

ಮೇಷ: ಕಾರ್ತಿಕ ಮಾಸ ಪ್ರಾರಂಭ ಆಗಿ 4 ಕಾರ್ತಿಕ ಸೋಮವಾರ ಬಂದು ಶಿವ ಪೂಜೆ ಮಾಡಿದವನಿಗೆ ದೇವರೇ ದಾರಿಯನ್ನು ತೋರಿಸಿ ಬದುಕನ್ನು ತೋರಿಸುತ್ತಾನೆ. ಆಶ್ವೀಜ ಮಾಸದ ಅಮಾವಾಸ್ಯೆಯಿಂದ ಹಿಡಿದು ಮುಂದಿನ ಅಮಾವಾಸ್ಯೆವರೆಗೂ ಕೇದಾರೇಶ್ವರ ವ್ರತ ಓದಿ. ಚತುರ್ಥದಲ್ಲಿ ಗುರು ಇರುವುದರಿಂದ ಕೇದಾರೇಶ್ವರ ಪೂಜೆ ಹಾಗೂ ಸುಬ್ರಮಣ್ಯನನ್ನು ಪೂಜಿಸಿದರೆ ನಿಮ್ಮ ಪೂಜೆಗೆ ತಕ್ಕನಾದ ಪ್ರತಿಫಲ ಸಿಗುತ್ತದೆ.
ವೃಷಭ: ಕೃತಿಕಾ ರೋಹಿಣಿ ಮೃಗಶಿರಾ ನಕ್ಷತ್ರಕ್ಕೆ ಗುರು 3ರಲ್ಲಿ ಹೆಚ್ಚಿನ ಲಾಭ ತರುವುದರಲ್ಲಿ ಸಂದೇಹ ಬೇಡ. ದೈವಾಂಶಸಂಭೂತರಾಗಿ ದೇವರ ಧ್ಯಾನ, ಪುಣ್ಯ ಪುರುಷರ ದರ್ಶನ, ಪುಣ್ಯಾತ್ಮರ ಪಾದ ನಿಮ್ಮ ಮನೆಯಲ್ಲಿ ಕಾಲಿಟ್ಟು ಪುಣ್ಯದ ರಾಶಿ ಕೊಟ್ಟು ಹರಸುತ್ತಾರೆ. ಲಾಭಕ್ಕಿಂತ ಹೆಚ್ಚಾಗಿ ಧರ್ಮಕ್ಕೆ ಚ್ಯುತಿ ಬಾರದಂತೆ ಬಾಳನ್ನು ನಡೆಸಲು ಅವಕಾಶ ಕೊಟ್ಟಿರುತ್ತಾನೆ. ಅದನ್ನು ಸದುಪಯೋಗಪಡಿಸಿಕೊಳ್ಳಿ.
ಮಿಥುನ: ದ್ವಿತೀಯದಲ್ಲಿ ಗುರು ಡಿ. 5ರವರೆಗೆ ಇದ್ದು ಕುಟುಂಬ ಸೌಖ್ಯ, ವ್ಯವಹಾರದಲ್ಲಿ ನೆಮ್ಮದಿ ಕೊಡುವ ಕಾಲ. ಶನಿ ದಶಮದಲ್ಲಿ ಇದ್ದು ಗುರುವಿನ ಕಟಕ ರಾಶಿಯ ವಿಶೇಷ ಫಲವನ್ನು ನೀವು ಅನುಭವಿಸಬಹುದು. ಗುರು ಸೇವೆಯನ್ನು ಮಾಡಿ ಸುಖವನ್ನು ಹೊಂದಿರಿ.
ಕಟಕ: ರಾಶಿಯಲ್ಲಿ 12ರಲ್ಲಿ ಗುರು ಲಗ್ನಕ್ಕೆ ಬಂದು ಕೆಲಸ ತ್ವರಿತವಾಗಿ ಸಾಗದು. ಗಂಗೆಯನ್ನು ಶಿರದ ಮೇಲೆ ಹೊತ್ತ ಈಶ್ವರನನ್ನು ಪೂಜಿಸಿದರೆ ಸಾಕು, ನೀರಿನಂತೆ ನಿಮ್ಮನ್ನು ಶುದ್ಧವಾಗಿ ಇಟ್ಟು ಶುದ್ಧ ಅಶುದ್ಧ ಅರಿಯಲು ಜ್ಞಾನ ಕೊಟ್ಟು ಬೆಳಕನ್ನು, ಆರೋಗ್ಯವನ್ನು ಸುಖವನ್ನು ಕೊಡುತ್ತಾರೆ.
ಸಿಂಹ: ಈ ರಾಶಿಯಲ್ಲಿ ಹುಟ್ಟಿದವರು ಮತ್ತೊಬ್ಬರಿಗೆ ಏನನ್ನೂ ಮಾಡಲು ಮುಂದಾಗುವಂಥ ಶುದ್ಧ ಮನಸ್ಸು ಉಳ್ಳವರು. ಆದರೆ ನಿಮ್ಮ ಶತ್ರುಗಳು ಅದನ್ನು ಅರಿತು ನಿಮ್ಮನ್ನು ಗೌರವಿಸಿ ಬಾಳಬೇಕು. ಆದಿತ್ಯ ಆತ್ಮಕ ರುದ್ರನನ್ನು ಪ್ರಾರ್ಥನೆ ಮಾಡಿರಿ. ಸೂರ್ಯ ಅಷ್ಟೋತ್ತರ ಪಠಿಸಿ. ಜನೋಪಕಾರಿಯಾಗಿ ಕೆಲಸವನ್ನು ಮಾಡಿ. ಸುಖವಾಗಿ ಬಾಳುವ ಕಾಲ ಹತ್ತಿರದಲ್ಲೇ ಬರಲಿದೆ.
ಕನ್ಯಾ: ಏಕಾದಶದಲ್ಲಿ ಗುರು ಇದ್ದು ಶನಿಯು ವಕ್ರನಾಗಿ ಷಷ್ಠದಲ್ಲಿದ್ದಾನೆ. ಶನಿಯು ಸಪ್ತಮಕ್ಕೆ ಬರುವ ಮುಂಚೆ, ‘ಬಂದದ್ದು ಬರಲಿ, ಗೋವಿಂದನ ದಯೆ ಇರಲಿ’ ಎನ್ನುವಂತೆ ಲಾಭವೆಲ್ಲ ಜೇಬು ಸೇರಲಿ. ಕೊಟ್ಟ ಮಾತನ್ನು ಉಳಿಸಿ ಕೊಂಡು ಬಾಳಿರಿ. ಶನಿ ಮುಂದೆ ಸಪ್ತಮ ಅಷ್ಟಮ ಸ್ಥಾನಕ್ಕೆ ಬಂದಾಗ ಪರೀಕ್ಷೆಗೆ ಒಡ್ಡುತ್ತಾನೆ. ಶಿವಭಕ್ತರಾಗಿ ಬಾಳು ನಡೆಸಿದರೆ ಉತ್ತಮ ಫಲ ನೀಡುತ್ತಾನೆ.
ತುಲಾ: ಧರ್ಮಕ್ಕೆ ಚ್ಯುತಿ ಬಾರದಂತೆ ನ್ಯಾಯಕ್ಕೆ ತಲೆಬಾಗಿ ಬಾಳಿದರೆ ದೇವರು ಒಳ್ಳೆಯ ಅವಕಾಶಗಳನ್ನೇ ನೀಡುತ್ತಾನೆ. ಗ್ರಹಗಳ ಸಂಕೋಲೆ ಈ ರಾಶಿಯವರನ್ನು ಬಾಧಿಸಲು ಸಾಧ್ಯವಿಲ್ಲ. ಧರ್ಮಕ್ಕೆ ತಲೆಬಾಗಿ ನಡೆಯಿರಿ. ಗ್ರಹಗಳೇ ನಿಮ್ಮ ಭಾಗ್ಯವನ್ನು ಹೆಚ್ಚಿಸಿ ಕೈ ಹಿಡಿದು ನಡೆಸುತ್ತವೆ. ಮಕ್ಕಳಿಗೆ ಪ್ರೀತಿಯಿಂದ ಒಳ್ಳೆಯ ದಾರಿಯನ್ನು ತೋರುವ ಮಹಾ ಸಂಕಲ್ಪ ಮಾಡಿ. ನಿಮ್ಮ ಹೆಸರನ್ನು ಉಳಿಸುವವರು ನಿಮ್ಮ ಮಕ್ಕಳೇ. ನೀವೂ ಬೆಳೆದು ಮತ್ತೊಬ್ಬರನ್ನೂ ಬೆಳೆಸಿ. ದುರ್ಗೆಯನ್ನು ಸದಾ ಪ್ರಾರ್ಥಿಸಿ.
ವೃಶ್ಚಿಕ: ಜಿಪುಣನಾದವನು ಬಂಗಾರವನ್ನು ಕೊಡುವುದೂ ಇಲ್ಲ, ತಾನೂ ಬಳಸುವುದಿಲ್ಲ. ತನ್ನ ಜೀವನಶೈಲಿಯನ್ನು ಬದಲಾಯಿಸಿಕೊಳ್ಳುವುದೂ ಇಲ್ಲ. ದೇವರು ಕೊಟ್ಟದ್ದನ್ನು ಯಾವಾಗಲೂ ಸದುಪಯೋಗ ಮಾಡಿಕೊಳ್ಳದಿದ್ದರೆ ಒಳ್ಳೆಯ ಫಲ ಪಡೆಯಲು ಸಾಧ್ಯವಾಗುವುದಿಲ್ಲ. ಗುರು 9ರಲ್ಲಿ ಬಂದಿದ್ದು ನಿಮ್ಮ ಋಣ ಬಾಧೆಯನ್ನು ಸರಿಪಡಿಸಿ ಹಣದ ಹೊಳೆಯನ್ನು ಹರಿಸುತ್ತಾನೆ. ಎಚ್ಚರವಾಗಿ ಸಾಗಿ. ಬಂದ ದುಡ್ಡನ್ನು ಸದ್ವಿನಿಯೋಗ ಮಾಡಿಕೊಳ್ಳಿ. ಅದೇ ನಿಮ್ಮನ್ನು ಜೀವನದ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.
ಧನಸ್ಸು: ಗಿಡಗಳು ಸುಮ್ಮನಾದರೆ ಆಮ್ಲಜನಕವನ್ನು ಕೊಡುವವರು ಯಾರು? ಗಾಳಿ ಬೀಸದೆ ಮನುಷ್ಯನು ಬದುಕಲಾಗುವುದಿಲ್ಲ. ರಾಮನಾಮ ಶುದ್ಧ ಗಾಳಿಯನ್ನು ಯಾರ ಸಹಾಯವಿಲ್ಲದೆ ಅನುಭವಿಸಬಹುದು. ಕೋಪ ತಾಪಕ್ಕೆ ಎಡೆ ಕೊಡದೆ ಗುರುವಿನ ಸ್ಮರಣೆಯನ್ನು ಮಾಡಿ ಸದಾ ಸಕಾರಾತ್ಮಕ ಚಿಂತನೆ ಮಾಡಿರಿ. ಪುಣ್ಯ ಪುರುಷರ ದರ್ಶನ ಮಾಡಿರಿ. ಗುರುವಿನ ರಾಶಿಯಲ್ಲಿ ಹುಟ್ಟಿದ ನಿಮಗೆ ಆ ದೇವರೇ ನಿಮ್ಮ ಬೇಕು ಬೇಡಗಳನ್ನು ತೀರ್ವನಿಸಿ ಸತ್ಫಲವನ್ನೇ ನೀಡುತ್ತಾನೆ.
ಮಕರ: ಮಕರ ರಾಶಿಗೆ ಗುರು ಸಪ್ತಮದಲ್ಲಿ ಇದ್ದು ಇಷ್ಟಾರ್ಥಗಳು ಸಿದ್ಧಿಸುವ ಕಾಲ. ಮಕರ ರಾಶಿಯವರು ನಾಲ್ಕು ವಾರ ತಿಲತೈಲ ದಾನ ನೀಡಿದರೆ ಕಾರ್ಯಗಳು ಸಿದ್ಧಿಸುತ್ತವೆ. ಮಹಾದೇವನ ಸೃಷ್ಟಿಯಾದ ಶನಿಯ ಅನುಗ್ರಹವನ್ನು ಪಡೆದರೆ ಅವನೇ ನಿಮಗೆ ಶುಭವನ್ನು ತರುತ್ತಾನೆ.
ಕುಂಭ: ಶನಿಯು ಲೋಹಕ್ಕೆ ಸಂಬಂಧಪಟ್ಟ ಗ್ರಹ. ಆದರೆ ಅವನಿಗೆ ಬೆಳ್ಳಿ ಬಂಗಾರ ಬೇಕಿಲ್ಲ. ಕಬ್ಬಿಣ ಬೇಕಿಲ್ಲ. ನೀವು ಸಹಸ್ರ ವರಹ ದಾನ ಕೊಟ್ಟರೂ, ತಪ್ಪು ಮಾಡಿದರೆ ಅವನು ನಿಮ್ಮನ್ನು ಬಿಡನು. ಯಾರು ಸತ್ಯ ನ್ಯಾಯ ಧರ್ಮವನ್ನು ಕಾಪಾಡುತ್ತಾರೋ ಅಂಥವರಿಗೆ ಶನಿಯ ರಕ್ಷಣೆ ಸದಾ ಇರುತ್ತದೆ. ನೀವು ಪ್ರತಿನಿತ್ಯ ಶನಿ ಸ್ತೋತ್ರವನ್ನು ಪಠಿಸಿ ನೀಲಿ ಹೂವಿನಿಂದ ಪುಷ್ಪಾರ್ಚನೆಯನ್ನು ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ.
ಮೀನಾ: ‘ಬಾರಯ್ಯ ವೆಂಕಟೇಶಯ್ಯ ನಿನ್ನ ಪಾದವನ್ನು ತೋರಯ್ಯ ನನ್ನ ದೇಹಕ್ಕೆ ಚೈತನ್ಯವನ್ನು ತುಂಬಿ ನೀನು ಇರುವ ಸ್ಥಳವನ್ನು ನೋಡಲು ನನಗೆ ಜ್ಞಾನವನ್ನು ನೀಡಿ ನಾಲಿಗೆಯು ಸದಾ ನಿನ್ನ ಸ್ತುತಿಯಲ್ಲಿರಲು ನಿನ್ನ ಭಕ್ತರ ಸಂಗ ಸದಾ ಇರಲಿ ಎಂದು ಹರಸಯ್ಯ’. ಮೀನ ರಾಶಿಯವರಿಗೆ ವೆಂಕಟೇಶ್ವರನ ಅನುಗ್ರಹ ಬೇಕೇ ಬೇಕು. ಅವನ ದಿವ್ಯ ಪಾದ ದರ್ಶನ ಮಾಡಲೇಬೇಕು. ವೆಂಕಟೇಶ್ವರ ಅಷ್ಟೋತ್ತರವನ್ನು ಪಠಿಸಿ. ನಾರಾಯಣ ಸ್ತುತಿ ಓದಿದರೆ ನಿಮ್ಮ ಜೀವನದ ಸುಗಂಧವಾದ ಮಲ್ಲಿಗೆಯು ಅರಳುತ್ತದೆ. ಶುಭವಾಗಲಿ.