ಸದ್ಯದಲ್ಲೇ ಈ ಮಹಾನಗರದಲ್ಲಿ ಕರೊನಾ ಲಸಿಕಾ ಅಭಿಯಾನ ಕಂಪ್ಲೀಟ್​!

vaccine1
Published on

ಹೈದರಾಬಾದ್​: ತೆಲಂಗಾಣದ ರಾಜಧಾನಿ ಹೈದರಾಬಾದ್​ನಲ್ಲಿ ಇನ್ನು 10 ರಿಂದ 15 ದಿನಗಳಲ್ಲಿ ಶೇ. 100 ರಷ್ಟು ಕರೊನಾ ಲಸಿಕಾಕರಣ ಸಾಧಿಸಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಈ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್​ ತಿಳಿಸಿದ್ದಾರೆ.

ಈ ಸಂಬಂಧವಾಗಿ ನಿನ್ನೆ ಹೈದರಾಬಾದ್​ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಸೋಮೇಶ್ ಕುಮಾರ್,​ ಹೈದರಾಬಾದ್​ ನಗರಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಮೊಬೈಲ್​ ಲಸಿಕಾ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದರು. ಆರೋಗ್ಯ ಇಲಾಖೆ ಮತ್ತು ಪಾಲಿಕೆ ಸಿಬ್ಬಂದಿಗಳಿಗೆ ಬಡಾವಣೆವಾರು ಮನೆಯಿಂದ ಮನೆಗೆ ಹೋಗಿ ಲಸಿಕೆಗೆ ಅರ್ಹರಾಗಿದ್ದು ಈವರೆಗೆ ಪಡೆದಿಲ್ಲದ 18 ವರ್ಷ ಮೇಲ್ಪಟ್ಟ ನಾಗರೀಕರನ್ನು ಗುರುತಿಸಿ, ಲಸಿಕೆ ನೀಡಬೇಕೆಂದು ಸೂಚಿಸಿದರು.

ಗ್ರೇಟರ್​ ಹೈದರಾಬಾದ್​ ಮುನಿಸಿಪಲ್ ಕಾರ್ಪೊರೇಷನ್​ನಿಂದ ಕೈಗೊಳ್ಳಲಾಗಿರುವ ಮೊಬೈಲ್​ ಲಸಿಕಾ ಅಭಿಯಾನದಡಿ 175 ಮೊಬೈಲ್​ ಲಸಿಕಾಕರಣ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಇವು ತಂತಮ್ಮ ಕ್ಷೇತ್ರಗಳ ಅರ್ಹ ವಯೋಮಾನದ ಜನರಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ನಿಯಮಿತವಾಗಿ ಲಸಿಕೆ ನೀಡುವ ಕೆಲಸ ಮಾಡುತ್ತಿವೆ. ಇದಲ್ಲದೆ ಎಂದಿನ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಲಸಿಕಾಕರಣ ಭರದಿಂದ ಸಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net