ಉತ್ತರಾ ಮರ್ಡರ್ ಕೇಸ್​: ಹಾವು ಕಚ್ಚಿಸಿ ಕೊಲೆ ಮಾಡಿದ್ದೇಕೆಂದು ಬಾಯ್ಬಿಟ್ಟ ಪತಿ

Uttara snake bite death case 21 MAY 20
Published on

ಕೊಲ್ಲಂ: ದಿನೇದಿನೆ ಕುತೂಹಲ ಕೆರಳಿಸುವ ರೀತಿಯ ತಿರುವು ಪಡೆಯುತ್ತಿದ್ದ ಉತ್ತರಾ ಮರ್ಡರ್ ಕೇಸ್​ನಲ್ಲಿ ಆಕೆಯ ಪತಿ ಸೂರಜ್​ ಆರೋಪಿಯಾಗಿ ಪೊಲೀಸ್ ಕಸ್ಟಡಿಗೆ ಸೇರಿದ್ದಾನೆ. ಹತ್ಯೆ ಕುರಿತು ಸೂರಜ್​ ಹೇಳಿಕೆ ನೀಡಿದ್ದು ಕೊಲೆ ನಡೆಸುವುದಕ್ಕೆ ಪ್ರೇರಣೆಯಾಗಿದ್ದೇನು ಎಂಬಿತ್ಯಾದಿ ವಿವರಗಳನ್ನು ಬಹಿರಂಗಪಡಿಸಿದ್ದಾನೆ. ಪತ್ನಿಯ ಸಾವನ್ನು ಹಾವು ಕಚ್ಚಿದ್ದರಿಂದ ಆದ ಸಹಜ ಸಾವು ಎಂಬಂತೆ ಬಿಂಬಿಸುವುದಕ್ಕೆ ಪ್ರಯತ್ನಿಸಿದ್ದ ಸೂರಜ್​ನ ಹೇಳಿಕೆ ಇದೀಗ ಪತ್ನಿ ಮನೆಯವರ ಕಡೆಗೆ ನೋಡುವಂತೆ ಮಾಡಿದೆ. ಆತ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಅಂಶಗಳು ಬಹಿರಂಗವಾಗಿದ್ದು ಕೊಲೆ ನಡೆಸಿದ್ದಕ್ಕೆ ಕಾರಣವಾದ ಅಂಶವೂ ಬೆಳಕಿಗೆ ಬಂದಿದೆ.

ಉತ್ತರಾಳನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಶೋಷಿಸಿದ್ದಾಗಿ ತಪ್ಪೊಪ್ಪಿಕೊಂಡಿರುವ ಸೂರಜ್​, ಪತ್ನಿಯ ತವರು ಮನೆಯವರು ಆಕೆಗೆ ವಿಚ್ಚೇಧನ ನೀಡುವಂತೆ ಒತ್ತಡ ಹೇರಿದ್ದರು. ಈ ವರ್ಷ ಆರಂಭದಲ್ಲಿ ಜನವರಿಯಲ್ಲಿ ಈ ರೀತಿ ಒತ್ತಡ ಅವರ ಕಡೆಯಿಂದ ಬಂದಿತ್ತು. ವಿಚ್ಚೇಧನ ನೀಡಿದರೆ ಅವರು ವರದಕ್ಷಿಣೆಯಾಗಿ ನೀಡಿದ ಹಣ, ಚಿನ್ನಾಭರಣಗಳನ್ನು ಹಿಂದಿರುಗಿಸಬೇಕಾದೀತು ಎಂಬ ಆಲೋಚನೆಯೇ ನನ್ನ ನೆಮ್ಮದಿಯನ್ನು ಹಾಳುಮಾಡಿತು. ಹೀಗಾಗಿ ರಾಜಿ ಸಂಧಾನದ ನಾಟಕವಾಡಿದೆ. ನಂತರ ಆಕೆಯ ಹತ್ಯೆಗೆ ಸ್ಕೆಚ್​ ರೂಪಿಸಿದೆ. ಇದರಂತೆ, ಅಡೂರಿನಲ್ಲಿರುವ ನನ್ನ ಮನೆಯಲ್ಲೇ ಹಾವು ಕಡಿತವಾಗುವಂತೆ ಮಾಡಿದೆ. ಅಲ್ಲಿ ಆಕೆ ಬಚಾವ್ ಆದಳು. ಆಕೆಯನ್ನು ಪಾಲಕರು ತಮ್ಮೊಂದಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಪ್ರಾಣ ಉಳಿಸಿದರು. ರಾಜಿ ಸಂಧಾನದ ಬಳಿಕ ಆಕೆಯನ್ನು ಅಲ್ಲಿಂದ ಕರೆತರುವ ನೆಪದಲ್ಲಿ ಅಂದು ಅಲ್ಲಿ ಉಳಿದುಕೊಂಡಿದ್ದೆ. ಹಾವಾಡಿಗನ ಮೂಲಕ ಹಾವು ತರಿಸಿ ಹತ್ಯೆಗೆ ಸ್ಕೆಚ್ ರೂಪಿಸಿದೆ. ಇದು ಯಶಸ್ವಿಯಾಯಿತು.

ಇನ್ನು ಚಿನ್ನಾಭರಣವನ್ನು ಅವರ ಪಾಲಕರಿಗೆ ಕೊಡಬೇಕಾದ್ದಿಲ್ಲ. ಮಗು ನನ್ನ ಜತೆಗೇ ಇರುತ್ತದೆ ಎಂಬಿತ್ಯಾದಿ ಆಲೋಚನೆ ನನ್ನದಾಗಿತ್ತು. ಅಲ್ಲದೆ, ಮಗುವಿನ ಪಾಲನೆಗೆ ಬೇಕಾಗಿ ಇನ್ನಷ್ಟು ಹಣವನ್ನು ಆ ಕುಟುಂಬದವರಿಗೆ ಕೇಳಿ ಪಡೆಯಬಹುದೆಂಬ ಆಲೋಚನೆಯೂ ನನ್ನಲ್ಲಿತ್ತು ಎಂದು ಸೂರಜ್​ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net