

ತುಮಕೂರು: ವಂದೇ ಭಾರತ್ ರೈಲು ಇನ್ಮುಂದೆ ತುಮಕೂರಿನಲ್ಲಿ ನಿಲುಗಡೆಯಾಗಲಿದೆ. ಆ.23 ರಂದು ಸಂಜೆ 5.30ಕ್ಕೆ ತುಮಕೂರು ರೈಲ್ವೇ ನಿಲ್ದಾಣದಲ್ಲಿ ರೈಲು ನಿಲುಗಡೆ ಕಾರ್ಯಕ್ರಮ ಇರಲಿದೆ.
ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ವಂದೇ ಭಾರತ್ ರೈಲು ನಿಲುಗಡೆ ನಿಶಾನೆ ತೋರುವರು. ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರು ಉಪಸ್ಥಿತರಿರುವರು.
ಧಾರವಾಡದಿಂದ ಬೆಂಗಳೂರು ನಡುವೆ ಸಂಚರಿಸಿರುವ ವಂದೇ ಭಾರತ್ ರೈಲು ಮಧ್ಯಾಹ್ನ 1.15ಕ್ಕೆ ಹೊರಡಲಿದ್ದು ಸಂಜೆ 7.45ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಬೆಳಗ್ಗೆ 5.45ಕ್ಕೆ ಹೊರಡಲಿದ್ದು ಮಧ್ಯಾಹ್ನ 12.10ಕ್ಕೆ ಧಾರವಾಡ ತಲುಪಲಿದೆ. 489 ಕಿ.ಮೀ., ದೂರವನ್ನು ಕೇವಲ 6 ಗಂಟೆ 25 ನಿಮಿಷದಲ್ಲಿ ಕ್ರಮಿಸಲಿರುವ ವಂದೇ ಭಾರತ್ ಬೆಂಗಳೂರು ಬಿಟ್ಟ ನಂತರ ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಮಾತ್ರ ನಿಲುಗಡೆಯಾಗುತ್ತಿತ್ತು.
ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರತಿನಿಧಿಸುವ ತುಮಕೂರು ಲೋಕಸಭಾ ಕ್ಷೇತ್ರದ ಜಿಲ್ಲಾಕೇಂದ್ರ ತುಮಕೂರಿನಲ್ಲಿ ಇನ್ಮುಂದೆ ವಂದೇ ಭಾರತ್ ನಿಲುಗಡೆ ಆಗಲಿದೆ.