More

    ‘ಕೊರೊನಾ -ಕೋಯಿ ರೋಡ್​ ಪರ್​ ನ ನಿಕಲೆ’ ಎಂದು ವ್ಯಾಖ್ಯಾನಿಸಿದ ಪ್ರಧಾನಿ ಮೋದಿ; ವೈದ್ಯಕೀಯ ಸೌಲಭ್ಯ ಬಲಪಡಿಸಲು 15,000 ಕೋಟಿ ರೂ. ಪ್ಯಾಕೇಜ್​

    ನವದೆಹಲಿ: ಇಂದು ಮಧ್ಯರಾತ್ರಿಯಿಂದ ಸಂಪೂರ್ಣ ಭಾರತ ಲಾಕ್​ ಡೌನ್​ ಆಗುತ್ತದೆ ಎಂದು ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಯಾರೂ ಮನೆಬಿಟ್ಟು ಹೊರಬೇಡಿ ಎಂದು ದೇಶದ ಜನರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.

    ನಿಮ್ಮ ನಿಮ್ಮ ಮನೆಯ ಬಾಗಿಲಿನ ಸುತ್ತಲೂ ಲಕ್ಷ್ಮಣ ರೇಖೆ ಎಳೆದುಕೊಳ್ಳಿ. ಆಯಾ ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ಎಂಬ ಶಬ್ದಕ್ಕೆ ಹೊಸ ಅರ್ಥವನ್ನೇ ಕೊಡುವ ಮೂಲಕ ಜಾಗೃತಿ ಮೂಡಿಸಿದ್ದಾರೆ.

    ಕೊರೊನಾ ಎಂದರೆ ‘ಕೋಯಿ ರೋಡ್​ ಪರ್​ ನಾ ನಿಕಲೆ’ (‘ಯಾರೂ ರಸ್ತೆಗೆ ಇಳಿಯಬೇಡಿ’) ಎಂದು ಹೇಳಿರುವ ಮೋದಿಯವರು, ಈ ಲಾಕ್​ಡೌನ್​ನಿಂದಾಗಿ ಖಂಡಿತವಾಗಿಯೂ ಆರ್ಥಿಕ ಹೊರೆಯಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಕೇಂದ್ರವೂ ಸೇರಿ ಎಲ್ಲ ಸರ್ಕಾರಗಳ ಆದ್ಯತೆ ದೇಶದ ಜನರ ಜೀವ ರಕ್ಷಣೆ ಎಂದಿದ್ದಾರೆ.

    ಕೊರೊನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಮೊದಲು ಒಂದು ಲಕ್ಷ ಜನರಿಗೆ ಸೋಂಕು ತಗುಲಲು 67 ದಿನಗಳು ಬೇಕಾದವು. ಆದರೆ ಎರಡನೇ ಬಾರಿ ಒಂದು ಲಕ್ಷ ಜನರಿಗೆ ಕೇವಲ 11 ದಿನಗಳಲ್ಲಿ ಸೋಂಕು ತಗುಲಿದೆ. ನಿರ್ಲಕ್ಷ್ಯ ಮಾಡಿದರೆ ಇನ್ನು ನಾಲ್ಕೇ ದಿನಗಳಲ್ಲಿ ಆ ಸಂಖ್ಯೆ 3ಲಕ್ಷಕ್ಕೆ ಏರುವುದು ನಿಶ್ಚಿತ.

    ಕೊರೊನಾ ಸೋಂಕು ಇರುವವರು ಆರಂಭದಲ್ಲಿ ಆರೋಗ್ಯವಾಗಿಯೇ ಕಾಣಿಸುತ್ತಾರೆ. ಅವರಿಗೆ ಸೋಂಕು ಇದೆಯೋ, ಇಲ್ಲವೋ ಎಂಬುದೂ ಗೊತ್ತಾಗುವುದಿಲ್ಲ. ಹಾಗಾಗಿ ಯಾರ ಸಂಪರ್ಕಕ್ಕೂ ಹೋಗದೆ, ನಿಮ್ಮನಿಮ್ಮ ಮನೆಯಲ್ಲಿಯೇ ಇರಿ. ಇದು ಸಂಯಮ ಮತ್ತು ಶಿಸ್ತಿನಿಂದ ಇರಬೇಕಾದ ಸಮಯ ಎಂದು ಪ್ರಧಾನಿ ಹೇಳಿದ್ದಾರೆ.

    ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಹೊಂದಿರುವ ಇಟಲಿ, ಜರ್ಮನಿ, ಅಮೆರಿಕ, ಫ್ರಾನ್ಸ್​ನಂತಹ ಹಲವು ದೇಶಗಳಿಗೇ ಕರೊನಾ ವೈರಸ್​ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಈ ವಿಪತ್ತನ್ನು ಭಾರತದಲ್ಲಿ ನಾವು ಎಷ್ಟರಮಟ್ಟಿಗೆ ಕಡಿಮೆ ಮಾಡಬಹುದು ಎಂಬುದನ್ನು ನಮ್ಮ ಕಾರ್ಯವೇ ನಿರ್ಣಯಿಸುವ ಸಂದರ್ಭ ಬಂದಿದೆ. ಯಾವುದೇ ಗಾಳಿಸುದ್ದಿಗಳನ್ನೂ ನಂಬಬೇಡಿ. ಸರ್ಕಾರದ ಆದೇಶ, ಸೂಚನೆಗಳನ್ನು ಪಾಲಿಸಿ ಎಂದು ತಿಳಿಸಿದ್ದಾರೆ.

    ಹಾಗೇ ಕೊರೊನಾ ಚಿಕಿತ್ಸೆಗಾಗಿ ದೇಶದ ವೈದ್ಯಕೀಯ ಸೌಲಭ್ಯವನ್ನು ಬಲಪಡಿಸಲು, ಅಗತ್ಯ ವೆಂಟಿಲೇಟರ್​, ಐಸಿಯು, ಐಸೋಲೇಶನ್​ ವಾರ್ಡ್​ಗಳಿಗಾಗಿ 15,000 ಕೋಟಿ ರೂಪಾಯಿಗಳ ಪ್ಯಾಕೇಜ್​ ನೀಡಲು ಕೇಂದ್ರ ಅನುಮೋದನೆ ನೀಡಿದ್ದಾಗಿ ಮೋದಿ ಘೋಷಿಸಿದ್ದಾರೆ. (ಏಜೆನ್ಸೀಸ್​)

    ಇಂದು (ಮಾ.24) ರಾತ್ರಿ 12ಗಂಟೆಯಿಂದ ಇಡೀ ಭಾರತ ಲಾಕ್​ಡೌನ್​; ಕರೊನಾದಿಂದ ಪಾರಾಗಲು ಇದೊಂದೇ ಮಾರ್ಗವೆಂದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts