

ಚಾಮರಾಜನಗರ: ವಿ. ಸೋಮಣ್ಣ ಯಾರು ಎಂದು ಕೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವತಃ ಸೋಮಣ್ಣ ಅವರೇ ಹಳೆಯ ಘಟನೆಗಳನ್ನು ನೆನಪು ಮಾಡಿ ತಿರುಗೇಟು ನೀಡಿದ್ದಾರೆ.
ಪ್ಯಾಂಟ್ ಹರಿದು ಹಾಕಿದ್ದರು
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ. ಸೋಮಣ್ಣ, 2006ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೋಸ್ಕರ ನಾನು ಒದೆ ತಿಂದಿದ್ದೇನೆ. ಬರಿ ಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ. ಅಂದು ನನ್ನ ಕಾರಿನ ಗಾಜನ್ನು ಒಡೆದಿದ್ದರು ಮತ್ತು ಪ್ಯಾಂಟ್ ಹರಿದು ಹಾಕಿದ್ದರು. ಅಂದು ನನ್ನ ಸಮಾಜವನ್ನು ಎದುರು ಹಾಕಿಕೊಂಡು, ಅವರಿಗೋಸ್ಕರ ಕೆಲಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೆಯಲ್ಲಿ ಇಲ್ಲ ಎಂದು ಹಳೆಯ ಘಟನೆಗಳನ್ನು ಕೆದಕಿ ತಿರುಗೇಟು ನೀಡಿದರು.
ಅವರು ಕೂಡ ಅಭ್ಯರ್ಥಿ
ಸಿದ್ದರಾಮಯ್ಯ ಅವರನ್ನು ನಾನು ಸಾಹೇಬ್ರೆ ಎಂದು ಕರೆಯುತ್ತೇನೆ. ಆದರೆ, ಅವರು ನನ್ನನ್ನು ಏಕ ವಚನದಲ್ಲಿ ಮಾತನಾಡುತ್ತಾರೆ. ಇದೆ ನನಗು ಮತ್ತು ಅವರಿಗು ಇರುವ ವ್ಯತ್ಯಾಸ. ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ, ನಾನು ಮಂತ್ರಿನೂ ಅಲ್ಲ. ನಾನು ಅಭ್ಯರ್ಥಿ ಮತ್ತು ಅವರು ಕೂಡ ಅಭ್ಯರ್ಥಿ ಎಂದರು.
ವಿಧಿ ನಿಯಮ
ನಾನು ಅವರನ್ನು ಮುತ್ಸದ್ದಿ ನಾಯಕ ಎಂದು ಭಾವಿಸಿದ್ದೆ. ಅವನ್ಯಾರು, ಇವನ್ಯಾರು ಅಂತಾ ಕೇಳುತ್ತಾರೆ. ಈ ರೀತಿಯ ಡೈಲಾಗ್ ಅನ್ನು ಕಡಿಮೆ ಮಾಡಿದರೆ ಅವರಿಗೆ ಒಳ್ಳೆಯದು. ರಾಜಕೀಯದಲ್ಲಿ ತಾಳ್ಮೆ ಮುಖ್ಯ. ನಾನು ವರುಣಾದಲ್ಲಿ ಸ್ಪರ್ಧೆ ಮಾಡುತ್ತಿರುವುದು ವಿಧಿ ನಿಯಮ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)