

ನಮ್ಮ ಸನಾತನಧರ್ಮವು ಪಾಶ್ಚಾತ್ಯ ದೇಶಗಳ ಕ್ರೈಸ್ತ, ಇಸ್ಲಾಂ, ಮತಗಳಂತೆಯೋ, ಅಥವಾ ನಮ್ಮದೇ ದೇಶದ ಜೈನ, ಬೌದ್ಧ ಮತಗಳಂತೆಯೋ ನಿರ್ದಿಷ್ಟ ಚಾರಿತ್ರಿಕ ಕಾಲದಲ್ಲಿ ಒಂದಾನೊಂದು ದಿನ, ಒಬ್ಬಾನೊಬ್ಬ ವ್ಯಕ್ತಿಯಿಂದ ‘‘ನಿರ್ವಿುತ’’ವಲ್ಲದೆ, ಅನಾದಿಯೂ ಅನಂತವೂ ಆಗಿದ್ದು, ಜೀವನದ ನಿತ್ಯಸತ್ಯಗಳನ್ನು ಎತ್ತಿ ಹಿಡಿದಿದ್ದು ಅಪೌರುಷೇಯವಾಗಿದೆ. ಆದುದರಿಂದ ಜೀವನದ ವೈವಿಧ್ಯವನ್ನು ಗಮನದಲ್ಲಿಟ್ಟುಕೊಂಡೇ, ವ್ಯಕ್ತಿಗಳ ಪರಿಪಕ್ವತೆ, ಮನಸ್ಸಿನ ಒಲವು, ವೃತ್ತಿಯ ಹಿನ್ನೆಲೆ, ಜನ್ಮಜನ್ಮಾಂತರಗಳ ಸಿದ್ಧತೆಗಳನ್ನೆಲ್ಲ ಪರಿಗಣಿಸಿ, ಅವನವನ ಯೋಗ್ಯತೆ, ಅಧಿಕಾರಕ್ಕೆ ತಕ್ಕಂತೆ ಧರ್ಮಸಾಧನೆಯನ್ನೂ ಮೋಕ್ಷಸಾಧನೆಯನ್ನೂ ಮಾಡುವ ಅವಕಾಶ ಬಾಹುಳ್ಯವನ್ನು ಒಂದೇ ಗುರಿಗಾಗಿ ಏರ್ಪಡಿಸಿಕೊಟ್ಟಿರುವ ಒಂದೇ ಒಂದು ವಿಶ್ವಧರ್ಮವೆಂದರೆ ನಮ್ಮ ಸನಾತನ ಧರ್ಮವೇ ಎಂದು ಸಪ್ರಮಾಣವಾಗಿ ಹೇಳಬಹುದು. ಕ್ರೈಸ್ತ-ಇಸ್ಲಾಂಧರ್ಮಗಳಲ್ಲಿ ಹೀಗಲ್ಲದೆ ಕೇವಲ ‘‘ಏಕರೂಪತಾ’’ ತತ್ತ್ವಮಯ (Uniformity, not Unity) ಉಪದೇಶಗಳೇ ಇವೆ. ಉದಾ: ‘‘ಹತ್ತು ಅಪ್ಪಣೆಗಳು’’ (Ten Commandments) ಇತ್ಯಾದಿ. ಇದರಿಂದ ವ್ಯಕ್ತಿಯ ಅಗತ್ಯಕ್ಕೆ ತಿಲಾಂಜಲಿ ಇತ್ತಿರುವುದಲ್ಲದೆ, ಇವನ್ನು ಉಲ್ಲಂಘಿಸಿದವನು ಧಾರ್ವಿುಕವಾಗಿರುವ ಸಾಧ್ಯತೆಯೇ ಇಲ್ಲವೆಂಬ ಅಸಹಿಷ್ಣುತಾ ಮನೋಭಾವ ಬೇರೂರಿ, ಅನರ್ಥವಾಗಿರುವುದು ಪಾಶ್ಚಾತ್ಯಚರಿತ್ರೆಯಲ್ಲಿ ಸರ್ವವಿದಿತವಾಗಿದೆ. ನಮ್ಮಲ್ಲಿಯೋ? ಎಂದರೆ ಗೃಹಸ್ಥನ ಧರ್ಮ ಕ್ಷತ್ರಿಯನದಲ್ಲ; ಕ್ಷತ್ರಿಯನ ಧರ್ಮ, ಬ್ರಾಹ್ಮಣನದಾಗಲಾರದು; ವೈಶ್ಯನದು ಶೂದ್ರನದಾಗಲಾರದು. ವರ್ಣಧರ್ಮ ಬೇರೆ, ಆಶ್ರಮಧರ್ಮ ಬೇರೆ, ವ್ಯಕ್ತಿಧರ್ಮ ಬೇರೆ, ಸಮಾಜಧರ್ಮ ಬೇರೆ, ಸಾರ್ವಜನಿಕಧರ್ಮ ಬೇರೆ. ಆಪದ್ಧರ್ಮ ಬೇರೆ ಇತ್ಯಾದಿ. ಮಹಾಭಾರತದ ಶಾಂತಿಪರ್ವ ಒಂದನ್ನಾದರೂ ಓದಿದರೆ ಪಾಶ್ಚಾತ್ಯರಿಗೆ ಎದೆಯೊಡೆದೀತೇ ವಿನಾ, ‘‘ಅರ್ಥ’’ವಾಗಲಾರದು!