ಅಕ್ರಮ ಮದರಸಾ ಧ್ವಂಸ: 60ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡ ಬೆನ್ನಲ್ಲೇ ಕರ್ಫ್ಯೂ ಜಾರಿ!

Untitled design (44)
Published on

ಉತ್ತರಾಖಂಡ: ಅಧಿಕಾರಿಗಳು ಅಕ್ರಮ ಮದರಸಾವನ್ನು ಧ್ವಂಸಗೊಳಿಸಿದ ಕೂಡಲೇ ನಗರ ಪ್ರದೇಶದಲ್ಲಿ ತೀವ್ರ ಹಿಂಸಾಚಾರ ಭುಗಿಲೆದ್ದಿದ್ದು, ಸ್ಥಳೀಯರ ಗುಂಪೊಂದು ಪೊಲೀಸ್‌ ಅಧಿಕಾರಿಗಳ ಮೇಲೆ ಕಲ್ಲು ತೂರಿದ್ದಲ್ಲದೆ, ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ವರದಿಯಾಗಿದೆ. ಗಲಭೆ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಇದೀಗ ನಗರದ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಕಾನೂನುಬಾಹಿರವಾಗಿ ನಿರ್ಮಿಸಿದ ಮದರಸಾವನ್ನು ಕೆಡವಿದ್ದಕ್ಕಾಗಿ ಸ್ಥಳೀಯ ನಿವಾಸಿಗಳು ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲುಗಳನ್ನು ತೂರಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯದ ವರದಿಯ ಪ್ರಕಾರ, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ತೀವ್ರವಾಗುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಟ್ಟುನಿಟ್ಟಿನ ಕರ್ಫ್ಯೂ ವಿಧಿಸಲಾಗಿದೆ.

ನಗರದ ಬನ್‌ಭೂಲ್‌ಪುರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾದ ಸುಮಾರು 60 ಜನರಲ್ಲಿ ಹೆಚ್ಚಿನವರು ಸ್ಥಳೀಯ ಮದರಸಾವನ್ನು ಧ್ವಂಸಗೊಳಿಸುವಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿ ಮತ್ತು ಪುರಸಭೆಯ ಕಾರ್ಮಿಕರು ಎಂದು ವರದಿ ತಿಳಿಸಿದೆ.

ಘಟನೆ ಬಗ್ಗೆ ಮಾತನಾಡಿದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್ ಮೇನಾ, "ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಮದರಸಾಕ್ಕೆ ಈ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಕೆಡವಲು ತಂಡ ಬಂದಾಗ ಪೊಲೀಸರ ಬೆಂಗಾವಲಿನಲ್ಲಿ ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಅದನ್ನು ವಿರೋಧಿಸಿದರು. ಬುಲ್ಡೋಜರ್ ಮದರಸಾವನ್ನು ಧ್ವಂಸಗೊಳಿಸುತ್ತಿದ್ದಂತೆ, ಗುಂಪುಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳಿಗೆ ಬೆಂಕಿ ಹಚ್ಚಿದರು" ಎಂದು ಹೇಳಿದರು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net