

ನಂಜನಗೂಡು: ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕಾದರೆ ಮೌಲ್ಯಯುತ ಶಿಕ್ಷಣ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಕಲಿಕೆಯತ್ತ ಹೆಚ್ಚು ಗಮನಹರಿಸಬೇಕು ಎಂದು ಮೈಸೂರು ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಮರಿಸ್ವಾಮಿ ಕರೆ ನೀಡಿದರು.
ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉತ್ತುಂಗ ಸಭಾಂಗಣದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು. ತಾವು ಕಲಿತ ಜ್ಞಾನದ ಮೂಲಕ ಬೇರೆಯವರಿಗೆ ದಾರಿದೀಪವಾಗಬೇಕು ಎಂದರು.
ಶಾಸಕ ದರ್ಶನ್ ಧ್ರುವನಾರಾಯಣ್ ಅವರ ನಿರ್ದೇಶನದಂತೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಸಿಇಟಿ ಹಾಗೂ ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ ಹಾಗೂ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪ್ರಾಂಶುಪಾಲ ಎಸ್.ಎನ್.ಚಂದ್ರಶೇಖರಬಾಬು ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಉತ್ತುಂಗ ಸಾಫ್ಟ್‌ವೇರ್ ಸಂಸ್ಥೆಯ ಕುಂಬ್ರಳ್ಳಿ ಕೃಷ್ಣನ್ ಅವರು ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ ಉತ್ತುಂಗ ಸಭಾಂಗಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಮಾಡಲಾಯಿತು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಕಾಲೇಜಿಗೆ ಕೊಡುಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕುರಟ್ಟಿ ಮಹೇಶ್, ನಿವೃತ್ತ ಉಪನ್ಯಾಸಕ ಎಚ್.ರಾಜು, ಉತ್ತುಂಗ ಟೆಕ್ನಾಲಜಿ ಪ್ರೈ.ಲಿ.ನ ವ್ಯವಸ್ಥಾಪಕಿ ಸವಿತಾ, ಶಾಲಾ ಅಭಿವೃದ್ದಿ ಸಮಿತಿಯ ಮಮತಾ, ದೊರೆಸ್ವಾಮಿ, ರಾಜೇಶ್, ಕೆ.ಪಿ.ನಾಗರಾಜು, ಹೇಮಾವತಿ, ಹಿರಿಯ ಉಪನ್ಯಾಸಕ ವಸಂತಕುಮಾರ್, ನಗರಸಭಾ ಸದಸ್ಯ ಮಹೇಶ್ ಅತ್ತಿಖಾನೆ, ಮಂಗಳಮ್ಮ, ಹಿರಿಯ ವಕೀಲ ಮುರಳೀಧರ್, ನಂಜಮ್ಮಣ್ಣಿ ಗುರುಮಲ್ಲಪ್ಪ, ಕಳಲೆ ರಾಚನಾಯಕ ಇತರರು ಇದ್ದರು.