ವಿದ್ಯಾರ್ಥಿಗಳ ಪಾಲಕರಿಗೆ ವಿವಿಧ ಸ್ಪರ್ಧೆ

19BANNU1
Published on

ಬನ್ನೂರು: ಪಾಲಕರಿಗೂ ಶಾಲೆಗೂ ಅವಿನಾಭಾವ ಸಂಬಂಧವಿದ್ದು, ಮಕ್ಕಳ ಏಳಿಗೆಗೆ ಸಹಕರಿಸುವ ಉದ್ದೇಶದೊಂದಿಗೆ ವಿದ್ಯಾರ್ಥಿಗಳ ಪಾಲಕರಿಗೂ ಸ್ಪರ್ಧೆ ಏರ್ಪಡಿಸಿರುವುದು ಸಂತಸದ ವಿಷಯ ಎಂದು ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.


ಪಟ್ಟಣದ ಚಾಮನಹಳ್ಳಿಯಲ್ಲಿರುವ ಆದಿಚುಂಚನಗಿರಿ ಬಾಲಜಗತ್ ಶಿಕ್ಷಣ ಸಂಸ್ಥೆಯ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಪಾಲಕರ ಕ್ರೀಡಾಕೂಟ ಹಾಗೂ ಆಹಾರಮೇಳ ಉದ್ಘಾಟಿಸಿ ಮಾತನಾಡಿದರು.


ಮಕ್ಕಳ ಕಲಿಕೆ ನಿರಂತರವಾಗಿರಬೇಕೆಂದರೆ ಶಾಲೆ, ಶಿಕ್ಷಕರು ಹಾಗೂ ಪಾಲಕರ ನಡುವಿನ ಒಡನಾಟ ತೀರ ಅಗತ್ಯವಾಗಿರುತ್ತದೆ. ಇದೊಂದು ಸರಪಳಿಯಂತಿದ್ದು, ಒಂದು ಕೊಂಡಿ ಕಳಚಿದರೂ ಅದು ಮಕ್ಕಳ ಏಳಿಗೆಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಪಾಲಕರು ಶಾಲೆಗಳಿಗೆ ಆಗಿಂದಾಗ್ಗೆ ಭೇಟಿ ನೀಡಿ ತಮ್ಮ ಮಕ್ಕಳ ಪ್ರಗತಿಯನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಳ್ಳುವಂತೆ ಸಲಹೆ ನೀಡಿದರು.


ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ ಮಾತನಾಡಿ, ಇಂದು ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾಗುತ್ತಿರುವುದು ಸಂತಸವನ್ನುಂಟು ಮಾಡಿದೆ. ಎಲ್ಲ ಕಡೆಗಳಲ್ಲೂ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಮಕ್ಕಳಿಗಾಗಿ ಪಾಲಕರು ಆಸ್ತಿ ಮಾಡಿ ಇಡುವ ಅಗತ್ಯವಿಲ್ಲ. ಅವರಿಗೆ ಸುಶಿಕ್ಷಣ ನೀಡಿದರೆ ಅವರೇ ಮುಂದೆ ಆಸ್ತಿಯನ್ನು ಸಂಪಾದಿಸುವ ದಾರಿಯನ್ನು ಕಂಡುಕೊಳ್ಳುತ್ತಾರೆ ಎಂದರು.


ಶಾಲೆಯ ಮಕ್ಕಳು ವಿವಿಧ ಆಹಾರ ತಯಾರಿಸಿ ಸಾರ್ವಜನಿಕರ ಗಮನ ಸೆಳೆದರು. ಪಾಲಕರಿಗಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಆನಂದ್, ಪ್ರಾಂಶುಪಾಲ ಅಶ್ವಥ್, ಉಮಾಶಂಕರ್, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net