸ್ಮ ಜಾತಾಃ ಜೀವಾಮ ಕೇನ ಕ್ವಚ ಸಂಪ್ರತಿಷ್ಠಾ | ಅಧಿಷ್ಠಿತಾಃ ಕೇನ ಸುಖೇತರೇಷು ವರ್ತಾಮಹೇ ಬ್ರಹ್ಮವಿದೋ ವ್ಯವಸ್ಥಾಂ || ಶ್ವೇತಾಶ್ವತರ 1-1)

ಕಠೋಪನಿಷತ್ತಿನಲ್ಲಿಯೂ ಸ್ವಯಂ ಯಮದೇವನೇ ನಚಿಕೇತನಂತಹ ಧೀರರಾದ ಜಿಜ್ಞಾಸುಗಳನ್ನು, ಪ್ರಶ್ನೆ ಹಾಕುವವರನ್ನು ಹೀಗೆ ಪ್ರಶಂಸಿಸುತ್ತಾನೆ; ‘‘ಅಯ್ಯಾ ನಚಿಕೇತನೇ! ನಿನ್ನಂತಹ ಪ್ರಶ್ನೆ ಕೇಳತಕ್ಕವನು ನಮಗೆ ದೊರೆಯುವಂತಾಗಲಿ.’’ (‘‘ತ್ವಾದೃಕ್ ನಃ ಭೂಯಾತ್ ನಚಿಕೇತಃ ಪ್ರಷ್ಟಾ’’ - 1.2.9)

ಆದರೆ ಅನೇಕರು ಪ್ರಶ್ನೆ ಕೇಳುವ ಪ್ರವೃತ್ತಿಯೇ ತಪ್ಪೆಂದೂ ಇದರಿಂದ ಶುಷ್ಕ ತರ್ಕವೇ ಮಾತ್ರ ಏಳುವುದೆಂದೂ ವೇದಾಂತ ಜ್ಞಾನವನ್ನು ಹೀಗಲ್ಲದೆ, ಕೇವಲ ಮೌನಮಾರ್ಗ ಮುಂತಾದವುಗಳಿಂದ ಸಾಧಿಸಬಹುದೆಂದೂ ಭ್ರಮಿಸಿ ಇಂತಹ ದುರ್ವಾದಗಳನ್ನು ಎಲ್ಲ ಕಡೆಯಲ್ಲಿಯೂ ಹರಡುತ್ತಿರುವುದು ದುರ್ದೈವದ ಸಂಗತಿ. ಇದು ವೇದಮಾರ್ಗಕ್ಕೆ ವಿರೋಧಿಯಾದದ್ದು.

ಜಿಜ್ಞಾಸೆಯೇ ಇಲ್ಲದಿದ್ದರೆ, ಮತ್ತು ಬ್ರಹ್ಮವಸ್ತುವು ಜಿಜ್ಞಾಸ್ಯವೇ ಅಲ್ಲದಿದ್ದರೆ, ಮುಂದಿನ ಹೆಜ್ಜೆ ಸಾಧ್ಯವೇ ಇಲ್ಲವೆಂದೂ ಬ್ರಹ್ಮಸೂತ್ರದ ಪ್ರಥಮ ಸೂತ್ರವೇ ತಿಳಿಸಿಕೊಟ್ಟು ಇಂತಹ ಜಿಜ್ಞಾಸುವಿಗೆ ಇರಬೇಕಾದ ಲಕ್ಷಣಗಳನ್ನೂ ಮತ್ತು ಪೂರ್ವ ಸಿದ್ಧತೆಯನ್ನೂ ವಿಧಿಸಿದೆ. ಇದರಿಂದ ಮಾತ್ರ ವೇದಾಂತವಿಜ್ಞಾನಾರ್ಥ ಸುನಿಶ್ಚಿತವಾಗುವುದು. ಕೇವಲ ಕರ್ವಚರಣೆಗಳಿಂದ ಬರತಕ್ಕ ಫಲಗಳು ಅಶಾಶ್ವತಗಳೆಂದು ದೃಢ ನಂಬಿಕೆ ಆದ ಹೊರತು ಜಿಜ್ಞಾಸುವು ಈ ಅಲ್ಪ ಫಲಗಳಲ್ಲಿಯೇ ಬಿದ್ದು ಬಿದ್ದು ತೊಳಲುವನಾದ್ದರಿಂದ ಇಂಥವನಿಗೆ ಬ್ರಹ್ಮಪ್ರಾಪ್ತಿಯಾಗಲೀ ಅಥವಾ ಇದಕ್ಕೆ ಸಾಧಕವಾದ ಪ್ರಶ್ನೆ ಪ್ರವೃತ್ತಿಯಾಗಲೀ ಉದ್ಭವಿಸುವುದೇ ಇಲ್ಲ. ಜೀವನದಲ್ಲಿ ಬಹುಪಾಲು ಜನರ ಪಾಡೇ ಇದು. ಎಲ್ಲರಿಗೂ ಬಲಾತ್ಕಾರವಾಗಿ ಬ್ರಹ್ಮವಿದ್ಯೆಯನ್ನು ಕಲಿಸಿಯೇ ಬಿಡುತ್ತೇವೆ ಎಂದು ಅನೇಕರು ಈಗೀಗ ಸಾಮೂಹಿಕವಾಗಿ ಯತ್ನಿಸುವುದೂ ಕೇವಲ ಅಜ್ಞಾನ ಪ್ರದರ್ಶನದಲ್ಲೋ, ಗ್ರಾಮ್ಯರೀತಿಯ ಮನೋರಂಜನೆಯಲ್ಲೋ ಮಾತ್ರ ಪರ್ಯವಸಾನವಾಗುವುದರಲ್ಲಿ ಸಂದೇಹವಿಲ್ಲ. ಮುಂಡಕ ಉಪನಿಷತ್ತಿನಲ್ಲಿ ಶಿಷ್ಯ ಗುರುವನ್ನು ಹೊಂದಿ ಪ್ರಶ್ನಿಸಬೇಕಾದ ರೀತಿಯನ್ನು ಹೀಗೆ ಹೇಳಿದೆ: ಪರೀಕ್ಷ್ಯ ಲೋಕಾನ್ ಕರ್ಮಚಿತಾನ್ ಬ್ರಾಹ್ಮಣೋ ನಿರ್ವೆದಮಾಯಾತ್ ನಾಸ್ತ್ಯೃತಃ ಕೃತೇನ | ತದ್ವಿಜ್ಞಾನಾರ್ಥಂ ಸ ಗುರುಮೇವಾಭಿಗಚ್ಛೇತ್ ಸಮಿತ್ಪಾಣಿಃ ಶ್ರೋತ್ರಿಯಂ ಬ್ರಹ್ಮನಿಷ್ಠಂ || ತಸ್ಮೈ ಸ ವಿದ್ವಾನ್ ಉಪಸನ್ನಾಯ ಸಮ್ಯಕ್ ಪ್ರಶಾಂತಚಿತ್ತಾಯ ಶಮಾನ್ವಿತಾಯ | ಯೇನಾಕ್ಷರಂ ಪುರುಷಂ ವೇದ ಸತ್ಯಂ ಪ್ರೋವಾಚ ತಾಂ ತತ್ತ್ವತೋ ಬ್ರಹ್ಮವಿದ್ಯಾಮ್ || (1-11-12, 13)

‘‘ಶಿಷ್ಯನು ಕಳೆದುಹೋದ ಆಯುಷ್ಯವನ್ನೂ, ಸಂಪಾದಿಸಿದ ಅಲ್ಪ ಫಲಗಳನ್ನೂ ಕಂಡು ದುಃಖ ಹೊಂದಿರಬೇಕು. ಕೈ ಮುಗಿದು, ಗುರುವನ್ನೇ ಜ್ಞಾನಾರ್ಥಿಯಾಗಿ ಆಶ್ರಯಿಸಬೇಕು. ಶ್ರವಣದಲ್ಲಿ ಆಸಕ್ತನೂ, ಶ್ರುತದಲ್ಲಿ ವಿಶ್ವಾಸಿಯೂ, ಪ್ರಶಾಂತಚಿತ್ತನೂ, ಇಂದ್ರಿಯ ನಿಗ್ರಹ ಉಳ್ಳವನೂ ಆಗಿದ್ದು ಗುರುವಿನಿಂದ ಏಕಾಂತದಲ್ಲಿ ಉಪದೇಶವನ್ನು ಹೊಂದಬೇಕು.’’

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net