

ಲೇಖಕ: ವಸುಧೇಂದ್ರ
ಕಾದಂಬರಿ: ರೇಷ್ಮೆ ಬಟ್ಟೆ
ಬೆಂಗಳೂರು: ಖ್ಯಾತ ಕಾದಂಬರಿಕಾರ ವಸುಧೇಂದ್ರ ಅವರ ಹೊಸ ಕಾದಂಬರಿ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ತಮ್ಮ ಅಧ್ಯಯನ ಹಾಗೂ ಆಕರ್ಷಕ ಶೈಲಿಯಿಂದ ತಮ್ಮದೇ ಆದ ಓದುಗ ಬಳಗ ಸೃಷ್ಟಿಸಿಕೊಂಡಿರುವ ವಸುಧೇಂದ್ರ ಅವರ ಈ ಹೊಸ ಕಾದಂಬರಿಯ ಆಯ್ದ ಭಾಗವೊಂದು ಇಲ್ಲಿದೆ. ಕಾದಂಬರಿ ಸೆ. 29 ರಂದು ಹೊರಬರುತ್ತಿದೆ.
ಯವನರ ರಾಜ್ಯದಿಂದ ಸಾವಿರಾರು ಮೈಲಿಗಳ ಆಚೆ, ಹಲವು ಕಾಡುಗಳು ಹಲವು ನಾಡುಗಳು ಹಲವು ನದಿಗಳು ಹಲವು ಮರುಭೂಮಿಗಳನ್ನು ದಾಟಿದ ಮೇಲೆ ಚೀನೀಯರ ಸಾಮ್ರಾಜ್ಯವಿದೆ. ಚೀನೀಯರ ಸೀಮೆಯ ಉತ್ತರದ ಕಾಡಿನಲ್ಲಿ ಹೂಣರು ನೆಲೆಸಿದ್ದಾರೆ. ಚೀನೀಯರು ಮನೆ ಮತ್ತು ಅರಮನೆ ಕಟ್ಟಿಕೊಂಡು ಕಷ್ಟಪಟ್ಟು ಕೃಷಿ ಮಾಡಿಕೊಂಡು ರೇಷ್ಮೆ ಬೆಳೆದು ಬಣ್ಣದ ಬಟ್ಟೆಗಳನ್ನು ನೇಯುತ್ತಾ ಸ್ಥಾವರದ ಬದುಕನ್ನು ಬಾಳುತ್ತಿದ್ದರೆ, ಉತ್ತರದ ಹೂಣರದು ಕಾಡಿನಲ್ಲಿ ಸುತ್ತಾಡುವ ಬದುಕು. ಕುದುರೆ, ಹಸು, ಕುರಿಗಳನ್ನು ಸಾಕಿಕೊಂಡಿರುವ ಹೂಣರು, ಒಂದೊಂದು ಹುಲ್ಲುಗಾವಲಿನಲ್ಲಿ ಒಂದಿಷ್ಟು ಕಾಲ ನೆಲೆ ನಿಂತು ಅದು ಬೋಳಾಗುತ್ತಲೇ ಮತ್ತೊಂದು ಹುಲ್ಲುಗಾವಲನ್ನು ಹುಡುಕಿಕೊಂಡು ಹೋಗುತ್ತಾರೆ. ನಿತ್ಯ ಬೇಟೆಯಾಡಿ ಹೊಟ್ಟೆ ಹೊರೆದುಕೊಂಡು ನಾಳೆಯೆಂಬುದರ ಚಿಂತೆಯಿಲ್ಲದೆ ಬಾಳುತ್ತಾರೆ. ಕುರಿ ಮತ್ತು ಹಸುಗಳ ಹಾಲನ್ನು ನೀರಿಗಿಂತಲೂ ಹೆಚ್ಚು ಸೇವಿಸುತ್ತಾರೆ. ಕಾಡಿನ ತಿರುಗಾಟದ ಬದುಕಿಗೆ ಸಹಜವೆನ್ನುವಂತೆ ಅವರದು ದಷ್ಟಪುಷ್ಟ ಮೈಕಟ್ಟು, ಕೊಬ್ಬಿಲ್ಲದ ಸದೃಢ ದೇಹ. ಕುದುರೆಯ ಮೇಲೆ ನಾಗಾಲೋಟದಲ್ಲಿ ಚಲಿಸುತ್ತಲೇ ಬಾಣವನ್ನು ದಶದಿಕ್ಕಿಗೂ ಬಿಡುವ ಕೌಶಲವನ್ನು ಅವರು ರೂಢಿಸಿಕೊಂಡಿದ್ದಾರೆ.
ಕಾಡಿನಲ್ಲೇ ತಿರುಗಾಡಿ ಬದುಕುವ ಹೂಣರಿಗೆ ಸ್ಥಾವರ ಬದುಕಿನ ಚೀನೀಯರ ಹಲವು ವಸ್ತುಗಳ ಮೇಲಿನ ಅಪೇಕ್ಷೆ ವಿಪರೀತವಾಗಿದೆ. ದವಸ-ಧಾನ್ಯಗಳು ಮತ್ತು ಬಣ್ಣದ ರೇಷ್ಮೆ ಬಟ್ಟೆಗಳನ್ನು ಕಂಡರೆ ಬಾಯಲ್ಲಿ ಜೊಲ್ಲು ಸುರಿಸುತ್ತಾರೆ. ಚೀನೀಯರು ತಯಾರಿಸುವ ಅಲಂಕಾರದ ವಸ್ತುಗಳು, ಆಭರಣಗಳು, ರುಚಿಯಾದ ಆಹಾರ ಪದಾರ್ಥಗಳನ್ನು ಕಂಡರೂ ಅವರಿಗೆ ಆಸೆ. ವರ್ಷಪೂರ್ತಿ ಒಂದೇ ಕಡೆ ನೆಲೆನಿಂತು ಭೂಮಿಯನ್ನು ಉತ್ತಿ-ಬಿತ್ತಿ ಬೆಳೆ ಬೆಳೆಯುವ, ಬೆಳೆದ ಬೆಳೆಯನ್ನು ಕಳ್ಳಕಾಕರಿಂದ ರಕ್ಷಿಸುವುದಕ್ಕೆ ಹೆಣಗಾಡುವ ಚೀನೀಯರ ಬದುಕು ಹೂಣರಿಗೆ ಊಹಿಸಲೂ ಸಾಧ್ಯವಿಲ್ಲ.
ಎರಡು ಬಾರಿ ಚಂದ್ರ ಮೈತುಂಬಿಕೊಂಡನೆಂದರೆ ಸಾಕು, ಗುಡಾರಗಳನ್ನು ಮಡಚಿ ಕುದುರೆ, ಕತ್ತೆ, ದನಗಳ ಮೇಲೆ ಹೇರಿ ಹೊಸ ಜಾಗವೊಂದಕ್ಕೆ ಹೋಗಲು ಹಪಹಪಿಸುತ್ತಾರೆ. ಹೊಸ ನೀರು, ಹೊಸ ಪ್ರಾಣಿಗಳ ಮಾಂಸದ ರುಚಿ, ಹೊಸ ಹಣ್ಣುಗಳನ್ನು ಸವಿಯುವ ಹಂಬಲ, ಹೊಸ ನೋಟವನ್ನು ಕಣ್ತುಂಬಿಕೊಳ್ಳುವ ಬಯಕೆ ಅವರಲ್ಲಿ ಚಿಗುರುತ್ತಲೇ ಇರುತ್ತದೆ. ಒಂದೊಂದು ಭೂಭಾಗದ ಹುಲ್ಲು-ನೀರನ್ನು ಸೇವಿಸಿದ ಪ್ರಾಣಿಗಳ ಮಾಂಸದ ರುಚಿಯೂ ಅನನ್ಯವಾದದ್ದು. ಮಾಂಸದ ರುಚಿಯಿಂದಲೇ ಆ ಪ್ರಾಣಿ ಯಾವ ದಿಕ್ಕಿನ ಹುಲ್ಲುಗಾವಲಿನಲ್ಲಿ ನೆಲೆಸಿತ್ತು ಎಂದು ಹೇಳುವ ರುಚಿಮೊಗ್ಗುಗಳು ಹೂಣರಿಗಿವೆ.
ವರ್ಣರಂಜಿತವಾದ ಸೂಕ್ಷ್ಮ ರೇಷ್ಮೆಬಟ್ಟೆಯನ್ನು ನೇಯುವುದು ಹೂಣರ ಕೌಶಲವನ್ನು ಮೀರಿದ್ದು. ಅಂತಹ ಸೂಕ್ಷ್ಮ ಕೆಲಸ ಅವರ ಒರಟು ಜೀವನ ಶೈಲಿಗೆ ಒಗ್ಗುವುದಿಲ್ಲ. ಜತೆಗೆ ರೇಷ್ಮೆ ಬೆಳೆಯುವ ಮತ್ತು ನೇಯುವ ದೈವವಿದ್ಯೆಯ ರಹಸ್ಯವನ್ನೂ ಚೀನೀಯರು ಈವರೆಗೆ ಯಾರಿಗೂ ಬಿಟ್ಟುಕೊಟ್ಟಿಲ್ಲ. ಆದ್ದರಿಂದ ಅವುಗಳನ್ನು ಪಡೆಯುವ ಸುಲಭದ ದಾರಿಯೆಂದರೆ ಆಗೊಮ್ಮೆ ಈಗೊಮ್ಮೆ ಚೀನೀಯರ ಮೇಲೆ ಆಕ್ರಮಣ ಮಾಡಿ, ಅವುಗಳನ್ನು ಕಸಿದುಕೊಂಡು ಬರುವುದಾಗಿದೆ.
ಒಂದೇ ಕಡೆ ನೆಲೆನಿಲ್ಲುವ ಚೀನೀಯರ ದೇಹದ ಮೈಕಟ್ಟು ಹೂಣರಿಗೆ ಸ್ಪರ್ಧಿಸುವಂತಹದ್ದಲ್ಲ, ಬೆಳಗ್ಗೆ ಅರಳಿ ಸಂಜೆಗೆ ಬಾಡುವ ಹೂವಿನಂತೆ ಕೋಮಲವಾದದ್ದು. ಕೃಷಿಕ ಬದುಕಿನಲ್ಲಿ ಎಷ್ಟೇ ಬೆವರಿಳಿಸಿದರೂ, ಕಾಡಿನಲ್ಲಿ ಸುತ್ತಿ ಬೇಟೆಯಾಡುವ, ಹಲವು ಕೆರೆಗಳ ನೀರು ಕುಡಿಯುವ ಹೂಣರ ಆರೋಗ್ಯಕ್ಕೆ ಅವರು ಸರಿಗಟ್ಟುವುದಿಲ್ಲ. ಆದ್ದರಿಂದ ಹೂಣರ ಜತೆ ಅನಾವಶ್ಯಕವಾಗಿ ಸೆಣಸಾಡದೆ ಅವರು ದೋಚಿಕೊಂಡು ಹೋಗುವುದನ್ನು ನೋಡುತ್ತಾ ನಿಲ್ಲುತ್ತಾರೆ. ಹೂಣರ ಕಣ್ಣಿಗೆ ಸುಲಭವಾಗಿ ಬೀಳದಂತೆ ವಸ್ತುಗಳನ್ನು ಮರೆಮಾಡುವ ವಿದ್ಯೆಯನ್ನು ಇತ್ತೀಚೆಗೆ ಕಲಿತುಕೊಳ್ಳತೊಡಗಿದ್ದಾರೆ.
ಇಂತಹ ಚೀನೀಯರನ್ನು ಹೂಣರ ಉಪಟಳದಿಂದ ರಕ್ಷಣೆ ಮಾಡುವ ಜವಾಬ್ದಾರಿ ಚೀನಾದ ಮಹಾರಾಜನದು. ಅದಕ್ಕಾಗಿ ಪ್ರಜೆಗಳು ಪ್ರತಿವರ್ಷವೂ ಕಂದಾಯ ಸಲ್ಲಿಸುತ್ತಾರೆ. ಈ ಕಂದಾಯವು ದವಸ-ಧಾನ್ಯ ಮತ್ತು ಬಗೆಬಗೆಯ ರೇಷ್ಮೆ ಬಟ್ಟೆಯ ರೂಪದಲ್ಲಿ ಇರುತ್ತದೆ. ರೇಷ್ಮೆ ಬಟ್ಟೆಯೆಂದರೆ ಸಾಮಾನ್ಯವಲ್ಲ, ಕೈಯಲ್ಲಿ ನಗದು ಹಣವಿದ್ದಂತೆ. ಅದರಿಂದ ಏನನ್ನಾದರೂ ಪ್ರತಿಯಾಗಿ ಕೊಳ್ಳಬಹುದು. ತಾಮ್ರದ ಬಿಲ್ಲೆಯ ನಾಣ್ಯದ ಚಲಾವಣೆ ಬಳಕೆಯಲ್ಲಿ ಇದ್ದರೂ, ಅದಕ್ಕಿಂತಲೂ ರೇಷ್ಮೆ ಬಟ್ಟೆಯ ಸುರುಳಿಗಳೇ ವ್ಯವಹಾರಕ್ಕೆ ಸುಲಭ. ಇಷ್ಟು ಅಳತೆಯ ಬಟ್ಟೆಗೆ ಇಷ್ಟು ಪದಾರ್ಥ ಎಂದು ಎಲ್ಲಾ ವಸ್ತುಗಳ ಬೆಲೆ ನಿಗದಿಯಾಗಿದೆ. ಅದು ವ್ಯಾಪಾರಿಗಳಿಗೂ ಗೊತ್ತು, ಗಿರಾಕಿಗಳಿಗೂ ಗೊತ್ತು. ಸಣ್ಣಗೆ ಮಡಿಸಿ, ಹಿಡಿಯಷ್ಟು ಮಾಡಿ, ಎಲ್ಲಿಯಾದರೂ ಸಂದಿನಲ್ಲಿ ಬಚ್ಚಿಡಬಹುದಾದ ಹೂಹಗುರದ ರೇಷ್ಮೆ ಬಟ್ಟೆ ಸಹಜವಾಗಿಯೇ ಪ್ರಜೆಗಳಿಗೆ ಸುಲಭದ ವ್ಯಾಪಾರ ವ್ಯವಹಾರದ ಸಾಧನವಾಗಿದೆ.
ರಕ್ಷಣೆಯ ವ್ಯವಸ್ಥೆಯನ್ನು ವಹಿಸಿಕೊಂಡಿದ್ದರೂ ಮತ್ತೆ ಮತ್ತೆ ಉಪಟಳ ಕೊಡುವ ಹೂಣರು ಚೀನೀ ಮಹಾರಾಜನಿಗೆ ದುಃಸ್ವಪ್ನವಾಗಿ ಕಾಡುತ್ತಾರೆ. ರಾಕ್ಷಸನೊಬ್ಬನ ಉಪಟಳವನ್ನು ನಿಯಂತ್ರಿಸಲು ಅವನಿಗೆ ತಾವಾಗಿಯೇ ನಿತ್ಯ ಆಹಾರವಾಗಿ ಪ್ರಜೆಯೊಬ್ಬನನ್ನು ಕಳುಹಿಸಿಕೊಡುವ ರೀತಿಯಲ್ಲಿ, ಅವರು ಆಕ್ರಮಣ ಮಾಡಿದಾಗಲೆಲ್ಲಾ ಅವರು ದೋಚಿಕೊಂಡು ಹೋಗುವಷ್ಟು ಆಹಾರಧಾನ್ಯ ಮತ್ತು ರೇಷ್ಮೆ ಬಟ್ಟೆ ಕೊಟ್ಟು ಮಹಾರಾಜ ಶಾಂತಿಯನ್ನು ಕೊಳ್ಳುತ್ತಾನೆ. ಹೀಗೆ ಮಾಡುತ್ತಾ ಹೋಗುವುದಾದರೆ ರಾಜ್ಯಕ್ಕೆ ರಾಜನೊಬ್ಬ ಇದ್ದು ಏನು ಪ್ರಯೋಜನ? ಅವನಿಗೆ ಏತಕ್ಕಾಗಿ ಪ್ರಜೆಗಳು ಕಂದಾಯ ತೆರಬೇಕು? ಇದರ ಸೂಕ್ಷ್ಮ ಅರಿವು ಮಹಾರಾಜನಿಗಿದೆ.
ಹೂಣರ ಆಕ್ರಮಣದಿಂದ ರೋಸಿ ಯಾವ ಹೊತ್ತಿನಲ್ಲಾದರೂ ಪ್ರಜೆಗಳು ದಂಗೆಯೇಳಬಹುದು ಎಂಬ ಅರಿವಿದೆ. ಅದಕ್ಕಾಗಿಯೇ ಅವನು ಚೀನಾದ ಬೃಹತ್ ಗೋಡೆಯನ್ನು ವಿಸ್ತರಿಸುತ್ತಲೇ ಹೋಗುತ್ತಿದ್ದಾನೆ. ಅವನ ಹಿರಿಯರು ಪ್ರಾರಂಭಿಸಿದ ಗೋಡೆಯನ್ನು ಸೀಮೆಯುದ್ದಕ್ಕೂ ಬೆಳೆಸಿ, ಹೂಣರು ಬರದಂತೆ ತಡೆಯೊಡ್ಡುತ್ತಾ ಹೋಗುತ್ತಿದ್ದಾನೆ.
ಅದೊಂದು ದಿನ ಬೆಳಗ್ಗೆ ನಾಡಿನ ಈ ಗಲಾಟೆಯಿಂದ ಸಾಕಾಗಿ ಮಹಾರಾಜ ಮನಸು ಹರಿದತ್ತ ಕುದುರೆ ಓಡಿಸುತ್ತಾ ಎಲ್ಲಿಗೋ ಬಂದುಬಿಟ್ಟಿದ್ದ. ಅದು ಯಾವುದೋ ಅಪರಿಚಿತ ಜಾಗ, ಬಹು ಪ್ರಶಾಂತವಾಗಿತ್ತು. ಕಣ್ಣೆದುರಿನಲ್ಲಿ ಸ್ಫಟಿಕದಷ್ಟು ಶುಭ್ರವಾದ ನೀರಿನ ಸರೋವರವೊಂದು ದೇವತೆಗಳ ಅಲಂಕಾರಕ್ಕೆ ಕನ್ನಡಿ ಹಿಡಿದಂತೆ ಹರಡಿ ನಿಂತಿತ್ತು. ಹತ್ತಿಯಂತೆ ಹಗುರಾದ ಬಿಳಿಯ ಮೋಡಗಳ ಚಲನೆ ಆ ಸರೋವರದಲ್ಲಿ ಪ್ರತಿಫಲಿಸುತ್ತಿತ್ತು. ದೊಡ್ಡ ಮೋಡಗಳ ಪುಟ್ಟ ತುಣುಕುಗಳಂತೆ ಹಂಸಗಳು ನಿರುಮ್ಮಳವಾಗಿ ಸರೋವರದಲ್ಲಿ ಚಲಿಸುತ್ತಿದ್ದವು. ಆಕಾಶದಲ್ಲಿಲ್ಲದ ನಕ್ಷತ್ರಗಳು ಸರೋವರದಲ್ಲಿ ಮಾತ್ರ ಮೂಡಿದಂತೆ ಕೆಂಪು ಕಮಲಗಳು ಅಲ್ಲಲ್ಲಿ ಅರಳಿದ್ದವು.
ಸರೋವರದ ಹಿಂದೆ ಹಿಮಾಚ್ಛಾದಿತ ಪರ್ವತಗಳು ಆಕಾಶದೆತ್ತರಕ್ಕೆ ತಲೆ ಎತ್ತಿ ನಿಂತಿದ್ದವು. ಅದರ ತುದಿಯನ್ನು ಮುಟ್ಟಲು ಸಾಧ್ಯವಿಲ್ಲ ಎನ್ನುವಂತೆ ಮೋಡಗಳು ತುಸು ಕೆಳಗೆ ಸಂಚರಿಸುತ್ತಿದ್ದವು. ಆ ಪರ್ವತಗಳಲ್ಲಿನ ಹಿಮವೇ ಸೂರ್ಯನ ಶಾಖಕ್ಕೆ ಕರಗಿ ಸರೋವರವಾಗಿ ಹರಡಿರಬೇಕು ಎಂದು ಮಹಾರಾಜನಿಗೆ ಅರ್ಥವಾಯ್ತು. ಸರೋವರದ ತಟದಲ್ಲಿ ಬದುಕಿನ ಬೇರೆಲ್ಲಾ ರಾಗ-ದ್ವೇಷಗಳು ಮರೆಯಾಗಿ ಕೇವಲ ಶಾಂತಿ ಮಾತ್ರ ನೆಲೆಸಿತ್ತು. ಅದೆಷ್ಟು ಪ್ರಶಾಂತ ಸ್ಥಳವೆಂದರೆ, ಮಹಾರಾಜನಿಗೆ ಕುದುರೆ ನಡೆಯುವ ಸದ್ದೂ ಆ ನಿರ್ಮಲ ಜಗತ್ತನ್ನು ಕದಡಿ ಬಿಡುತ್ತದೇನೋ ಎಂದು ಭಯವಾಗಿ ಕುದುರೆ ಇಳಿದು ನಿಂತ. ಅಲ್ಲಿ ಬೀಸುತ್ತಿದ್ದ ತಣ್ಣನೆಯ ಆಹ್ಲಾದಮಯ ಗಾಳಿಗೂ ಅವಸರವಿರಲಿಲ್ಲ. ಬಿಸಿಲೂ ಅಲ್ಲದ, ಚಳಿಯೂ ಅಲ್ಲದ ಸಮಶೀತೋಷ್ಣ ಆ ಸ್ಥಳದಲ್ಲಿ ತುಂಬಿತ್ತು.
ದೂರದಲ್ಲಿ ಸರೋವರದ ಮಧ್ಯದಲ್ಲಿ ಫಳಫಳನೆ ಹೊಳೆಯುವ ಏನೋ ಚಲಿಸಿದಂತಾಯ್ತು. ಹಡಗು ಚಲಿಸುತ್ತಿದೆಯೆ ಎಂದು ಅಚ್ಚರಿಯಾಗಿ ಮಹಾರಾಜ ಕಣ್ಣುಜ್ಜಿಕೊಂಡು ನೋಡಿದ. ಊಹೂಂ... ಹಡಗಲ್ಲ. ಆ ಚಲಿಸುವ ಆಕೃತಿ ನಿಧಾನಕ್ಕೆ ಮಹಾರಾಜನ ಕಡೆಗೆ ಬರತೊಡಗಿತು. ಇಡೀ ದೇಹವೇ ಬಂಗಾರದ ವರ್ಣದಲ್ಲಿದ್ದ ವ್ಯಕ್ತಿಯೊಬ್ಬ ದಡದ ಕಡೆಗೆ ನಡೆದು ಬರುತ್ತಿದ್ದ. ನೀರಿನ ಮೇಲೆ ಯಾವ ಭಯವೂ ಇಲ್ಲದೆ, ಅವಸರವೂ ಇಲ್ಲದೆ, ಹೆಮ್ಮೆಯೂ ಇಲ್ಲದೆ, ಹತಾಶೆಯೂ ಇಲ್ಲದೆ ವ್ಯಕ್ತಿಯೊಬ್ಬ ಹೆಜ್ಜೆಯನ್ನು ಒಂದೊಂದಾಗಿ ಇಡುತ್ತಾ ಬರುತ್ತಿದ್ದ. ಯಾರಿವನು? ಹೀಗೆ ನೀರಿನ ಮೇಲೆ ನಡೆಯಲು ಮನುಷ್ಯನಾದವನಿಗೆ ಸಾಧ್ಯವೆ?.
ಅವನ ಮುಖದಲ್ಲಿ ದುಃಖದ ಸುಳಿವೇ ಇಲ್ಲ. ಅಲ್ಲಿ ಮಡುಗಟ್ಟಿರುವುದು ಕೇವಲ ಪ್ರಶಾಂತತೆ. ತುಟಿಯ ಮೇಲೆ ಮುಗುಳುನಗೆ. ಅಗಲವಾದ ಕಣ್ಣುಗಳಲ್ಲಿ ನನ್ನೆಡೆಗೆ ಬಾ ಎನ್ನುವ ಪ್ರೀತಿಯ ಆಹ್ವಾನ. ನೀರೊಂದೇ ಏಕೆ, ಬೆಂಕಿಯ ಮೇಲೂ ಇಷ್ಟೇ ಸರಾಗವಾಗಿ ನಡೆಯಬಲ್ಲೆ ಎನ್ನುವ ನಂಬಿಕೆಯನ್ನು ಚೆಲ್ಲುವಂತಹ ಆತ್ಮವಿಶ್ವಾಸದ ನಗು. ಕಾವಿ ವಸ್ತ್ರಗಳನ್ನು ಹೊದ್ದ ಆತ ಯಾವುದೋ ದೂರ ದೇಶದ ಸನ್ಯಾಸಿಯಂತೆ ಕಾಣುತ್ತಿದ್ದಾನೆ. ನಮ್ಮ ಸಾಮ್ರಾಜ್ಯದ ಕಾಂಗ್‌ಫೂಜಿ ತತ್ತ್ವಜ್ಞಾನಿಗಳಂತೆಯೂ ಇವನಿಲ್ಲ. ಇವನ ದಿರಿಸೇ ಬೇರೆ. ಗಡ್ಡ ಮೀಸೆ ಒಂದೂ ಇಲ್ಲದಂತೆ ಕೇಶಮುಂಡನ ಮಾಡಿಕೊಂಡಿದ್ದಾನೆ.
ಮಹಾರಾಜನ ಮೈಯಲ್ಲಿ ಸಣ್ಣಗೆ ನಡುಕ ಪ್ರಾರಂಭವಾಯ್ತು. ಬಂಗಾರದ ಮನುಷ್ಯ ಪೂರ್ತಿ ಹತ್ತಿರಕ್ಕೇ ಬಂದು ಎರಡೂ ಕೈಗಳನ್ನು ಚಾಚಿದ. ಅವನೆಡೆಗೆ ಹೋಗಬೇಕೋ... ಬಾರದೋ... ಯಾರಿವನು? ಯಾರಯ್ಯಾ ನೀನು? ನನ್ನ ರಾಜ್ಯದಲ್ಲಿ ನಿನಗೇನು ಕೆಲಸ? ಅಪ್ಪಣೆಯಿಲ್ಲದೆ ಬಂದೆಯಾ? ಯಾವ ಪ್ರಶ್ನೆಗೂ ಉತ್ತರವಿಲ್ಲದೆ ಅವನು ಹಸನ್ಮುಖದಿಂದ ನೋಡುತ್ತಿದ್ದಾನೆ. ‘ಬಾ ದೊರೆ, ನನ್ನೊಳಗೆ ಸೇರಿಕೋ... ನಿನ್ನ ದುಃಖವನ್ನೆಲ್ಲಾ ಶಮನ ಮಾಡುವೆ. ತುಂಬಾ ದಣಿದಿರುವೆ. ಸುಧಾರಿಸು ಬಾ’ ಎನ್ನುತ್ತಿದ್ದಾನೆ.
ಮಹಾರಾಜನಿಗೆ ಎಚ್ಚರವಾಯ್ತು. ಮೈಯಲ್ಲಿ ಇನ್ನೂ ಸಣ್ಣಗೆ ನಡುಕವಿತ್ತು. ಸರೋವರದ ಪ್ರಶಾಂತತೆ, ಆ ತಂಪು ಇನ್ನೂ ಶಯನಗೃಹದಲ್ಲಿ ಸಂಚರಿಸುತ್ತಿರುವಂತೆ ಭಾಸವಾಯ್ತು. ಬಂಗಾರದ ಮನುಷ್ಯನ ಚಿತ್ರಣ ಇಷ್ಟು ಬೇಗ ಮರೆಯಾಗಿದ್ದಕ್ಕೆ ಬೇಸರವಾಗಿ ಮತ್ತೊಮ್ಮೆ ಕಣ್ಣು ಮುಚ್ಚಿದ. ಊಹ್ಞೂಂ, ಅವನು ಮತ್ತೆ ಕಾಣಲಿಲ್ಲ. ರಾತ್ರಿಯೆಲ್ಲಾ ಹೂಣರೊಡನೆ ಹೊಡೆದಾಡಿ ದಣಿದು ಅರಮನೆಗೆ ಬಂದು ಶಯನಗೃಹದಲ್ಲಿ ಬಿದ್ದಿದ್ದಷ್ಟೇ ನೆನಪು. ಈಗ ಈ ಕನಸು. ಮಹಾರಾಜನಿಗೆ ಎಚ್ಚರವಾಗಿದ್ದು ಕಂಡು ಕೆಲವು ದಾಸಿಯರು, ಒಬ್ಬಳು ಖೋಜಾ ಹತ್ತಿರ ಬಂದರು. ನಸುಪರಿಮಳಯುಕ್ತ ನೀರನ್ನು ಕುಡಿಯಲು ನೀಡಿದರು. ಮಹಾರಾಜನ ಮೈಯ ಬೆವರನ್ನು ರೇಷ್ಮೆಯ ವಸ್ತ್ರದಿಂದ ಒರೆಸಿದರು.
ಇಡೀ ಶಯನಗೃಹ ರೇಷ್ಮೆ ಬಟ್ಟೆಯಿಂದ ಅಲಂಕೃತಗೊಂಡಿತ್ತು. ಕಣ್ಣು ಕೋರೈಸುವ ಬಣ್ಣಗಳ ಬಟ್ಟೆಗಳನ್ನು ಮೇಲ್ಛಾವಣಿಯಿಂದ ತೂಗಿಬಿಡಲಾಗಿತ್ತು. ಹಾಸಿಗೆ, ಹೊದಿಕೆ, ತಲೆದಿಂಬು - ಎಲ್ಲವನ್ನೂ ರೇಷ್ಮೆಯ ವಸ್ತ್ರಗಳೇ ಆವರಿಸಿದ್ದವು. ಕಿಟಕಿಗಳಿಗೆ ಒಂದೇ ಬಣ್ಣದ ಪರದೆಗಳನ್ನು ಹಾಕಿದ್ದು, ಅವು ಗಾಳಿಗೆ ಸಣ್ಣಗೆ ಹಾರಾಡುತ್ತಿದ್ದವು. ಕಸ್ತೂರಿ ಪರಿಮಳವು ಹಬ್ಬಿಕೊಂಡು ಗಾಳಿಯನ್ನು ಆಹ್ಲಾದಕರಗೊಳಿಸಿತ್ತು.
ಮರುದಿನ ಅರಮನೆಯ ಪ್ರಮುಖರಿಗೆಲ್ಲಾ ಕರೆ ಹೋಯ್ತು. ಆಸ್ಥಾನದ ಪ್ರಮುಖರು, ಸೈನ್ಯ ಪ್ರಮುಖರು, ಭಂಡಾರದ ಜವಾಬ್ದಾರಿ ಹೊತ್ತವರು, ನೆರೆಸೀಮೆಗಳನ್ನು ಬಲ್ಲವರು - ಎಲ್ಲರೂ ನೆರೆದರು. ಮಹಾರಾಜ ಸವಿವರವಾಗಿ ತನ್ನ ಕನಸನ್ನು ವಿವರಿಸಿದ. “ಯಾರವನು? ಎಲ್ಲಿಯವನು? ಅವನೇಕೆ ನನ್ನ ಕನಸಲ್ಲಿ ಬಂದ? ಅವನ ಬಗ್ಗೆ ವಿವರಗಳನ್ನು ಹುಡುಕಿ ತನ್ನಿ” ಎಂದು ಹುಕುಂ ಮಾಡಿದ.
ರಾಜನ ಕನಸಿನ ನಾಯಕನನ್ನು ಎಲ್ಲೆಂದು ಹುಡುಕುವುದು? ಹಾಗಂತ ಹೇಳಿದರೆ ರಾಜ ಮುನಿದಾನು ಎಂಬ ಭಯ ಎಲ್ಲರಿಗೂ ಇದ್ದಿದ್ದರಿಂದ ಯಾರೂ ಅಪಸ್ವರ ನುಡಿಯಲಿಲ್ಲ. ಚೀನಾ ಚಕ್ರವರ್ತಿ ಕರೆದು ತನ್ನಿರೆಂದು ಹೇಳಿದ ಮೇಲೆ ಆ ವ್ಯಕ್ತಿ ಎಲ್ಲಿಯೋ ಇದ್ದೇ ಇರಬೇಕೆಂದು ಅವರೆಲ್ಲರೂ ನಂಬಿದರು. ತಕ್ಷಣವೇ ಆ ಬಂಗಾರದ ಮನುಷ್ಯನನ್ನು ಕರೆ ತರಲು ಜನರನ್ನು ನಾನಾ ದಿಕ್ಕಿಗೆ ಕಳುಹಿಸಿದರು.
ಪಶ್ಚಿಮದ ಕಡೆಗೆ ಹೋದ ಹಲವಾರು ಜನರು ಒಂದು ವರ್ಷದ ನಂತರ ತಿರುಗಿ ಬಂದರು. ಮಹಾರಾಜನ ಕನಸಿನಲ್ಲಿ ಬಂದಿದ್ದ ವ್ಯಕ್ತಿಯ ಚಿತ್ರವನ್ನು ರೇಷ್ಮೆಯ ವಸ್ತ್ರದಲ್ಲಿ ಚಿತ್ರಿಸಿ ತಂದಿದ್ದರು. ಭರತ ಖಂಡದಲ್ಲೆಲ್ಲಾ ಈ ಮಹಾನುಭಾವ ಅತ್ಯಂತ ಜನಪ್ರಿಯನಂತೆ. ಸರೋವರದಲ್ಲಿ, ಪದ್ಮಗಳು ಅರಳಿರುವ ತಂಪುಹೊತ್ತಿನಲ್ಲಿ, ಪ್ರಶಾಂತನಾಗಿ ನೀರ ಮೇಲೆ ನಡೆದು ಬಂದನೆಂದರೆ ಆ ಮಹಾಮಹಿಮನೇ ಇರಬೇಕು ಎಂದು ಅವರೆಲ್ಲಾ ಹೇಳಿದರಂತೆ.
ಆಸ್ಥಾನದ ಮುಖ್ಯಸ್ಥರು ಅಂಜುತ್ತಲೇ ರೇಷ್ಮೆ ವಸ್ತ್ರದ ಮೇಲಿನ ಚಿತ್ರವನ್ನು ರಾಜನ ಕಣ್ಣಮುಂದೆ ಹಿಡಿದರು. ಪದ್ಮಾಸನ ಹಾಕಿ ಕುಳಿತ, ಮುಖದಲ್ಲಿ ಪ್ರಶಾಂತತೆ ನೆಲೆಸಿದ, ಯಾವ ಭಯವೂ ಇಲ್ಲದ ಹಸನ್ಮುಖದ ಗೌತಮಬುದ್ಧನ ಅಭಯಹಸ್ತದ ಚಿತ್ರವದು. ಮಹಾರಾಜ ಕೆಲಹೊತ್ತು ಅದನ್ನು ದಿಟ್ಟಿಸಿ ನೋಡಿದ. ಅನಂತರ ಮೈಯಲ್ಲಿ ಆವೇಶ ಬಂದಂತೆ “ಇವನೇ... ಇವನೇ ಆ ಮಹಾನುಭಾವ. ಏನೀತನ ಹೆಸರು?” ಎಂದು ಕೇಳಿದ.
“ತಥಾಗತ ಎಂದು ಅವನ ಶಿಷ್ಯರು ಕರೆಯುತ್ತಾರೆ ಮಹಾಪ್ರಭು” ಎಂದು ಮುಖ್ಯಸ್ಥರು ಹೇಳಿದರು.
“ಇನ್ನೂ ಬದುಕಿದ್ದಾನೆಯೆ?” ಎಂದು ಮಹಾರಾಜರು ಕೇಳಿದರು. ಆರು ಶತಮಾನಗಳ ಹಿಂದೆ ಬಾಳಿದ ವ್ಯಕ್ತಿ ಇಂದೂ ಬದುಕಿರಲು ಹೇಗೆ ಸಾಧ್ಯ? ಹಾಗಂತ ಅಶುಭ ನುಡಿದು ಮಹಾರಾಜರ ಸಿಟ್ಟಿಗೆ ಕಾರಣವಾಗುವುದಕ್ಕೆ ಯಾರೂ ಧೈರ್ಯ ವಹಿಸಲಿಲ್ಲ. ಹಿರಿಯ ಪಂಡಿತನೊಬ್ಬ ಜಾಣನಿದ್ದ. “ಅವನಿಗೆ ಸಾವೇ ಇಲ್ಲವೆಂದು ಹೇಳುತ್ತಾರೆ ಪ್ರಭು” ಎಂದು ಅಪ್ರಿಯವಲ್ಲದ ಅರ್ಧಸತ್ಯವನ್ನು ನುಡಿದ. ಆ ಮಾತು ಮಹಾರಾಜನಿಗೆ ಸಮಾಧಾನ ತಂದಿತು.
“ಹಾಗಿದ್ದರೆ ಆ ಮಹಾನುಭಾವವನ್ನು ನಮ್ಮ ರಾಜ್ಯಕ್ಕೆ ಕರೆತನ್ನಿ. ಅವನ ಪಾದಾರ್ಪಣೆಯಿಂದ ನಮ್ಮೆಲ್ಲರ ಅಶಾಂತಿ ದೂರವಾಗಿ, ಶಾಂತಿಯು ನಮ್ಮ ನಾಡಿನಲ್ಲಿ ನೆಲೆಸಲಿ” ಎಂದು ಸಮಾಧಾನದ ನಗೆ ಬೀರುತ್ತಾ ಎಲ್ಲರಿಗೂ ಅಪ್ಪಣೆ ಕೊಟ್ಟ. ರೇಷ್ಮೆ ಬಟ್ಟೆ ತರಲು ಪ್ರಾರಂಭವಾದ ವ್ಯಾಪಾರದ ಆ ಒರಟುದಾರಿಯಲ್ಲಿ ವ್ಯಾಪಾರಿಗಳಿಗೊಂದೇ ಅಲ್ಲ, ಬುದ್ಧನಿಗೂ ಆಹ್ವಾನ ಹೋಯಿತು. ವಸುಧೇಂದ್ರರ ಈ ರೇಷ್ಮೆ ಬಟ್ಟೆಯ ಕಾದಂಬರಿಯು ನಾಳೆ (ಭಾನುವಾರ) ಬಿಡುಗಡೆಯಾಗಲಿದೆ.