ಡಿ.28ರಿಂದ ನಾಲ್ಕು ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಡ್ರೖೆ ರನ್; ಆಯ್ದ ಎರಡು ಜಿಲ್ಲೆಗಳಲ್ಲಿ ಪ್ರಕ್ರಿಯೆ

Nation Flyer
ನೋಯ್ಡಾದ ಆಸ್ಪತ್ರೆಯೊಂದರಲ್ಲಿ ಕರೊನಾ ಸೋಂಕಿತ ಮಹಿಳೆಗೆ ಉಡುಗೊರೆ ಕೊಟ್ಟ ಸಾಂತಾಕ್ಲಾಸ್.
Published on

ನವದೆಹಲಿ: ಕರೊನಾ ಲಸಿಕೆಯ ತುರ್ತು ಬಳಕೆಗೆ ಶೀಘ್ರದಲ್ಲೇ ಅನುಮತಿ ಸಿಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಕ್ಸಿನೇಷನ್ ಪ್ರಕ್ರಿಯಲ್ಲಿ ಯಾವುದೇ ಲೋಪವಾಗದಂತೆ ತಡೆಯಲು ಎರಡು ದಿನಗಳ ಕಾಲ ವ್ಯಾಕ್ಸಿನೇಷನ್​ನ ‘ಡ್ರೖೆ ರನ್’ ನಡೆಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ಪಂಜಾಬ್, ಗುಜರಾತ್, ಅಸ್ಸಾಂ ಮತ್ತು ಆಂಧ್ರಪ್ರದೇಶಗಳಲ್ಲಿ ಡಿಸೆಂಬರ್ 28 ಮತ್ತು 29ರಂದು ಈ ಪ್ರಕ್ರಿಯೆ ನಡೆಯಲಿದೆ. ಪ್ರತಿ ರಾಜ್ಯದ 2 ಜಿಲ್ಲೆಗಳ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಭವನ, ಸಾರ್ವಜನಿಕ ಆರೋಗ್ಯ ಕೇಂದ್ರಗಳು, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವ್ಯವಸ್ಥೆ ಮತ್ತು ಖಾಸಗಿ ಆಸ್ಪತ್ರೆಗಳ ಸೌಲಭ್ಯಗಳು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿವೆ.

ಲಸಿಕೆಗಳನ್ನು ಕೋಲ್ಡ್ ಸ್ಟೋರೇಜ್​ಗಳ ಮೂಲಕ ನಿಗದಿಪಡಿಸಲಾಗಿರುವ ಕೇಂದ್ರಗಳಿಗೆ ಸರಬರಾಜು ಮಾಡಿ, ಬಳಿಕ ಕೋವಿನ್ ಅಪ್ಲಿಕೇಷನ್​ನಲ್ಲಿ ನೋಂದಾಯಿಸಿಕೊಂಡಿರುವವರಿಗೆ ನಿಯಮಗಳ ಪ್ರಕಾರ ಲಸಿಕೆಯ ಡೋಸ್ ನೀಡುವವರೆಗಿನ ಸಂಪೂರ್ಣ ಪ್ರಕ್ರಿಯೆ ತಾಲೀಮಿನಲ್ಲಿ ನಡೆಯಲಿದೆ. ಈ ಮೂಲಕ ದೇಶಾದ್ಯಂತ ನಡೆಸಲಾಗುವ ಬೃಹತ್ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳನ್ನು ಪತ್ತೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗಾಗಿ ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವೈದ್ಯಕೀಯ ಅಧಿಕಾರಿಗಳು, ವ್ಯಾಕ್ಸಿನೇಟರ್​ಗಳು, ಕೋಲ್ಡ್ ಚೈನ್ ನಿರ್ವಾಹಕರು, ಮೇಲ್ವಿಚಾರಕರು, ಡೇಟಾ ವ್ಯವಸ್ಥಾಪಕರು ಮತ್ತು ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತರು ಸೇರಿ 7 ಸಾವಿರ ಮಂದಿಗೆ 2,360 ತರಗತಿಗಳನ್ನು ನಡೆಸಿ ತರಬೇತಿ ನೀಡಲಾಗಿದೆ.

ಕೊವ್ಯಾಕ್ಸಿನ್ ಗಮನಾರ್ಹ ಸಾಧನೆ

ಭಾರತ್ ಬಯೋಟೆಕ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ಗಮನಾರ್ಹ ಸಾಧನೆ ಮಾಡಿದ್ದು, ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೇಳಿದೆ. ಲಸಿಕೆಯ ಈವರೆಗಿನ ಪ್ರಯೋಗಗಳ ದತ್ತಾಂಶವು ಪ್ರಭಾವಶಾಲಿ ಮತ್ತು ಸುರಕ್ಷಿತ ಎಂಬುದನ್ನು ತೋರಿಸಿದೆ ಎಂದು ಐಸಿಎಂಆರ್ ಟ್ವೀಟ್​ನಲ್ಲಿ ತಿಳಿಸಿದೆ. ದೇಶದ 22 ಕಡೆಗಳಲ್ಲಿ ಸದ್ಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

ಬ್ರಿಟನ್​ನಿಂದ ಬಂದ 6 ಸಾವಿರ ಜನರ ಪತ್ತೆ

ಬ್ರಿಟನ್​ನಲ್ಲಿನ ರೂಪಾಂತರಿ ವೈರಸ್ ಪಸರಿಸುವಿಕೆ ಹೆಚ್ಚು ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳು ನವೆಂಬರ್ 25ರಿಂದ ಡಿಸೆಂಬರ್ 23ರನಡುವೆ ಬ್ರಿಟನ್​ನಿಂದ ಭಾರತದಕ್ಕೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಮಾಡುತ್ತಿವೆ. ಈವರೆಗೆ ಸುಮಾರು 6 ಸಾವಿರ ಮಂದಿಯನ್ನು ಪತ್ತೆ ಮಾಡಲಾಗಿದ್ದು, ಅವರಲ್ಲಿ ರೋಗಲಕ್ಷಣ ಹೊಂದಿರುವ ಮತ್ತು ಶಂಕಿತರನ್ನು ಪ್ರತ್ಯೇಕವಾಗಿರಿಸಲಾಗಿದೆ. ತಮಿಳುನಾಡಿನಲ್ಲಿ 2,724, ಕೇರಳದಲ್ಲಿ 2,116, ಕರ್ನಾಟಕದಲ್ಲಿ 2,127, ತೆಲಂಗಾಣದಲ್ಲಿ 1,200 ಹಾಗೂ ಆಂಧ್ರಪ್ರದೇಶದಲ್ಲಿ 68 ಮಂದಿಯನ್ನು ಪತ್ತೆ ಮಾಡಲಾಗಿದೆ. ಇತ್ತೀಚೆಗೆ ಬಂದ ವಿಮಾನಗಳಲ್ಲಿನ ಎಲ್ಲ ಪ್ರಯಾಣಿಕರಲ್ಲಿ ಪಾಸಿಟಿವ್ ವರದಿ ಬಂದವರನ್ನು ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ ರೂಪಾಂತರಿ ಕರೊನಾ ವೈರಸ್ ತಗುಲಿದೆಯೇ ಎಂದು ತಿಳಿಯಲು ಮಾದರಿಗಳನ್ನು ಉನ್ನತ ಪರೀಕ್ಷೆಗೆ ರವಾನಿಸಲಾಗಿದೆ.

ಲಸಿಕೆ ಮಾಹಿತಿ ಮೇಲೆ ಹ್ಯಾಕರ್​ಗಳ ಕಣ್ಣು

ಫೈಜರ್, ಸ್ಪುಟ್ನಿಕ್, ಬಯೋಟೆಕ್ ಸೇರಿದಂತೆ ಕರೊನಾ ವಿರುದ್ಧ ಲಸಿಕೆ ತಯಾರಿಸುತ್ತಿರುವ ಹಲವು ಕಂಪನಿಗಳನ್ನು ಸೈಬರ್ ವಂಚಕರು ಗುರಿಯಾಗಿಸಿಕೊಂಡಿದ್ದು, ಲಸಿಕೆ ತಯಾರಿಕೆಯ ಮಾಹಿತಿ ಕದ್ದು, ನಕಲಿ ಲಸಿಕೆ ತಯಾರಿಸಲು ಯತ್ನಿಸುತ್ತಿದ್ದಾರೆ. ಜತೆಗೆ ಒಂದು ಕಂಪನಿಯ ಮಾಹಿತಿಯನ್ನು ಮತ್ತೊಂದು ಕಂಪನಿಗೆ ಮಾರುವ ಯೋಜನೆ ಹೊಂದಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಭಾರತವೊಂದರಲ್ಲಿ ಲಸಿಕೆ ಅಭಿವೃದ್ಧಿ ಪಡಿಸುತ್ತಿರುವ ಕಂಪನಿಗಳ ಮೇಲೆ 80 ಲಕ್ಷಕ್ಕೂ ಅಧಿಕ ಬಾರಿ ಸೈಬರ್ ದಾಳಿ ಪ್ರಯತ್ನಗಳು ನಡೆದಿವೆ ಎಂದು ತಿಳಿದುಬಂದಿದೆ.

  • ಕರೊನಾದ ಹೊಸ ಮಾರ್ಗಸೂಚಿಗಳು ಹಾಗೂ ಮಾಹಿತಿಗಳನ್ನು ನೀಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಹೊಸ ಅಪ್ಲಿಕೇಷನ್​ವೊಂದನ್ನು ಪ್ರಾರಂಭಿಸಿದೆ.
  • ಬ್ರಿಟನ್​ನಿಂದ ಬರುವ ಪ್ರಯಾಣಿಕರು ಕರೊನಾ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ಅಮೆರಿಕ ಹೇಳಿದೆ.
  • ಬ್ರಿಟನ್​ನಲ್ಲಿನ ರೂಪಾಂತರಿ ವೈರಸ್​ಗಿಂತ ದಕ್ಷಿಣ ಆಫ್ರಿಕಾದಲ್ಲಿನ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ ಎಂಬ ವರದಿಗಳನ್ನು ದಕ್ಷಿಣ ಆಫ್ರಿಕಾ ಅಧಿಕಾರಿಗಳು ಅಲ್ಲಗಳೆದಿದ್ದಾರೆ.
  • ಕರೊನಾ ಸೋಂಕು ಪಸರಿಸುವಿಕೆ ತಡೆಗಟ್ಟಲು ಸೌದಿ ಅರೆಬಿಯಾ ಮತ್ತು ಕುವೈತ್ ತಮ್ಮ ಗಡಿಗಳನ್ನು ಮುಚ್ಚಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 300 ಭಾರತೀಯರಿಗೆ ಯುಎಇ ಉಚಿತ ವಸತಿ ವ್ಯವಸ್ಥೆ ಕಲ್ಪಿಸಿದೆ.
  • ಚೀನಾದ ಸಿನೀವ್ಯಾಕ್ ಲಸಿಕೆಯನ್ನು ಟರ್ಕಿ ಶೀಘ್ರದಲ್ಲೇ ಬಳಕೆ ಮಾಡಲಿದೆ. ಲಸಿಕೆಗಳ ಮೊದಲ ಸರಕು ಟರ್ಕಿಗೆ ಶೀಘ್ರ ರವಾನೆಯಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net